ಗದ್ದಲಕೆ ಕಾರಣವಾದ ಗುಜರಿ : ಪಕ್ಷಾತೀತವಾಗಿ ವಿರೋಧಿಸಿದ ಸದಸ್ಯರು : ಕೋಟೆಕಾರ್ ಪಪಂ ಸಾಮಾನ್ಯ ಸಭೆ

New Project (21)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಆಡಳಿತ ಪಕ್ಷದ ಸದಸ್ಯನ ಗುಜರಿ ಗ್ರಾಮ ಪ್ರಸ್ತಾಪದ ವಿರುದ್ಧ ಆಡಳಿತದ ಜತೆ ವಿಪಕ್ಷ ಸದಸ್ಯರೂ ತಿರುಗಿಬಿದ್ದರು. ಸಭೆಯಲ್ಲಿ ಒಬ್ಬರೇ ಮಾತನಾಡುತ್ತಾರೆ ಎಂದೂ ಆಡಳಿತದ ಜತೆ ಪ್ರತಿಪಕ್ಷ ಸದಸ್ಯರು ಮುಗಿಬಿದ್ದ ಪ್ರಸಂಗ ಮಂಗಳವಾರ ಕೋಟೆಕಾರ್ ಪಪಂ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಕಳೆದ ಸಭೆಯಲ್ಲಿ ಹೇಳಿದಂತೆ ನಮ್ಮದು ಗುಜರಿ ಗ್ರಾಮವೇ ಹೌದು. ಅತಿ ಶ್ರೀಮಂತರು ಇರುವುದೇ ಗುಜರಿ ವ್ಯಾಪಾರಿಗಳು. ಆದರೆ ಅವರು ಥರ್ಮಾಕೋಲ್ ಕೂಡ ವಿಲೇವಾರಿ ಮಾಡದೆ ರಾಶಿ ಹಾಕುತ್ತಾರೆ. ಕೋಟೆಕಾರ್‌ಗೆ ಬರುವ ದಾರಿಯಲ್ಲಿ ಶಾಲೆ ಹಿಂಭಾಗದಲ್ಲೇ ಗುಜರಿ ರಾಶಿ ಹಾಕಲಾಗಿದೆ. ಕಾಚಾರ್ ಗುಜರಿ ಅಂಗಡಿ ತೆರವಿಗಾಗಿ ಎಲ್ಲ ಇಲಾಖೆಯಿಂದ ಆದೇಶ ಬಂದಿದೆ. ನೀವು ಫೈಲ್ ಇಟ್ಟುಕೊಂಡು ಏನೂ ಮಾಡಿಲ್ಲ. ಡೋರ್ ನಂಬರ್ ರದ್ದುಪಡಿಸಿದರೆ ಕಾರ್ಯಾಚರಿಸುತ್ತಿರುವುದು ಹೇಗೆ ಎಂದು ದಾಖಲೆ ನೀಡಿ ಎಂಬುದಾಗಿ ಮುಖ್ಯಾಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯನ ಬಳಿಯಿರುವ ದಾಖಲೆ ಪಪಂನಲ್ಲಿ ಇಲ್ಲ ಎಂದು ಅಹ್ಮದ್ ಅಜ್ಜಿನಡ್ಕ ಹೇಳಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮೂರೂ ಗುಜರಿ ಅಂಗಡಿಗಳಿಗೆ ಭೇಟಿ ನೀಡಿ ನೋಟಿಸ್ ನೀಡಲಾಗಿದೆ. ನೀವು ಹಾಗೆ ಮಾತನಾಡಿದರೆ ಆಡಳಿತ ಬಗ್ಗೆ ತಪ್ಪು ಮಾಹಿತಿ ಹೋಗುತ್ತದೆ ಎಂದು ಅಧ್ಯಕ್ಷೆ ದಿವ್ಯಾ ಅಸಮಾಧಾನ ವ್ಯಕ್ತಪಡಿಸಿದರು.

ಕಾಚಾರ್ ಬಳಿಯ ಗುಜರಿ ಅಂಗಡಿಗೆ ಪರವಾನಗಿ ಕೊಟ್ಟಿಲ್ಲ. ನೀರು ನಿಲ್ಲದಂತೆ ನೋಡಿಕೊಳ್ಳಲು ಇತರ ಗುಜರಿ ಅಂಗಡಿಗಳಿಗೂ ನೋಟಿಸ್ ನೀಡಲಾಗಿದೆ ಎಂದು ಆರೋಗ್ಯಾಧಿಕಾರಿ ವಿಕ್ರಂ ಮಾಹಿತಿ ನೀಡಿದರು. ಡೋರ್ ನಂಬರ್ ರದ್ದುಪಡಿಸಲಾಗಿದೆ ಎಂದು ಮುಖ್ಯಾಧಿಕಾರಿ ಮಾಲಿನಿ ಸಬೂಬು ನೀಡಿದರು.

ನಾವು ಪರವಾನಗಿ ಕೊಟ್ಟಿಲ್ಲ ಎಂದರೆ ಅಲ್ಲಿರುವ ಗುಜರಿ ವಸ್ತುಗಳನ್ನು ಪಪಂಗೆ ತರೋಣ, ಇಲ್ಲದಿದ್ದರೆ ಬೀಗ ಜಡಿಯೋಣ ಎಂದು ಧೀರಜ್ ಪ್ರತಿಪಾದಿಸಿ, ಗುಜರಿ ಗ್ರಾಮ ಹೇಳಿಕೆ ಹಿಂಪಡೆಯಬೇಕು, ಇದು ಎಲ್ಲ ಸದಸ್ಯರಿಗೆ ಮಾಡಿದ ಅವಮಾನ ಎಂದರು. ಅಧ್ಯಕ್ಷೆ, ಉಪಾಧ್ಯಕ್ಷರ ಸಹಿತ ಆಡಳಿತ, ವಿಪಕ್ಷ ಸದಸ್ಯರು ಧ್ವನಿಗೂಡಿಸಿ ಕ್ಷಮೆ ಕೇಳುವಂತೆ ಆಗ್ರಹಿಸಿದರು.

ಮುಂದಿನ ಸಭೆಯೊಳಗೆ ಸಮಸ್ಯೆ ಸರಿಪಡಿಸುವ ಭರವಸೆ ನೀಡಿದರೆ ವಿಷಾದ ವ್ಯಕ್ತಪಡಿಸುತ್ತೇನೆಂದು ಸುಜಿತ್ ಪ್ರತಿಪಾದಿಸಿದಾಗ ಎಲ್ಲರೂ ತಿರುಗಿಬಿದ್ದರು. ನೀವು ಕ್ಷಮೆ ಕೇಳ್ತೀರಾ, ಇಲ್ಲವಾ ಎಂದು ಅಧ್ಯಕ್ಷೆ ಪ್ರಶ್ನಿಸಿದರು. ಎಲ್ಲ ಸದಸ್ಯರ ಆಕ್ಷೇಪ ಬಳಿಕ ಹೇಳಿಕೆ ಹಿಂಪಡೆಯುವುದಾಗಿ ಸುಜಿತ್ ತಿಳಿಸಿದರು.

ಒಬ್ಬರೇ ಮಾತನಾಡ್ತಾರೆ: ಸಭೆಯಲ್ಲಿ ಸುಜಿತ್ ಒಬ್ಬರೇ ಮಾತನಾಡ್ತಾರೆ. ನಾವು ಮಾತನಾಡುವಾಗಲೂ ಮಧ್ಯೆ ಪ್ರವೇಶಿಸುತ್ತಾರೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಸಭಾಂಗಣಗಳಿಂದ ಟ್ರಾಫಿಕ್ ಕಿರಿಕ್ ಮೊದಲಾದ ವಿಷಯದ ಬಗ್ಗೆ ಚರ್ಚೆ ನಡೆಯಿತು. ಪಪಂ ಅಧ್ಯಕ್ಷೆ ದಿವ್ಯಾ ಸತೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪ್ರವೀಣ್ ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಶೆಟ್ಟಿ, ಮುಖ್ಯಾಧಿಕಾರಿ ಮಾಲಿನಿ, ಅಂಗನವಾಡಿ ಮೇಲ್ವಿಚಾರಕಿ ಶಂಕರಿ ಇದ್ದರು.

ನಾಮನಿರ್ದೇಶಿತ ಸದಸ್ಯೆಗೆ ಪಾಠ

ನಾಮನಿರ್ದೇಶಿತ ಸದಸ್ಯೆಯೊಬ್ಬರು ಚುನಾಯಿತ ಸದಸ್ಯರಿಗಿಂತಲೂ ಹೆಚ್ಚಾಗಿ ಚರ್ಚೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸಭೆ ಕೊನೆಯಲ್ಲಿ ಸುಜಿತ್ ಆಕ್ಷೇಪ ವ್ಯಕ್ತಪಡಿಸಿದರು. ಸದಸ್ಯೆ ಆಕ್ಷೇಪಿಸಿ ನನ್ನ ವಾರ್ಡಿನ ಸಮಸ್ಯೆ ಬಗ್ಗೆ ಕೇಳ್ತೇನೆ, ಹೇಳಲು ನೀವ್ಯಾರು? ಎಂದಾಗ ಕಾಂಗ್ರೆಸ್ ಸದಸ್ಯರು ಬೆಂಬಲ ನೀಡಿದರು. ಆಡಳಿತ ಪಕ್ಷದ ಧೀರಜ್ ಮಾತನಾಡಿ, ನಾಮನಿರ್ದೇಶಿತ ಸದಸ್ಯರಿಗೆ ಇರುವ ಇತಿಮಿತಿ ಬಗ್ಗೆ ವಿಪಕ್ಷ ಸದಸ್ಯರು ತಿಳಿ ಹೇಳಬೇಕು ಎಂದು ಸಲಹೆ ನೀಡಿದರು.

ಮಾಡೂರು ಸೈಟ್‌ನಲ್ಲಿ ಹಕ್ಕುಪತ್ರ ನೀಡುವ ಸಂದರ್ಭ ಸರ್ವೇ ನಂಬರ್ ಬದಲಾಗುತ್ತಾ ಬರುತ್ತಿದೆ. ಇದರಿಂದ ಬ್ಯಾಂಕ್ ಸಾಲ ಪಡೆಯಲು ಸಮಸ್ಯೆ ಆಗುತ್ತಿದೆ. ಇನ್ನೂರು ಮನೆಗಳಿಗೆ ಸರ್ವೇ ನಂಬರ್ ಸಮಸ್ಯೆ ಇದೆ. ಇಷ್ಟು ಸಾಮಾನ್ಯ ಸಭೆಯಾದರೂ ವಿಎ ಒಂದೇ ಒಂದು ಸಭೆಗೆ ಬಂದಿಲ್ಲ, ಆ ಬಗ್ಗೆ ನಿರಂತರ ಚರ್ಚೆ ನಡೆದರೂ ಕೈಗೊಂಡ ಕ್ರಮವೇನು ಎಂದು ಸುಜಿತ್ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net