

ಮೂಡುಬಿದಿರೆ: ಇಲ್ಲಿನ ಒಂಟಿಕಟ್ಟೆ ಕಡಲಕೆರೆ ನಿಸರ್ಗಧಾಮದಲ್ಲಿ ಜನವರಿ 25ರಂದು 22ನೇ ವರ್ಷದ ಕೋಟಿ ಚೆನ್ನಯ ಜೋಡುಕೆರೆ ಕಂಬಳ ನಡೆಯಲಿದೆ. ಪ್ರತಿವರ್ಷ ತುಳುನಾಡಿನ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸುವ ನಿಟ್ಟಿನಲ್ಲಿ ವೀರರಾಣಿ ಅಬ್ಬಕ್ಕ ರಾಜ್ಯಮಟ್ಟದ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದ್ದು, ಈ ಬಾರಿ ಅಂತಾರಾಷ್ಟ್ರೀಯ ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಮೂಲ್ಕಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಶಾಸಕ, ಮೂಡುಬಿದಿರೆ ಕಂಬಳ ಸಮಿತಿ ಅಧ್ಯಕ್ಷ ಉಮಾನಾಥ ಎ.ಕೋಟ್ಯಾನ್ ತಿಳಿಸಿದರು.
ಒಂಟಿಕಟ್ಟೆಯ ಸೃಷ್ಟಿ ಗಾರ್ಡನ್ ಸಭಾಭವನದಲ್ಲಿ ಮಂಗಳವಾರ ಮೂಡುಬಿದಿರೆ ಕಂಬಳ ಸಮಿತಿ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೂಡುಬಿದಿರೆ ಕಂಬಳ ಶಿಸ್ತು, ಸಮಯ ಪಾಲನೆ ಹಾಗೂ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದ್ದು, ಕಂಬಳಾಭಿಮಾನಿಗಳಲ್ಲಿ ಪ್ರತಿ ವರ್ಷ ನಿರೀಕ್ಷೆಯೂ ಹೆಚ್ಚುತ್ತಿದೆ. ಸುಮಾರು 50 ಲಕ್ಷ ರೂ.ವೆಚ್ಚದಲ್ಲಿ ಆವರಣಗೋಡೆ ನಿರ್ಮಿಸಲಾಗಿದೆ. ಕಂಬಳ ಮತ್ತಷ್ಟು ವ್ಯವಸ್ಥಿತವಾಗಿ ನಡೆಸಲು 100ಕ್ಕೂ ಅಧಿಕ ಸ್ವಯಂಸೇವಕರು ಅಗತ್ಯವಿದೆ. ಬೆಳಗ್ಗೆ 8.30ಕ್ಕೆ ಕೋಣಗಳನ್ನು ಕಡ್ಡಾಯವಾಗಿ ಕರೆ ಇಳಿಸಲಿದ್ದೇವೆ ಎಂದರು.
ಪುರಸಭೆ ಉಪಾಧ್ಯಕ್ಷ ನಾಗರಾಜ ಪೂಜಾರಿ, ಜಿಲ್ಲಾ ಕಂಬಳ ಸಮಿತಿ ತೀರ್ಪುಗಾರರ ಸಂಚಾಲಕ ವಿಜಯ ಕುಮಾರ್ ಕಂಗಿನಮನೆ, ಮೂಡುಬಿದಿರೆ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಪ್ರಮುಖರಾದ ಕೆ.ಆರ್.ಪಂಡಿತ್, ಶಾಂತಿ ಪ್ರಸಾದ್ ಹೆಗ್ಡೆ, ಈಶ್ವರ ಕಟೀಲ್, ಸುರೇಶ್ ಕೆ.ಪೂಜಾರಿ, ರಂಜಿತ್ ಪೂಜಾರಿ, ದಿನೇಶ್ ಪುತ್ರನ್, ಕುಮಾರ್ ಮತ್ತಿತರರಿದ್ದರು.
ಕಂಬಳ ಮ್ಯೂಸಿಂ ಸರ್ಕಾರಕ್ಕೆ ಪ್ರಸ್ತಾವನೆ
ಮೂಡುಬಿದಿರೆ ಕಡಲಕೆರೆ ನಿಸರ್ಗಧಾಮದಲ್ಲಿ ಕಂಬಳ ಮ್ಯೂಸಿಯಂ ನಿರ್ಮಿಸುವ ಕುರಿತು ಕಳೆದ ಅವಧಿಯಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಮಂಜೂರಾಗುವ ಹಂತದಲ್ಲಿತ್ತು. ಈ ಬಾರಿ ಅನುದಾನ ಕೊರತೆ ಇದ್ದರೂ, ಮ್ಯೂಸಿಯಂ ನಿರ್ಮಾಣಕ್ಕೆ ಪೂರಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ಶಾಸಕ, ಮೂಡುಬಿದಿರೆ ಕಂಬಳ ಸಮಿತಿ ಅಧ್ಯಕ್ಷ ಉಮಾನಾಥ ಎ.ಕೋಟ್ಯಾನ್ ತಿಳಿಸಿದರು.
ಕಡಲಕೆರೆ ನಿಸರ್ಗಧಾಮದಲ್ಲಿ ಕಂಬಳ ಸಮಿತಿಗೆ ವಿಶಾಲವಾದ ಜಾಗವಿದ್ದು, ಅರಣ್ಯಾಧಿಕಾರಿಗಳಲ್ಲಿ ಸಮಾಲೋಚಿಸಿ ಜಾಗ ಗುರುತು ಮಾಡುವ ಕೆಲಸ ಮುಂದಿನ ದಿನಗಳಲ್ಲಿ ಮಾಡಲಾಗುವುದು. ಈ ಬಾರಿ ಕಂಬಳದಲ್ಲಿ ಮ್ಯೂಸಿಯಂಗೆ ಶಿಲಾನ್ಯಾಸ ಮಾಡಿದಲ್ಲಿ, ಅದರ ಅಭಿವೃದ್ಧಿಗೆ ವೇಗ ಸಿಗಲಿದೆ. - ಗುಣಪಾಲ ಕಡಂಬ, ಕಂಬಳ ಅಕಾಡೆಮಿ ಸಂಚಾಲಕ