

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಕಳೆದ ವಾರ ಅಧಿಕಾರಿಗಳ ಗೈರಿನಿಂದ ರದ್ದುಪಡಿಸಲಾಗಿದ್ದ ಸಭೆ ಬುಧವಾರ ಮತ್ತೆ ಹಮ್ಮಿಕೊಂಡರೂ ಈ ಬಾರಿಯೂ ಅಧಿಕಾರಿಗಳು ಗೈರಾಗಿದ್ದು ಸದಸ್ಯರ ಅಸಮಾಧಾನಕ್ಕೆ ಕಾರಣವಾಯಿತು.
ಮೇ 28ರಂದು ನಡೆದಿದ್ದ ಸಾಮಾನ್ಯ ಸಭೆಯಲ್ಲಿ ಎರಡು ಇಲಾಖೆಗಳ ಅಧಿಕಾರಿಗಳು ಮಾತ್ರ ಭಾಗಿಯಾಗಿದ್ದು ಇತರರ ಗೈರಿನ ಹಿನ್ನೆಲೆಯಲ್ಲಿ ಒಂದು ಗಂಟೆ ಸಭೆ ನಡೆಸಿ ರದ್ದುಪಡಿಸಿ ಜುಲೈ 2ಕ್ಕೆ ನಿಗದಿಪಡಿಸಲಾಗಿತ್ತು. ಈ ಸಭೆಯಲ್ಲಿ ಮಹಿಳಾ ಮತ್ತು ಶಿಶು ಅಭಿವೃದ್ಧಿ ಹಾಗೂ ಆರೋಗ್ಯಾಧಿಕಾರಿ ಮಾತ್ರ ಭಾಗವಹಿಸಿದ್ದು ಇತರ ಇಲಾಖೆಗಳ ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಾಧಿಕಾರಿ ವಿರುದ್ಧ ಆಕ್ರೋಶ: ನೀವು ಸರಿಯಾಗಿ ಕೆಲಸ ಮಾಡದ ಕಾರಣ ಇಲಾಖೆಯ ಅಧಿಕಾರಿಗಳು ಬರುತ್ತಿಲ್ಲ. ಎಷ್ಟು ಇಲಾಖೆಗಳಿಗೆ ಸಭೆಯ ಬಗ್ಗೆ ಪತ್ರ ಬರೆದಿದ್ದೀರಿ? ನಮ್ಮ ಸಭೆಗೆ ಅಧಿಕಾರಿಗಳು ಬರುತ್ತಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ಕೂರೋಣವೇ? ನಾವಿಲ್ಲಿ ಬಂದು ಚಹಾ ಕುಡಿದು, ಊಟ ಮಾಡಿ ಹೋದರೆ ಏನು ಪ್ರಯೋಜನ? ಮುಂದಿನ ಸಭೆಗೂ ಅಧಿಕಾರಿಗಳು ಬರದಿದ್ದರೆ ಮತ್ತೆ ಸಭೆ ರದ್ದುಪಡಿಸುವುದಾಗಿ ಕಳೆದ ಸಭೆಯಲ್ಲಿ ಅಧ್ಯಕ್ಷರೇ ಹೇಳಿದ್ದರು. ರಾಷ್ಟ್ರೀಯ ಹೆದ್ದಾರಿ, ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆಯಿಂದ ಆಗಬೇಕಾದ ದೇರಳಕಟ್ಟೆ ರಸ್ತೆ ಸಮಸ್ಯೆಗೆ ಪ.ಪಂ.ನಿಂದ ಪರಿಹಾರ ಸಾಧ್ಯವೇ? ಎಂದು ಪ.ಪಂ. ಸದಸ್ಯ ಸುಜಿತ್ ಮಾಡೂರು ಪ್ರಶ್ನೆಗಳ ಸುರಿಮಳೆಗೈದರು.
ಮುಖ್ಯಾಧಿಕಾರಿ ಇತರ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಕಾಪಾಡಬೇಕು. ಸಾಮಾನ್ಯ ಸಭೆಗೆ ಎಷ್ಟು ಅಧಿಕಾರಿಗಳು ಬರಬೇಕು? ಯಾಕೆ ಬರುತ್ತಿಲ್ಲ ಎನ್ನುವುದಕ್ಕೆ ತಾರ್ಕಿಕತೆ ಬೇಕು ಎಂದು ಸದಸ್ಯ ಅಹ್ಮದ್ ಅಜ್ಜಿನಡ್ಕ ಮಾತಿಗೆ ಇತರ ಸದಸ್ಯರು ಧ್ವನಿಗೂಡಿಸಿದರು.
ಪತ್ರ ಬಂದಿರಲಿಲ್ಲ ಎಂದ ಅಧಿಕಾರಿ: ಕಳೆದ ಸಭೆಗೂ ಇಲ್ಲಿಂದ ನೋಟಿಸ್ ಹೋಗಿಲ್ಲ ಎನ್ನುವ ದಾಖಲೆ ಇದೆ ನಮ್ಮ ಬಳಿ ಇದೆ ಎಂದು ಸುಜಿತ್ ಆರೋಪಿಸಿದರು. ಕಳೆದ ಸಾಮಾನ್ಯ ಸಭೆಯ ಬಗ್ಗೆ ನಮಗೆ ಪತ್ರ ಬಂದಿರಲಿಲ್ಲ, ಈ ಬಾರಿ ಬಂದಿದೆ ಎಂದು ಆರೋಗ್ಯಾಧಿಕಾರಿ ಡಾ.ಲಲಿತಾ ತಿಳಿಸಿದರು. ಅಗತ್ಯ ಇದ್ದವರಿಗೆ ಮಾತ್ರ ನೋಟಿಸ್ ನೀಡಲಾಗಿದೆ ಎಂದ ಅಧ್ಯಕ್ಷೆ ದಿವ್ಯಾ ಮತ್ತು ಮುಖ್ಯಾಧಿಕಾರಿ ಮಾಲಿನಿ ತಿಳಿಸಿದರು.
ಪಿಎಚ್ಸಿಯಲ್ಲಿ ಹುದ್ದೆ ಖಾಲಿ: ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಭಾನುವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದರೆ ಚುಚ್ಚುಮದ್ದು ನೀಡಲು ಸೋಮವಾರ ಬರುವಂತೆ ಹಿಂದಕ್ಕೆ ಕಳಿಸುತ್ತಾರೆಂದು ಸದಸ್ಯೆ ಸೆಲಿಮಾಬಿ ದೂರಿದರು. ಕುತ್ತಿಗೆ, ಮುಖ, ಕೈಗೆ ನಾಯಿ ಕಚ್ಚಿದರೆ ತಕ್ಷಣ ಚುಚ್ಚುಮದ್ದು ತೆಗೆದುಕೊಳ್ಳಬೇಕು. ಪ್ರತಿದಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚುಚ್ಚುಮದ್ದು ಕೊಡುತ್ತಾರೆ. ಭಾನುವಾರ ತೀವ್ರತರದ ಪ್ರಕರಣ ಇದ್ದರೆ ವೆನ್ಲಾಕ್ಗೆ ಕಳಿಸುತ್ತಾರೆ. ಇಲ್ಲದಿದ್ದರೆ ಸೋಮವಾರ ಕೇಂದ್ರದಲ್ಲೇ ಚುಚ್ಚುಮದ್ದು ಕೊಡಲಾಗುತ್ತದೆ. ಈ ವರ್ಷ ಮಲೇರಿಯಾ ಪ್ರಕರಣ ವರದಿಯಾಗಿಲ್ಲ. ಒಂದೆರಡು ಡೆಂಘೆ ಪ್ರಕರಣ ವರದಿಯಾಗಿದೆ. ಕೋಟೆಕಾರ್ ಆರೋಗ್ಯ ಕೇಂದ್ರದಲ್ಲಿ ಸ್ಟಾಫ್ ನರ್ಸ್, ಹಿರಿಯ ಸುರಕ್ಷಾ ಅಧಿಕಾರಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸೇರಿ ಮೂರು ಹುದ್ದೆ ಖಾಲಿಯಿದೆ ಎಂದು ಆರೋಗ್ಯಾಧಿಕಾರಿ ತಿಳಿಸಿದರು.
ಅಂಗನವಾಡಿಗೆ ಜಮೀನು: ಒಂಬತ್ತು ಮತ್ತು ಹತ್ತನೇ ವಾರ್ಡ್ ಗಡಿಯಲ್ಲಿ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಮೂರೂವರೆ ಸೆಂಟ್ಸ್ ಜಮೀನು ನೀಡುವ ಬಗ್ಗೆ ಸಂಬಂಧಪಟ್ಟವರ ಜತೆ ಮಾತುಕತೆ ಆಗಿದ್ದು ದಾನಪತ್ರ ಶೀಘ್ರ ನೀಡಲಿದ್ದಾರೆ ಎಂದು ಸದಸ್ಯ ಧೀರಜ್ ಮಾಹಿತಿ ನೀಡಿದರು. ಕೋಟೆಕಾರ್ನಲ್ಲಿ ಎಷ್ಟು ಅಂಗನವಾಡಿಗಳಿವೆ? ಅಲ್ಲಿ ಬಾಲವಿಕಾಸ ಸಮಿತಿ ಸಭೆ ನಡೆಯುತ್ತದೆಯೇ? ಇದುವರೆಗೆ ನಮ್ಮನ್ನು ಸಭೆಗೆ ಕರೆದೇ ಇಲ್ಲ ಎಂದು ಅಹ್ಮದ್ ಅಜ್ಜಿನಡ್ಕ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿ ತಿಂಗಳು ಅಂಗನವಾಡಿಯಲ್ಲಿ ಬಾಲವಿಕಾಸ ಸಮಿತಿಯ ಸಭೆ ಕರೆಯಬೇಕು ಎಂದಿದೆ ಎಂದು ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ಶಂಕರಿ ಹೇಳಿದರು.
ಪ.ಪಂ. ಅಧ್ಯಕ್ಷೆ ದಿವ್ಯಾ ಸತೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪ್ರವೀಣ್ ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಶೆಟ್ಟಿ, ಮುಖ್ಯಾಧಿಕಾರಿ ಮಾಲಿನಿ ಉಪಸ್ಥಿತರಿದ್ದರು.
ಯಾರನ್ನು ಕರೆಯಬೇಕು ಎಂದು ಗೊಂದಲ
ಅಧಿಕಾರಿಗಳ ಗೈರಿನ ಬಗ್ಗೆ ಧೀರಜ್ ಪ್ರಸ್ತಾಪಿಸಿ ಅಧಿಕಾರಿಗಳಿಗೆ ಸಭೆಯ ಬಗ್ಗೆ ಮಾಹಿತಿಯನ್ನೇ ನೀಡದಿದ್ದರೆ ಅವರು ಬರುವುದು ಹೇಗೆ? ನೀವು ಪತ್ರವನ್ನೇ ಬರೆಯದ ಬಗ್ಗೆ ಕಳೆದ ಸಭೆಯಲ್ಲಿ ಹೇಳಿದ್ದರೆ ಸಭೆ ರದ್ದುಪಡಿಸುವ ಅಗತ್ಯ ಏನಿತ್ತು? ಗ್ರಾಮ ಲೆಕ್ಕಾಧಿಕಾರಿ ಸನಿಹದಲ್ಲಿದ್ದರೂ ಬರುತ್ತಿಲ್ಲ ಏಕೆ? ಮಳೆಗಾಲದಲ್ಲಿ ಕಂದಾಯ, ಲೋಕೋಪಯೋಗಿ, ಮೆಸ್ಕಾಂ ಅಧಿಕಾರಿಗಳ ಅಗತ್ಯವಿದೆ ಎಂದರು. ನಾವು ಯಾವ ಇಲಾಖೆಯ ಅಧಿಕಾರಿಗಳನ್ನು ಕರೆಯಬೇಕು? ಎಲ್ಲ ಇಲಾಖೆಗಳನ್ನು ಕರೆಯಬೇಕೇ ಎನ್ನುವ ಬಗ್ಗೆ ಗೊಂದಲವಿದೆ. ಸಭೆಯಲ್ಲಿ ತೀರ್ಮಾನಿಸಿದರೆ ಮುಂದಿನ ಸಭೆಗೆ ಪತ್ರ ಬರೆಯಲಾಗುವುದು ಎಂದು ಮುಖ್ಯಾಧಿಕಾರಿ ಮಾಲಿನಿ ತಿಳಿಸಿದರು.
ಲೇಔಟ್ಗಳಿಂದ ರಾಜಕಾಲುವೆ ಮಾಯ
ಮಾಡೂರು-ಕೊಂಡಾಣ ಸ್ಮಶಾನದ ಬಳಿಯ ರಸ್ತೆ ಭಾಗದಲ್ಲಿ ನಿರ್ಮಾಣಗೊಂಡಿರುವ ಕೆಲವು ಲೇಔಟ್ಗಳಿಂದಾಗಿ ರಾಜ ಕಾಲುವೆಯೇ ಇಲ್ಲದಂತಾಗಿದೆ. ಉಚ್ಚಿಲ, ಕಾಚಾರ್ನಲ್ಲೂ ಈ ಸಮಸ್ಯೆ ದೊಡ್ಡ ಮಟ್ಟದಲ್ಲಿದೆ. ಉಚ್ಚಿಲದಲ್ಲಿ ಅಳಿವೆ ಬಾಗಿಲು ಕಾರಣವಾದರೆ ಮಾಡೂರಿನಲ್ಲಿ ಖಾಸಗಿ ವ್ಯಕ್ತಿಗಳಿಂದಾಗಿ ಸಮಸ್ಯೆ ಉಂಟಾಗಿದೆ ಎಂದು ಧೀರಜ್ ಆರೋಪಿಸಿದರು. ನೂತನ ಮನೆ ಕಟ್ಟುವವರಿಗೆ ಖಾತೆಯಲ್ಲಿಯೇ ಮುನ್ನೆಚ್ಚರಿಕೆ ಕ್ರಮವಾಗಿ ಕಾಲುವೆಗೆ ಮೀಸಲಿಟ್ಟ ಸ್ಥಳ ಎಂದು ನಮೂದಿಸುವಂತೆ ಕ್ರಮ ಕೈಗೊಳ್ಳುವುದಾಗಿ ಎಂದು ಅಧ್ಯಕ್ಷರು ತಿಳಿಸಿದರು.