ಮಂಡ್ಯದಲ್ಲಿ ಕೋಟಿ ಗೀತಾ ಲೇಖನ ಯಜ್ಞಕರ್ತರ ನೋಂದಣಿ ಅಭಿಯಾನ: ಶ್ರೀ ಪುತ್ತಿಗೆ ಮಠದ ಗೀತಾ ಪ್ರಚಾರಕ ರಮಣ ಆಚಾರ್ಯ ಮಾಹಿತಿ

Tulasi-3
Published on

ಮಂಡ್ಯ: ಉಡುಪಿಯ ಪುತ್ತಿಗೆ ಮಠದ ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನದಿಂದ ಯಜ್ಞಕ್ಕಾಗಿ ಮಂಡ್ಯದಲ್ಲಿಯೂ ಯಜ್ಞಕರ್ತರ ನೋಂದಣಿ ಅಭಿಯಾನ ಆರಂಭಿಸಲಾಗಿದೆ ಎಂದು ಮಠದ ಗೀತಾ ಪ್ರಚಾರಕ ರಮಣ ಆಚಾರ್ಯ ತಿಳಿಸಿದರು.

ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರ ಜಾಗತಿಕ, ಧಾರ್ಮಿಕ ಸಂಕಲ್ಪವಾಗಿ ಕೋಟಿ ಗೀತಾ ಲೇಖನಯಜ್ಞಕ್ಕೆ ನೋಂದಣಿ ರಾಜ್ಯಾದ್ಯಂತ ನಡೆಯುತ್ತಿದೆ. ಜನರಿಂದ ಒಂದು ಕೋಟಿ ಸಂಖ್ಯೆ ಗೀತಾ ಲೇಖನಗಳನ್ನು ಬರೆಸಿ ಯಜ್ಞರೂಪದಲ್ಲಿ ದೇವರಿಗೆ ಸಮರ್ಪಿಸಲಾಗುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಜಾತಿ, ಮತ, ಧರ್ಮ, ಲಿಂಗ ಮತ್ತು ವಯಸ್ಸಿನ ಬೇಧವಿಲ್ಲದೆ ಜನರು ಭಗವದ್ಗೀತೆಯ ಶ್ಲೋಕಗಳನ್ನು ಬರೆದು ಮಠಕ್ಕೆ ಕಳುಹಿಸಬೇಕು. 2022ರಿಂದ 2026ರೊಳಗೆ ನಡೆಯುವ ಪುತ್ತಿಗೆ ಪರ್ಯಾಯದ 2 ವರ್ಷದ ಅವಧಿಯಲ್ಲಿ ಶ್ರೀಪಾದರ ಮೂಲಕ ಉಡುಪಿ ಶ್ರೀಕೃಷ್ಣನಿಗೆ ಭಗವದ್ಗೀತೆಯ ಲೇಖನಗಳನ್ನು ಸಮರ್ಪಿಸಿ, ಪ್ರಸಾದದ ರೂಪದಲ್ಲಿ ಅವುಗಳನ್ನು ಬರೆದವರಿಗೆ ನೀಡಲಾಗುತ್ತದೆ ಎಂದರು.

ಆತ್ಮೋದ್ಧಾರ ಮತ್ತು ಲೋಕಕಲ್ಯಾಣಾರ್ಥವಾಗಿ ನಡೆಯುವ ಈ ಸಂಕಲ್ಪಕ್ಕೆ ದೀಕ್ಷಾಬದ್ಧರಾಗುವ ಮೂಲಕ ಜನರು ಪುಣ್ಯಸಂಪಾದನೆ, ಜ್ಞಾನ ಸಂಪಾದನೆ ಮತ್ತು ಮುಂದಿನ ತಲೆಮಾರಿಗೆ ಗೀತೆಯ ಮೌಲ್ಯಗಳನ್ನು ಹಸ್ತಾಂತರಿಸುವ ಕರ್ತವ್ಯ ನಿರ್ವಹಣೆಗಳನ್ನು ಏಕಕಾಲದಲ್ಲಿ ಸಾಧಿಸಬೇಕು. ಆಸಕ್ತರು 108 ರೂ ಸಂಕಲ್ಪ ಕಾಣಿಕೆ ನೀಡಿ, ಶ್ರೀಮಠದಿಂದ ಮುದ್ರಿಸಿರುವ ಭಗವದ್ಗೀತೆಯ ಲೇಖನ ಪುಸ್ತಕವನ್ನು 150 ರೂ ಪಾವತಿಸಿ ಪಡೆದುಕೊಳ್ಳಬೇಕು. ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿದ ಬಳಿಕ, ಭಗವದ್ಗೀತೆಯ ರಚನೆಯ ಪುಸ್ತಕದ ಖಾಲಿ ಹಾಳೆಗಳಲ್ಲಿ ಗೀತೆಯ ಶ್ಲೋಕಗಳನ್ನು ಬರೆಯಬೇಕು. ಆಸಕ್ತರು 8055338811 ಸಂಖ್ಯೆಗೆ ‘ಓಂ’ ಎಂದು ವಾಟ್ಸಪ್ ಸಂದೇಶ ಕಳುಹಿಸಿ ನೋಂದಣಿ ಮಾಡಿಕೊಳ್ಳಬಹುದು. ಮಾಹಿತಿಗೆ ಮೊ.ಸಂ 8792158946/9448391301 ಸಂಖ್ಯೆಗಳಿಗೆ ಕರೆ ಮಾಡಿ ಪಡೆಯಬಹುದು ಎಂದರು.

ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಮಾತನಾಡಿ, ದಶಕದ ಹಿಂದೆಯೇ ಮಂಡ್ಯದಲ್ಲಿ ಭಗವದ್ಗೀತಾ ಸಮಿತಿ ರಚಿಸಿ, ಜನರಿಗೆ ಕಿರು ಹೊತ್ತಿಗೆಗಳನ್ನು ನೀಡುವ ಅಭಿಯಾನ ನಡೆಸಲಾಗುತ್ತಿತ್ತು. ಇದೀಗ ಜನರಲ್ಲಿ ಧರ್ಮ ನೀತಿ, ನೈತಿಕ ಶಕ್ತಿ ಹೆಚ್ಚಳಕ್ಕಾಗಿ ಕೋಟಿ ಗೀತಾ ಲೇಖನಯಜ್ಞ ಅಭಿಯಾನ ಆರಂಭಿಸಲಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ನಾಡಿನ ಸಂಸ್ಕೃತಿ, ಸಂಸ್ಕಾರವನ್ನು ಮಕ್ಕಳಿಗೆ ಪರಿಚಯಿಸಬೇಕು ಎಂದರು.

ಪತ್ರಕರ್ತ ಡಿ.ಎನ್.ಶ್ರೀಪಾದು, ವಿಶ್ವನಾಥಬಾಬು, ಚಂದ್ರಶೇಖರ್, ಅನಂದಪದ್ಮನಾಭ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net