ಕೋಟಿ ಸಸಿ ಆಂದೋಲನಕ್ಕೆ ಭರ್ಜರಿ ಸ್ಪಂದನೆ

koti sasi andolana
Published on

ವಾರದಲ್ಲಿ 1.50 ಲಕ್ಷಿ ಸಸಿಗಳ ನಾಟಿ

6 ಲಕ್ಷ ಗುರಿಯೊಂದಿಗೆ ಅರಣ್ಯ ಇಲಾಖೆ ಮುಂದಡಿ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರಾಜ್ಯ ಸರ್ಕಾರದ ಕೋಟಿ ಸಸಿ ನೆಡುವ ಆಂದೋಲನಕ್ಕೆ ಗ್ರಾಮಾಂತರ ಜಿಲ್ಲೆಯಲ್ಲಿ ಭರ್ಜರಿ ಸ್ಪಂದನೆ ವ್ಯಕ್ತವಾಗಿದ್ದು, ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ವಾರದಲ್ಲೇ 1.50 ಲಕ್ಷ ಕ್ಕೂ ಹೆಚ್ಚು ಸಸಿಗಳ ನಾಟಿ ಮಾಡುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಪರಿಸರ ರಕ್ಷಣೆ ಜತೆಗೆ ವನಸಂಪತ್ತು ವೃದ್ಧಿಸುವ ಸದುದ್ದೇಶದಿಂದ ರಾಜ್ಯ ಸರ್ಕಾರದ ಕೋಟಿ ಸಸಿ ನೆಡುವ ಆಂದೋಲನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಅರಣ್ಯ ಇಲಾಖೆ ಮುಂದಡಿ ಇಟ್ಟಿದ್ದು, ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಕನಿಷ್ಟ 6 ಲಕ್ಷ ಸಸಿಗಳ ಹಸಿರು ಹೊದಿಸುವ ಗುರಿಯೊಂದಿಗೆ ನಾಟಿ ಕಾರ್ಯ ಮುಂದುವರೆಸಿದೆ.
ಯಾವುದೇ ನದಿ ಮೂಲವಿಲ್ಲದ ಬಯಲುಸೀಮೆಯಾಗಿರುವ ಗ್ರಾಮಾಂತರ ಜಿಲ್ಲೆಯಲ್ಲಿ ವಿವಿಧ ಸಸಿಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿರುವ ಇಲಾಖೆ ವಿವಿಧ ಸಂಘಸಂಸ್ಥೆಗಳು, ಶಾಲಾ ಕಾಲೇಜು ಆಡಳಿತ ಮಂಡಳಿ ಹಾಗೂ ಸಾರ್ವಜನಿಕ ಸಹಯೋಗದಲ್ಲಿ ಮಹತ್ತರ ಹೆಜ್ಜೆ ಇಟ್ಟಿದೆ. ಇದಕ್ಕೆ ಎಲ್ಲ ಕಡೆಯಿಂದಲೂ ಸ್ಪಂದನೆ ವ್ಯಕ್ತವಾಗುತ್ತಿದ್ದು, ತಿಂಗಳಾಂತ್ಯದಲ್ಲಿ ಗುರಿ ಮುಟ್ಟುವ ನಿರೀಕ್ಷೆಯಲ್ಲಿ ಇಲಾಖೆ ಕಾರ್ಯಪ್ರವೃತ್ತವಾಗಿದೆ.
ವನಕ್ರಾಂತಿಗೆ ಸಜ್ಜು: ಜಿಲ್ಲಾ ಪ್ರಾದೇಶಿಕ ಅರಣ್ಯ ಇಲಾಖೆಯಲ್ಲಿ ಇಲಾಖೆಯಲ್ಲಿ 5.50 ಲಕ್ಷ ಸಸಿಗಳಿದ್ದು, ಸಾರ್ವಜನಿಕರಿಗೆ ವಿತರಿಸುವ 4.50 ಲಕ್ಷ ಸಸಿಗಳಿವೆ, ಇದರೊಂದಿಗೆ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಸುಮಾರು 2 ಲಕ್ಷ ಸಸಿಗಳಿವೆ, ಕೃಷಿ ಇಲಾಖೆಯಲ್ಲಿ 1.50 ಲಕ್ಷ ಸಸಿಗಳಿದ್ದು, ವಿವಿಧ ಇಲಾಖೆಯ ಸಹಯೋಗದಲ್ಲಿ ಸಾರ್ವಜನಿಕರ ಸಹಯೋಗದಲ್ಲಿ ಸಸಿಗಳನ್ನು ನೆಟ್ಟು ಅವುಗಳ ಪೋಷಣೆಗೆ ಒತ್ತು ನೀಡಿ ವನಕ್ರಾಂತಿಯ ಕಲ್ಪನೆಯ ಕಾರ್ಯಕ್ರಮ ರೂಪಿಸಲಾಗಿದೆ. ಇದೇ ಆಂದೋಲನದಡಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ 1.70 ಲಕ್ಷ ಸಸಿಗಳನ್ನು ನೆಡಲು ಉದ್ದೇಶಿಸಿದ್ದು ಈ ಸಂಬಂಧ ಜಿಲ್ಲಾ ಪಂಚಾಯಿತಿ ಸಹಯೋಗ ಪಡೆಯಲಾಗಿದೆ. ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಪ್ರಾದೇಶಿಕ ಅರಣ್ಯ ಇಲಾಖೆಯೊಂದಿಗೆ ಕೃಷಿ ಇಲಾಖೆ ಕೈಜೋಡಿಸಿದ್ದು, ಕೃಷಿ ಇಲಾಖೆಯಡಿ 1 ಲಕ್ಷ ಸಸಿಗಳ ಲಭ್ಯತೆಯನ್ನು ಸದ್ಭಳಕೆ ಮಾಡಿಕೊಳ್ಳಲಾಗುತ್ತಿದೆ.
ನಿರೀಕ್ಷಿತ ಮಳೆ ಇಲ್ಲ: ಪ್ರತಿ ಮುಂಗಾರು ಮಳೆ ವೇಳೆ ರಾಜ್ಯ ಸರ್ಕಾರ ರಾಜ್ಯಾದ್ಯಂತ ಕೋಟಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಇದಕ್ಕೆ ಪ್ರಮುಖವಾಗಿ ಮಳೆ ಆಧಾರಿತವಾಗಿದೆ. ಆದರೆ ಈ ಸಾಲಿನಲ್ಲಿ ಜಿಲ್ಲೆಯಲ್ಲಿ ನಿರೀಕ್ಷಿತ ಮಳೆ ಇಲ್ಲದ ಹಿನ್ನೆಲೆಯಲ್ಲಿ ಸಸಿ ನೆಡುವ ಗುರಿ ಮುಟ್ಟುವುದು ಕಷ್ಟ ಸಾಧ್ಯ ಎನ್ನಲಾಗಿದೆ. ಆಂದೋಲನದ ಚಾಲನೆಗೂ ಮುನ್ನ ಅಂದಾಜು 8 ಲಕ್ಷ ಸಸಿ ನೆಡುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ ಮಳೆ ಕೊರತೆಯಿಂದ ಇದರ ಪ್ರಮಾಣ ತಗ್ಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ 7 ದಿನಗಳ ಕಾಲ ನಿರಂತರವಾಗಿ ಸಸಿ ನೆಡುವ ಬೃಹತ್ ಆಂದೋಲನದಲ್ಲಿ ಇದುವರೆಗೆ 1.50 ಲಕ್ಷ ಸಸಿಗಳ ನಾಟಿ ಕಾರ್ಯ ಯಶಸ್ವಿಯಾಗಿದೆ. ಈ ಕಾರ್ಯಕ್ರಮ ಮುಂದುವರೆಯಲಿದ್ದು, 5.50 ಲಕ್ಷ ಸಸಿಗಳನ್ನು ನೆಡುವ ಗುರಿ ಇಟ್ಟುಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ವಿವಿಧ ಸಂಘಸಂಸ್ಥೆಗಳು, ಎನ್‌ಜಿಒ, ಶಾಲಾಕಾಲೇಜುಗಳಿಂದ ಸ್ಪಂದನೆ ವ್ಯಕ್ತವಾಗಿದೆ.
ಸುಮೀತ್ ಪಾಟೀಲ್, ಉಪ ಪ್ರಾದೇಶಿಕ ಸಂರಕ್ಷಣಾಧಿಕಾರಿ, ಬೆಂಗಳೂರು ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net