250 ಅಡಿ ಎತ್ತರದ ಕಟ್ಟಡ ಏರಿದ ಕೋತಿರಾಜ್

IMG-20230302-WA0019
Published on

ಉಡುಪಿ : ಬ್ರಹ್ಮಗಿರಿಯ 25 ಮಹಡಿಯ 250 ಅಡಿ ಎತ್ತರದ ವುಡ್ಸ್ ವಿಲ್ಲಾ  ಕಟ್ಟಡವನ್ನು ಕೋತಿರಾಜ್ ಅಲಿಯಾಸ್ ಜ್ಯೋತಿರಾಜ್ ಮಾನವ ಶ್ರಮದಿಂದಲೇ ಏರಿ ನೆರೆದಿದ್ದವರನ್ನು ಆಶ್ಚರ್ಯಚಕಿತಗೊಳಿಸಿದರು.

ಗುರುವಾರ ಬೆಳಿಗ್ಗೆ 10.17ಕ್ಕೆ ಕಟ್ಟಡ ಹತ್ತಲು ಆರಂಭಿಸಿದ ಅವರು 10.44 ಕ್ಕೆ ಕೊನೆಯ ಮಹಡಿಯನ್ನು ತಲುಪಿ ಕನ್ನಡ ಬಾವುಟವನ್ನು ಹಾರಿಸುವುದರ ಮೂಲಕ ಸಂಭ್ರಮಿಸಿದರು. ಕೋತಿರಾಜ್ ಬಹುಮಹಡಿ ಕಟ್ಟಡವನ್ನು ಏರುವ ಮಾಹಿತಿ ತಿಳಿದು ನೂರಾರು ಮಂದಿ ಕಟ್ಟಡ ಸಮೀಪ ಜಮಾಯಿಸಿದ್ದರು. ಕೋತಿರಾಜ್ ಅವರ ಸಾಹಸವನ್ನು ಕಣ್ತುಂಬಿಕೊಂಡು ಕೆಲವರು ತಂಡಕ್ಕೆ ಧನ ಸಹಾಯ ಮಾಡಿದರು. ಬಹುಮಹಡಿ ಕಟ್ಟಡವನ್ನು ಏರಿ ಕೆಳಗಿಳಿದ ಸಾಹಸಿಗನಿಗೆ ಜಿಲ್ಲಾ ಅಗ್ನಿಶಾಮಳ ದಳದ ಅಧಿಕಾರಿ ವಸಂತ್ ಕುಮಾರ್ ಅಭಿನಂದಿಸಿದರು. ಕಟ್ಟಡವನ್ನು ಮಾನವ ಶ್ರಮದಿಂದಲೇ ಏರಿದರೂ ಸುರಕ್ಷತಾ ದೃಷ್ಟಿಯಿಂದ 25 ಕ್ವಿಂಟಾಲ್ ಭಾರ ತಡೆದುಕೊಳ್ಳಬಹುದಾದ 200 ಮೀ. ಉದ್ದದ ರೋಪ್ ಅನ್ನು ಕೋತಿರಾಜ್ ಸೊಂಟಕ್ಕೆ ಕಟ್ಟಿಕೊಂಡಿದ್ದರು.

ಕ್ಲೈಮ್ಮಿಂಗ್ ಫೌಂಡೇಶನ್ ಸ್ಥಾಪಿಸಿ, ಕೃತಕ ಗೋಡೆಯನ್ನು ನಿರ್ಮಿಸಿ ನೂರಾರು ಕ್ರೀಡಾ ಪಟುಗಳಿಗೆ ತರಬೇತಿ ನೀಡುವ ಅಕಾಡೆಮಿ ಸ್ಥಾಪಿಸಲು ಜನರ ಸಹಕಾರ ಬೇಕು. ಮುಂದಿನ ದಿನಗಳಲ್ಲಿ ಕ್ಲೈಮ್ಮಿಂಗ್ ವಿಭಾಗದಲ್ಲಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗೆಲ್ಲುವಂತಾಗಬೇಕು. ವಿಪರೀತ ಬಿಸಿಲಿನಿಂದ ಕಬ್ಬಿಣದ ರಾಡ್‌ಗಳು ಬಿಸಿಯಾಗಿದ್ದವು. ಮೇಲೆ ಮೇಲೆ ಏರುತ್ತಿದ್ದಂತೆ ದಣಿವಿನಿಂದಾಗಿ ಬಾಯಾರಿಕೆಯಾಯಿತು. ಆಗ ಕಟ್ಟಡದ ಮಧ್ಯದ ಫ್ಲ್ಯಾಟೊಂದರಲ್ಲಿರುವ ಹಿರಿಯರೊಬ್ಬರು ಕಿಟಕಿಯಿಂದ ನೀರು ನೀಡಿದರು. ನೀರು ಕುಡಿದ ನಂತರ ಮತ್ತೇ ಕಟ್ಟಡವನ್ನು ಏರಲು ಆರಂಭಿಸಿದೆ ಎಂದು ಕೋತಿರಾಜ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net