

ಮಂಗಳೂರು: ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ ದಕ್ಷಿಣಾಮ್ನಾಯ ಶ್ರೀ ಶಾರದಾಪೀಠಂ, ಶೃಂಗೇರಿ ಇದರ ಶಾಖಾ ಮಠವಾಗಿರುವ ಕೋಟೆಕಾರು ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಡಿ.26ರಂದು ಮಧ್ಯಾಹ್ನ 12ಗಂಟೆಗೆ ಶ್ರೀ ಗಣಪತಿ, ಶ್ರೀ ಶಾರದಾ ಹಾಗೂ ಶ್ರೀ ಶಂಕರಾಚಾರ್ಯರ ದೇವಸ್ಥಾನಗಳು, ಗುರುನಿವಾಸ, ಸಭಾಮಂಟಪದ ‘ಶಿಲಾನ್ಯಾಸ’ ಕಾರ್ಯಕ್ರಮ ನಡೆಯಲಿದೆ.
ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರ ಭಾರತೀತೀರ್ಥ ಸ್ವಾಮೀತಿ ಹಾಗೂ ಹಾಗೂ ತತ್ಕರಕಮಲ ಸಂಜಾತ ವಿಧುಶೇಖರ ಭಾರತೀ ಸ್ವಾಈಜಿ ಪರಮಾನುಗ್ರಹದಿಂದ ವಿಧುಶೇಖರ ಭಾರತೀ ಸ್ವಾಮೀಜಿ ಅಮೃತಹಸ್ತದಿಂದ ಶಿಲಾನ್ಯಾಸ ನೆರವೇರಲಿದೆ ಎಂದು ಕೋಟೆಕಾರು ಶ್ರೀ ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಗ್ಗೆ 11ಕ್ಕೆ ಕೋಟೆಕಾರು ಶೃಂಗೇರಿ ಶಂಕರ ಮಠಕ್ಕೆ ವಿಧುಶೇಖರ ಭಾರತಿ ಸ್ವಾಮೀಜಿ ಆಗಮಿಸಲಿದ್ದು, ಈ ಸಂದರ್ಭ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು. ಮಧ್ಯಾಹ್ನ 12 ಗಂಟೆಗೆ ಶ್ರೀ ಜಗದ್ಗುರುಗಳ ಅಮೃತಹಸ್ತದಿಂದ ಶ್ರೀಗಣಪತಿ, ಶ್ರೀಶಾರದಾ ಹಾಗೂ ಶ್ರೀ ಶಂಕರಾಚಾರ್ಯರ ದೇವಸ್ಥಾನಗಳು, ಗುರುನಿವಾಸ, ಸಭಾಮಂಟಪ ಹಾಗೂ ವಾಣಿಜ್ಯ ಸಂಕೀರ್ಣದ ಶಿಲಾನ್ಯಾಸ ನೆರವೇರಲಿದೆ. ಮಧ್ಯಾಹ್ನ ಘಂಟೆ 1ಕ್ಕೆ ಧೂಳೀ ಪಾದಪೂಜೆ, ಸಮಷ್ಟಿ ಭಿಕ್ಷೆ, ಸಂಘಸಂಸ್ಥೆಗಳಿಂದ ಲಪುಷ್ಪ ಸಮರ್ಪಣೆ, ಶ್ರೀ ಜಗದ್ಗುರುಗಳವರಿಂದ ಆಶೀರ್ವಚನ, ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 2ರಿಂದ ಪ್ರಸಾದ ಭೋಜನ ನಡೆಯಲಿದೆ ಎಂದರು.
ಈ ದೇವಸ್ಥಾನಗಳ ಪುನರ್ನಿರ್ಮಾಣ ಕಾರ್ಯ ಇಲ್ಲಿನ ಭಕ್ತರ ಬಹುದಿನಗಳ ಕನಸಾಗಿದ್ದು, ಇದೀಗ ಜಗದ್ಗುರುಗಳ ಅನುಗ್ರಹದಿಂದ ನೆರವೇರುತ್ತಿರುವುದು ಭಕ್ತರಲ್ಲಿ ಸಂತಸಕ್ಕೆ ಕಾರಣವಾಗಿದೆ. ಈಗಾಗಲೇ ಇದಕ್ಕೆ ಅಗತ್ಯವಾದ ಯೋಜನೆಗಳು ಸಿದ್ಧಗೊಂಡಿದ್ದು, ಶಿಲಾನ್ಯಾಸದ ಬಳಿಕ ನಿರ್ಮಾಣ ಕಾರ್ಯಕ್ಕೆ ವೇಗ ಲಭಿಸಲಿದೆ ಎಂದರು.
ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಪ್ರಧಾನ ಸಂಚಾಲಕ ವಿದ್ಯಾಶಂಕರ ಬೊಳ್ಳಾವ, ಪ್ರಧಾನ ಕಾರ್ಯದರ್ಶಿ ಸೀತಾರಾಮ ಕೊಪ್ಪಲು, ಸಂಚಾಲಕ ಶಿವಪ್ರಸಾದ್ ಆಚಾರ್ಯ ವಿದ್ಯಾನಗರ ಕೊಂಡಾಣ, ಕಾರ್ಯದರ್ಶಿ ದೇವದಾಸ್ ರೈಘಿ ಮೇನಾಲ, ಉಪಾಧ್ಯಕ್ಷ ಮಾಧವ ಉಳ್ಳಾಲ ಉಪಸ್ಥಿತರಿದ್ದರು.