ಕೋಟೇಶ್ವರ ಕೊಡಿ ಹಬ್ಬ ಸಂಪನ್ನ

koteshwara new
Published on

ಕುಂದಾಪುರ: ಕರಾವಳಿಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಕೊಡಿಹಬ್ಬ ಮಹಾರಥೋತ್ಸವ ಸರಳವಾಗಿ ಸೋಮವಾರ ಜರುಗಿತು.

ಕೋವಿಡ್ ತಡೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವಿಧಿಸಿದ್ದ ನಿಬಂಧನೆಗಳೊಂದಿಗೆ ಉತ್ಸವ ನಡೆಯಿತು. ಕಟ್ಟೆ ಪೂಜೆ ಮೊದಲಾದ ಧಾರ್ಮಿಕ ಕಾರ್ಯಗಳು ದೇವಸ್ಥಾನದಲ್ಲಿ ಸಂಪ್ರದಾಯಬದ್ಧವಾಗಿ ನಡೆದವು. ದೇವಸ್ಥಾನದಿಂದ ವೈಭವದ ಮೆರವಣಿಗೆಯಲ್ಲಿ ಬಂದ ಬಿದಿರಿನ ಕೊಡಿ, ತಾಂಡವೇಶ್ವರ ದೇವರು, ತ್ರಿಶೂಲ, ಗೋಳೆ ದೇವರು ಹಾಗೂ ಕೋಟಿಲಿಂಗೇಶ್ವರ ಉತ್ಸವ ಮೂರ್ತಿ ಸ್ವಾಗತಿಸಲಾಯಿತು. ಬಿದಿರಿನ ಕೊಡಿಯನ್ನು ಮೊದಲು ರಥದ ಮೇಲಕ್ಕೆ ಕೊಂಡೊಯ್ಯುವ ಮೂಲಕ ರಥಾರೋಹಣಕ್ಕೆ ಚಾಲನೆ ನೀಡಲಾಯಿತು. ದೇವಳದ ತಂತ್ರಿ ಪ್ರಸನ್ನ ಕುಮಾರ ಐತಾಳ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ನೆರವೇರಿಸಲಾಯಿತು.

ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಪ್ರಭಾರ ಆಡಳಿತಾಧಿಕಾರಿ ರಾಘವೇಂದ್ರ, ವ್ಯವಸ್ಥಾಪನಾ ಸಮಿತಿ ಮಾಜಿ ಪದಾಧಿಕಾರಿಗಳು, ಊರಪರವೂರ ಭಕ್ತರು ಉತ್ಸವ ಅಚ್ಚುಕಟ್ಟಾಗಿ ನಡೆಯಲು ಸಹಕಾರ ನೀಡಿದರು. ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಗೋಪಿಕೃಷ್ಣ ಮಾರ್ಗದರ್ಶನದಲ್ಲಿ ಕುಂದಾಪುರ ನಗರ ಠಾಣೆ ಪ್ರಭಾರ ಪಿಎಸ್‌ಐ ಸುಬ್ಬಣ್ಣ, ಗ್ರಾಮಾಂತರ ಠಾಣೆ ಪಿಎಸ್‌ಐ ರಾಜಕುಮಾರ್, ಅಪರಾಧ ವಿಭಾಗದ ಪಿಎಸ್‌ಐ ಸುಧಾ ಪ್ರಭು, ಕೊಲ್ಲೂರು ಠಾಣೆಯ ಪಿಎಸ್‌ಐ ಮಹಾದೇವ ಭೋಸ್ಲೆ ಹಾಗೂ ವಿವಿಧ ಠಾಣೆ ಸಿಬ್ಬಂದಿ ಬಂದೋಬಸ್ತ್ ಏರ್ಪಡಿಸಿದ್ದು ಕುಂದಾಪುರ ಸಂಚಾರಿ ಠಾಣೆ ಪಿಎಸ್‌ಐ ಸುದರ್ಶನ್ ಹಾಗೂ ಸಿಬ್ಬಂದಿ ಸಂಚಾರ ವ್ಯವಸ್ಥೆ ಸುಗಮಗೊಳಿಸಿದರು.

ತೀರ್ಥ ಸಂಪ್ರೋಕ್ಷಣೆಗೆ ಇರಲಿಲ್ಲ ಅವಕಾಶ

ಕೋಟಿತೀರ್ಥದಲ್ಲಿ ತೀರ್ಥ ಸಂಪ್ರೋಕ್ಷಣೆಗೆ ಅವಕಾಶವಿರಲಿಲ್ಲ. ಬದಲಾಗಿ ಕೋಟಿತೀರ್ಥದ ಸಮೀಪ ದೊಡ್ಡ ಪಾತ್ರೆಯಲ್ಲಿ ತೀರ್ಥ ತುಂಬಿಸಿಟ್ಟು ಕೈಕಾಲು ತೊಳೆಯಲು ಅನುಕೂಲ ಕಲ್ಪಿಸಲಾಗಿತ್ತು. ಸುತ್ತಕ್ಕಿ ಸೇವೆ ಸಮರ್ಪಣೆಗೆ ಅವಕಾಶ ಕಲ್ಪಿಸಲಾಗಿತ್ತು. ಸ್ವಯಂ ಸೇವಕರು, ಪೊಲೀಸರು ಸುವ್ಯವಸ್ಥೆ ಪಾಲನೆಗೆ ಸಹಕರಿಸಿದರು. ಹಿಂದಿನಂತೆ ಥರಹೇವಾರಿ ಅಂಗಡಿ ಮುಂಗಟ್ಟುಗಳು ಕಂಡು ಬರಲಿಲ್ಲ. ರಥೋತ್ಸವದ ವೇಳೆ ಒಮ್ಮೆಗೆ ಜನದಟ್ಟಣೆಯಾಗಿದ್ದು ಬಳಿಕ ಕಡಿಮೆಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net