ಕೋಟೆನಗರಿ ಸ್ವಯಂಪ್ರೇರಿತ ಬಂದ್

Kotenagari voluntary bandh today
ಬಾಗಲಕೋಟೆ ನಗರದ ಚರಂತಿಮಠದಲ್ಲಿ ಶುಕ್ರವಾರ ಸಂಜೆ ನಡೆದ ವಿವಿಧ ಸಮಾಜಗಳ ಜಂಟಿ ಸಭೆಯಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿದರು. ಮಾಜಿ ಶಾಸಕ ವೀರಣ್ಣ ಚರಂತಿಮಠ, ವಿಪ ಸದಸ್ಯ ನಾರಾಯಣಸಾ ಭಾಂಡಗೆ, ಡಾ.ಎಂ.ಎಸ್.ದಡ್ಡೇನವರ, ಶಿವಾನಂದ ಟವಳಿ, ದ್ಯಾವಪ್ಪ ರಾಕುಂಪಿ, ಉದಯ ರಜಪೂತ, ರಾಜೇಶ ಗುಜ್ಜರ ಇದ್ದರು.
Published on


ಗಲಕೋಟೆ: ಛತ್ರಪತಿ ಶಿವಾಜಿ ಪುತ್ಥಳಿ ಸ್ಥಾಪನೆ ವಿಚಾರವಾಗಿ ಕಳೆದ ಮೂರು ನಾಲ್ಕು ದಿನಗಳಲ್ಲಿ ನಗರದಲ್ಲಿ ನಡೆಯುತ್ತಿರುವ ಬೆಳವಣಿಗೆ ಇದೀಗ ಮತ್ತೊಂದು ಹಂತಕ್ಕೆ ಬಂದು ತಲುಪಿದೆ. ಶುಕ್ರವಾರ ಸಂಜೆ ಚರಂತಿಮಠದಲ್ಲಿ ನಡೆದ ವಿವಿಧ ಸಮಾಜಗಳ ಜಂಟಿ ಸಭೆಯಲ್ಲಿ ಶನಿವಾರ ಕೋಟೆನಗರಿ ಸ್ವಯಂಪ್ರೇರಿತ ಬಂದ್‌ಗೆ ನಿರ್ಧರಿಸಲಾಯಿತು.

ವಿವಿಧ ಸಮಾಜದ ಮುಖಂಡರು, ಪದಾಧಿಕಾರಿಗಳು ಭಾಗವಹಿಸಿ ತಮ್ಮ ಅಭಿಪ್ರಾಯ ಮಂಡಿಸಿದ ಬಳಿಕ ಅಂತಿಮ ನಿರ್ಧಾರಕ್ಕೆ ಬರಲಾಯಿತು. ಹಿಂದು ಸಾಮ್ರಾಜ್ಯ ಸ್ಥಾಪನೆಗೆ ಛತ್ರಪತಿ ಶಿವಾಜಿ ಮಹರಾಜರು ತಮ್ಮ ಪ್ರಾಣವನ್ನೆ ಮುಗಿಪಾಗಿ ಇಟ್ಟಿದ್ದಾರೆ. ಆದರೇ ಕಾಂಗ್ರೆಸ್ ಸರ್ಕಾರ ಹಿಂದು ವಿರೋಧಿ ಧೋರಣೆ ಅನುಸರಿಸುತ್ತಿದೆ. ಇದಕ್ಕೆ ಜಗ್ಗುವದಿಲ್ಲ. ಹೋರಾಟ ಮಾಡಿ ಮೂರ್ತಿ ಸ್ಥಾಪನೆ ಮಾಡಲಾಗುವುದು ಎಂದು ಸಭೆಯಲ್ಲಿ ಘೋಷಣೆ ಮಾಡಲಾಯಿತು.

ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು ದೇಶ, ಹಿಂದು ಸಮಾಜಕ್ಕಾಗಿ ಶ್ರಮಿಸಿದ್ದಾರೆ. ಅಂತಹವರ ಮೂರ್ತಿ ಸ್ಥಾಪನೆಗೆ ಅಡ್ಡಿಪಡಿಸುವುದು ತರವಲ್ಲ. ನೋವಿನ ಸಂಗತಿಯಾಗಿದೆ. ಇಂತಹ ವಿಷಯದಲ್ಲಿ ವೈಯಕ್ತಿಕ, ಸಮಾಜದ ವಿಚಾರಗಳನ್ನು ತರಬಾರದು. ಎಲ್ಲರೂ ಕೈ ಜೋಡಿಸಬೇಕು. ಪೊಲೀಸರ ನಡೆ ಕೂಡ ಬೇಸರ ಉಂಟು ಮಾಡಿದೆ. ಅನಗತ್ಯ ಗೊಂದಲ ಸೃಷ್ಟಿಸುವುದು ಹೀನ ಮನಸ್ಥಿತಿ. ಸುಪ್ರೀಂಕೋರ್ಟ್ ಆದೇಶ ಏನೇ ಇದ್ದರೂ ಜನರ ಭಾವ, ಬೇಡಿಕೆ ಅನುಗುಣವಾಗಿ ಕೆಲವೊಮ್ಮೆ ಹೆಜ್ಜೆ ಇಡಬೇಕಾಗುತ್ತದೆ. ಶಾಂತ ರೀತಿಯಲ್ಲಿ ಮೂರ್ತಿ ಸ್ಥಾಪನೆಗೆ ಅವಕಾಶ ನೀಡಬೇಕಿತ್ತು. ಆದರೆ, ಸರ್ಕಾರದ ವಿರೋಧಿ ಧೋರಣೆ ನಾಚಿಕೆಗೇಡಿನ ಸಂಗತಿ ಎಂದು ತಿಳಿಸಿದರು.

ಎಲ್ಲ ಸಮಾಜದವರು ಒಗ್ಗಟ್ಟಾಗಿ ಪುತ್ಥಳಿ ಸ್ಥಾಪನೆಗೆ ಮುಂದಾಗಿರುವುದು ಸ್ವಾಗತಾರ್ಹ. ಸ್ವಯಂಪ್ರೇರಿತ ಬಂದ್‌ಗೆ ಎಲ್ಲರೂ ಭಾಗವಹಿಸಬೇಕು. ಕಾನೂನು ಕೈಗೆತ್ತಿಕೊಳ್ಳಬಾರದು. ಧರ್ಮದ ಚೌಕಟ್ಟಿನಲ್ಲಿ ನಮ್ಮ ನಡೆ ಇರಬೇಕು. ಬೆಳಗ್ಗೆ 10.30 ಗಂಟೆಗೆ ಬಸವೇಶ್ವರ ವೃತ್ತದಿಂದ ಮೆರವಣಿಗೆ ಆರಂಭಗೊಂಡರೂ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ ಎಂದು ಹೇಳಿದರು.

ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಬಸವೇಶ್ವರ ಹಾಗೂ ಶಿವಾಜಿ ಮೂರ್ತಿ ಪುತ್ಥಳಿ ಏಕಕಾಲಕ್ಕೆ ಪರವಾನಗಿ ಪಡೆಯಲಾಗಿತ್ತು. ಎಲ್ಲ ಇಲಾಖೆಯ ಎನ್‌ಒಸಿ ಪಡೆಯಲಾಗಿತ್ತು. ಕೆಲವರು ಈ ಬಗ್ಗೆ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಈ ಹಿಂದೆ ನಮ್ಮ ಸರ್ಕಾರ ಅವಧಿಯಲ್ಲಿ ಅಂಬೇಡ್ಕರ್ ಪುತ್ಥಳಿ ಜಿಲ್ಲಾಡಳಿತ ಎದುರು ಸ್ಥಾಪನೆಗೆ ಮುಂದಾಗಿತ್ತು. ಕೊನೇ ಕ್ಷಣದಲ್ಲಿ ಸಾಧ್ಯವಾಗಲಿಲ್ಲ. 2013-2018ರ ವರೆಗೆ ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಪುತ್ಥಳಿ ಸ್ಥಾಪಿಸಲಿಲ್ಲ. ನಾವು ಅಧಿಕಾರಕ್ಕೆ ಬಂದ ಮೇಲೆ ಸ್ಥಾಪಿಸಲಾಯಿತು. ಸುಪ್ರೀಂಕೋರ್ಟ್ ಆದೇಶವಿದೆ ಎಂದು ಅನೇಕ ಕಡೆ ಪುತ್ಥಳಿ ಸ್ಥಾಪನೆ ಮಾಡಲಾಗಿದೆ.

ವಿಜಯಪುರ, ಮುಧೋಳ, ಲೋಕಾಪುರದಲ್ಲಿ ಪುತ್ಥಳಿ ಸ್ಥಾಪಿಸಲಾಗಿದೆ. ಬಾಗಲಕೋಟೆಯಲ್ಲಿ ಮಾತ್ರ ವಿರೋಧ ಮಾಡಲಾಗುತ್ತದೆ. ಇಂತಹವರಿಂದ ಬ್ರಿಟಿಷರು, ಮೊಗಲರು ನಮ್ಮನ್ನು ಆಳುವಂತಾಯಿತು. ನಾವು ಡೋಂಗಿಯಲ್ಲ. ಅಸಲಿ ಜನ ಅಂತ ಗುಡುಗಿದ ಅವರು, ಪ್ರತಿಭಟನಾ ಮೆರವಣಿಗೆಯಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಮನವಿ ಮಾಡಿದರು. ವಿಪ ಸದಸ್ಯ ನಾರಾಯಣಸಾ ಭಾಂಡಗೆ, ಡಾ.ಎಂ.ಎಸ್.ದಡ್ಡೇನವರ, ಶಿವಾನಂದ ಟವಳಿ, ದ್ಯಾವಪ್ಪ ರಾಕುಂಪಿ, ಉದಯ ರಜಪೂತ, ರಾಜೇಶ ಗುಜ್ಜರ, ನಾಗರಾಜ ಕುಪ್ಪಸ್ತ, ರಾಜು ನಾಯ್ಕರ, ಸಂಗಯ್ಯ ಸರಗಣಾಚಾರಿ, ಬಸವರಾಜ ಯಂಕಂಚಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net