ಲಲಿತಾ ಪಂಚಮಿಯಂದು ಶೃಂಗೇರಿಯಲ್ಲಿ ಕೋಟಿ ಕುಂಕುಮಾರ್ಚನೆ

3sri-1 (2)
ಅಡಕೆ ಬೆಳೆಗಾರರ ಸಂಕಷ್ಟ ಪರಿಹಾರ ಸಮಿತಿ ಸದಸ್ಯರು ಶೃಂಗೇರಿ ಶ್ರೀಮಠದಲ್ಲಿ ಆಡಳಿತಾಧಿಕಾರಿ ಡಾ.ವಿ.ಆರ್‌ಗೌರಿಶಂಕರ್‌ರನ್ನು ಭೇಟಿ ಮಾಡಿದರು.ಎ.ಎಸ್.ನಯನ, ವಿವೇಕಾನಂದ, ಪ್ರಭಾಕರ್ ಗೌಡ ಇದ್ದರು.
Published on

ಶೃಂಗೇರಿ: ಶ್ರೀ ಶಾರದಾ ಪೀಠದ ಜಗದ್ಗುರುಗಳ ಮಾರ್ಗದರ್ಶನದಂತೆ ಕಳೆದ ವರ್ಷ ಜನವರಿಯಲ್ಲಿ ಅಡಕೆ ಬೆಳೆಗಾರರು ಎದುರಿಸುತ್ತಿರುವ ಮಾರಕ ರೋಗದಿಂದ ಮುಕ್ತವಾಗಲು ಕೋಟಿ ಕುಂಕುಮಾರ್ಚನೆ ಮತ್ತು ಲಲಿತಾಹೋಮ ನಡೆಸಲಾಗಿತ್ತು. ಈ ವರ್ಷವೂ ಲಲಿತಾ ಪಂಚಮಿಯಂದು ಶ್ರೀ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ಶ್ರೀಮಠದ ಆಡಳಿತಾಧಿಕಾರಿ ಡಾ.ವಿ.ಆರ್.ಗೌರಿಶಂಕರ್ ಹೇಳಿದರು.
ಶ್ರೀ ಮಠದಲ್ಲಿ ಅಡಕೆ ಬೆಳೆಗಾರರ ಸಂಕಷ್ಟ ಪರಿಹಾರ ಸಮಿತಿ ಸದಸ್ಯರು ಬುಧವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ವರ್ಷ 11ದಿನ ಶ್ರೀ ಮಠದಲ್ಲಿ ಕೋಟಿ ಕುಂಕುಮಾರ್ಚನೆ ಏರ್ಪಡಿಸಲಾಗಿತ್ತು. ಲಲಿತಾ ಪಂಚಮಿಯಂದು ಅಮ್ಮನವರಿಗೆ ಲಕ್ಷ ಕುಂಕುಮಾರ್ಚನೆ, ಲಲಿತಾ ಹೋಮ, ದಿಂಡಿ ಉತ್ಸವ, ಈಶ್ವರ ಗಿರಿಯಲ್ಲಿ ಶ್ರೀ ಮಲಹಾನಿಕರೇಶ್ವರ ಸ್ವಾಮಿ ಸನ್ನಿಧಿಯಲ್ಲಿ ರುದ್ರಾಭಿಷೇಕ, ರುದ್ರಹೋಮ ಮತ್ತಿತರ ಧಾರ್ಮಿಕ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು.
ಮ್ಯಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್ ಮಾತನಾಡಿ, ಲಲಿತಾ ಪಂಚಮಿಯಂದು ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಬೆಳೆಗಾರರು ಭಾಗವಹಿಸಿ, ಗುರು ಭವನದಲ್ಲಿ ಜಗದ್ಗುರುಗಳ ಆಶೀರ್ವಾದ ಪಡೆಯಬೇಕು. ಅಡಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ನಿವಾರಣೆಗಾಗಿ ಜಗದ್ಗುರುಗಳ ಆದೇಶದಂತೆ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಡಕೆ ಬೆಳೆಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಅಡಕೆ ಬೆಳೆಗಾರರ ಸಂಕಷ್ಟ ಪರಿಹಾರ ಸಮಿತಿ ಕಳಸ ಮಂಜಪ್ಪಯ್ಯ, ಕೋಟೇತೋಟ ವಿಜಯರಂಗ, ಎ.ಎಸ್.ನಯನ, ಸುಂಕುರ್ಡಿ ವಿವೇಕಾನಂದ, ಹೆಬ್ಬಿಗೆ ಗಣೇಶ್, ಪ್ರಭಾಕರ ಗೌಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net