

ಚಿತ್ರದುರ್ಗ: ಹಿಂದುಗಳ ಹೊಸ ವರ್ಷವಾದ ಯುಗಾದಿಯ ಸ್ವಾಗತಕ್ಕೆ ಎಲ್ಲೆಡೆಯಂತೆ ಕೋಟೆನಾಡೂ ಸಿದ್ಧವಾಗಿದೆ. ಚೈತ್ರ ಮಾಸದ ಪ್ರತಿಪದದ ದಿನ ಹಬ್ಬವನ್ನು ಆಚರಿಸಲು ಜಿಲ್ಲಾದ್ಯಂತ ಸಂಭ್ರಮ ಮನೆಮಾಡಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.
ಯುಗಾದಿ ಅಮಾವಾಸ್ಯೆಯಿಂದ ಮೂರು ದಿನ ನಡೆಯಲಿರುವ ಹಬ್ಬಕ್ಕಾಗಿ ಪೂಜಾ ಸಾಮಗ್ರಿ ಸೇರಿ ಅಗತ್ಯ ವಸ್ತುಗಳ ಖರೀದಿಗೆ ಮಂಗಳವಾರ ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟರು. ಪ್ರಮುಖ ರಸ್ತೆಗಳು ಕಾಲಿಡಲಾಗದಂತೆ ಜನಜಂಗುಳಿಯಿಂದ ಕೂಡಿದ್ದವು.
ಬುಧವಾರ ಚಾಂದ್ರಮಾನ ಯುಗಾದಿಗೂ ಕ್ಷಣಗಣನೆ ಆರಂಭವಾಗಿದ್ದು, ಮೂರ‌್ನಾಲ್ಕು ದಿನಗಳಿಂದಲೇ ಜನ ಸಿದ್ಧತೆಯಲ್ಲಿ ನಿರತರಾಗಿದ್ದಾರೆ. ಈ ಹಬ್ಬದಲ್ಲಿ ಅಭ್ಯಂಜನ ಸ್ನಾನ ಬಹುಮುಖ್ಯವಾಗಿದ್ದು, ಅದಕ್ಕಾಗಿ ಎಣ್ಣೆ, ಉಡುದಾರ, ಪೂಜೆಗಾಗಿ ಬಿಲ್ವ ಪತ್ರೆ, ವಿವಿಧ ಹಣ್ಣುಗಳು, ಬಾಳೆ ಎಲೆ, ಮಾವಿನ ಎಲೆ, ಬೇವಿನ ಸೊಪ್ಪು, ಬಾಳೆ ದಿಂಡು ಸೇರಿ ಇತರೆ ವಸ್ತುಗಳ ಖರೀದಿ ಭರಾಟೆ ಆನೆಬಾಗಿಲು ಮಾರ್ಗ, ಸಂತೆಹೊಂಡ, ಗಾಂಧಿ ವೃತ್ತದ ಸಮೀಪ ಜೋರಾಗಿ ನಡೆಯಿತು.
ಜವಳಿ ಅಂಗಡಿಗಳು ಫುಲ್ ರಷ್: ಹೊಸ ಬಟ್ಟೆ ಧರಿಸಿ ಯುಗಾದಿ ಹಬ್ಬವನ್ನಾಚರಿಸುವುದು ಬಹು ಹಿಂದಿನಿಂದಲೂ ನಡೆದು ಬಂದ ಪದ್ಧತಿಯಾಗಿದೆ. ಅದಕ್ಕಾಗಿ ನಗರ, ಪಟ್ಟಣ, ಗ್ರಾಮೀಣ ಭಾಗದಿಂದ ಅನೇಕರು ವಾಸವಿ ಮಹಲ್ ರಸ್ತೆ, ಲಕ್ಷ್ಮೀಬಜಾರ್, ಬಿ.ಡಿ.ರಸ್ತೆಯ ಬಟ್ಟೆ ಅಂಗಡಿಗಳಿಗೆ ಲಗ್ಗೆ ಇಟ್ಟಿದ್ದರು. ಹೀಗಾಗಿ ಜನಸಂದಣಿ ಹೆಚ್ಚಾಗಿತ್ತು. ಬೀದಿ ಬದಿಯಲ್ಲೂ ವ್ಯಾಪಾರ ಜೋರಾಗಿ ನಡೆಯಿತು.
ಹೆಚ್ಚಿನ ಜನಸಂದಣಿ ಉಂಟಾಗಿದ್ದರಿಂದಾಗಿ ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಉಲ್ಬಣಗೊಂಡಿತು. ಕೆಲ ಗಂಟೆಗಳ ಕಾಲ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬೆಳಗ್ಗೆಯಿಂದ ಸಂಜೆಯವರೆಗೂ ಜನದಟ್ಟಣೆ ಇತ್ತು. ಬುಧವಾರವೂ ವ್ಯಾಪಾರ ಚಟುವಟಿಕೆ ಗರಿಗೆದರಲಿದೆ.
ಅಮಾವಾಸ್ಯೆ ಪೂಜೆ
ಅಮಾವಾಸ್ಯೆ ಅಂಗವಾಗಿ ಅನೇಕರು ತಮ್ಮ ವಾಹನಗಳನ್ನು ಸ್ವಚ್ಛಗೊಳಿಸಿ, ಪೂಜೆ ಸಲ್ಲಿಸಿದರು. ಮನೆಗಳಲ್ಲಿನ ದೇವರ ವಿಗ್ರಹಗಳಿಗೆ, ಕಳಶದ ಹಾರಗಳಿಗೆ 200 ರೂ.ನಿಂದ 500 ರೂ., ಹಿರಿಯರ ಪೂಜೆಗೂ ಇದೇ ದರದಲ್ಲಿ ಹಾರಗಳನ್ನು ಸಿದ್ಧಪಡಿಸಲಾಗಿತ್ತು. ದೇಗುಲಗಳಲ್ಲಿನ ದೇವರ ಮೂರ್ತಿಗಳಿಗೆ 500 ರೂ. ಗಳಿಂದ 3 ಸಾವಿರ ರೂ.ವರೆಗೂ ಭಕ್ತರ ಅಭಿರುಚಿಗೆ ತಕ್ಕಂತೆ ಹಾರಗಳು ಮಾರುಕಟ್ಟೆಯಲ್ಲಿ ತಯಾರಾಗಿದ್ದವು.
ತೆಂಗಿನಕಾಯಿ 15 ರೂ.ಗಳಿಂದ 30 ರೂ.ವರೆಗೂ ಮಾರಾಟವಾದವು. ಸೇಬು, ಬಿಕ್ಕೆ, ಮೋಸುಂಬಿ, ದ್ರಾಕ್ಷಿ, ಬಾಳೆ ಹಣ್ಣು ಕ್ರಮವಾಗಿ 160 ರೂ., 60 ರೂ., 80 ರೂ., 50 ರೂ., 70 ರೂ. ದರ ಇತ್ತು. ಚಂದ್ರದರ್ಶನ ದಿನದಂದು ಹೂ, ಹಣ್ಣು ಒಳಗೊಂಡು ಇತರೆ ಪದಾರ್ಥಗಳನ್ನು ಖರೀದಿಯೂ ಇರುತ್ತದೆ.
ಹೂ ಬೆಳೆಗಾರರಲ್ಲಿ ಸಂತಸ
ಎಪಿಎಂಸಿ ಆವರಣದ ಹೂವಿನ ಮಾರುಕಟ್ಟೆ ವಿವಿಧ ಬಗೆಯ ಪುಷ್ಪಗಳ ರಾಶಿಯಿಂದ ಭರ್ತಿಯಾಗಿತ್ತು. ಖರೀದಿಗಾಗಿ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೂ ಒಳಗೆ ಪ್ರವೇಶಿಸಲು ಸಾಧ್ಯವಿಲ್ಲದ ವಾತಾವರಣ ನಿರ್ಮಾಣವಾಗಿತ್ತು. ನೂರಾರು ಬೆಳೆಗಾರರು ಹೂವಿನ ಮೂಟೆಗಳನ್ನು ಹೊತ್ತು ತಂದಿದ್ದರು.
ಹಳದಿ, ಬಿಳಿ, ಕೆಂಪು, ನೇರಳೆ ಸೇರಿ ವಿವಿಧ ವರ್ಣದ ಸೇವಂತಿಯ 6 ರಿಂದ 8 ಮಾರು ಪುಷ್ಪಕ್ಕೆ ತಲಾ 1,000 ರೂ., ಇದೇ ದರಕ್ಕೆ ಕನಕಾಂಬರ ಮತ್ತು ಮಲ್ಲಿಗೆ ಖರೀದಿಯಾಗುತ್ತಿದ್ದವು. ವಿವಿಧ ಬಣ್ಣಗಳ ಗುಲಾಬಿ (ಬಟನ್ಸ್) ಹೂಗಳು ಕೆಜಿಗೆ 250 ರೂ. ಗಳಿಂದ 350 ರೂ. ಗಳವರೆಗೂ ಮಾರಾಟವಾದವು. ಉತ್ತಮ ಬೆಲೆ ಸಿಕ್ಕಿದ್ದರಿಂದ ಹೂ ಬೆಳೆಗಾರರ ಮೊಗದಲ್ಲಿ ಸಂತಸ ಮನೆ ಮಾಡಿತ್ತು.