

ಕೊಪ್ಪಳ: ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಪೊಲೀಸ್ ಇಲಾಖೆ ನಗರಸಭೆ ಅಧಿಕಾರಿಗಳು ಸೆ.25ರಂದು ನಗರದ ವಿವಿಧೆಡೆ ದಾಳಿ ನಡೆಸಿ 21 ಪ್ರಕರಣಗಳನ್ನು ದಾಖಲಿಸಿ ಬಿಸಿ ಮುಟ್ಟಿಸಿದರು.
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ "ತಂಬಾಕು ಮುಕ್ತ ಯುವ ಅಭಿಯಾನ 2.0 ಅಂಗವಾಗಿ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ನೀಡಿದ ಆದೇಶದ ಮೇರೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಿವಿಧೆಡೆ ಕಾರ್ಯಾಚರಣೆ ನಡೆಸಿದರು.
ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆ, ಆರ್.ಟಿ.ಓ ಕಚೇರಿ ಸೇರಿದಂತೆ ವಿವಿಧೆಡೆ ಸಂಚರಿಸಿದ ಅಧಿಕಾರಿಗಳು ತಂಬಾಕು ಅಥವಾ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ಕೊಟ್ಪಾ -2003 ಕಾಯ್ದೆಯ ಸೆಕ್ಷನ್:4ರಡಿಯಲ್ಲಿ 21 ಪ್ರಕರಣಗಳನ್ನು ದಾಖಲಿಸಿ 3,600 ರೂ ದಂಡ ಹಾಕಿದರು.
ಜಿಲ್ಲಾ ಸಲಹೆಗಾರರಾದ ಡಾ.ನಾಗೇಂದ್ರ, ಸಮಾಜ ಕಾರ್ಯಕರ್ತರಾದ ಸರಸ್ವತಿ, ಆಪ್ತ ಸಮಾಲೋಚಕರಾದ ಶಾಂತಾ ಕಟ್ಟಿಮನಿ ಸೇರಿದಂತೆ ಇತರರು ಇದ್ದರು.