6 ತಿಂಗಳ ಹಿಂದೆಯೇ ಸಿದ್ಧವಾಗಿತ್ತು ಬ್ಯಾಂಕ್ ದರೋಡೆ ಯೋಜನೆ; ಪ್ರಕರಣ ಬಿಚ್ಚಿಟ್ಟ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್

IMG_20250127_124936
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: null;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: off;albedo: ;confidence: ;motionLevel: -1;weatherinfo: null;temperature: 37;
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು

ರಾಜ್ಯದ ಗಮನ ಸೆಳೆದ ಮಂಗಳೂರು ಕೋಟೆಕಾರು ಕೋ ಆಪರೇಟಿವ್ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಆರು ತಿಂಗಳ ಹಿಂದೆಯೇ ರೂಪುರೇಷೆ ಸಿದ್ಧಪಡಿಸಲಾಗಿತ್ತು.

ಆರೋಪಿಗಳು ಮುಂಬೈ ತಲೋಜಾ ಜೈಲ್‌ನಲ್ಲಿ ಒಬ್ಬರಿಗೊಬ್ಬರು ಪರಿಚಿತರಾಗಿದ್ದರು. ಮುಂಬೈ ನಿವಾಸಿ ಶಶಿ ತೇವಾರ್ ಎಂಬಾತ ಮಂಗಳೂರಿನ ಕೋಟೆಕಾರು ಬ್ಯಾಂಕ್ ದರೋಡೆಗೆ ಅತ್ಯಂತ ಸುರಕ್ಷಿತ ಎಂದು ಮಾಹಿತಿ ನೀಡಿದ್ದನು. ಇದನ್ನು ಆಧರಿಸಿ ಮುರುಗಂಡಿ ತೇವರ್ ಮತ್ತು ಇತರರು ಕೋಟೆಕಾರು ಪ್ರದೇಶಕ್ಕೆ ಆಗಮಿಸಿ ದರೋಡೆ ಸಂದರ್ಭ ಯಾವ ಕಡೆಯಿಂದ ಎಂಟ್ರಿ ಕೊಡಬೇಕು? ಹೇಗೆ ನಿರ್ಗಮಿಸಬೇಕು? ಸುರಕ್ಷಿತ ಮಾರ್ಗ ಯಾವುದು ಎನ್ನುವ ಕುರಿತು ಪೂರ್ಣ ಅಧ್ಯಯನ ನಡೆಸಿದ್ದರು ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರಕರಣದ ಕಿಂಗ್‌ಪಿನ್ ತಮಿಳುನಾಡಿನ ಮುರುಗಂಡಿ ತೇವರ್(36), ಮುಂಬೈಯ ಯೊಸುವ ರಾಜೇಂದ್ರನ್(35), ಕಣ್ಣನ್ ಮಣಿ(36) ಮತ್ತು ತಮಿಳುನಾಡಿನ ಎಂ.ಷಣ್ಮುಗನ್ ಸುಂದರಂ(62) ಎಂಬುವರನ್ನು ಬಂಧಿಸಲಾಗಿದೆ. ಬಹುಪಾಲು ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

*ಎರಡು ಬಾರಿ ನಂಬರ್‌ಪ್ಲೇಟ್ ಬದಲು:

ಜ.16ರಂದು ಮುರುಗಂಡಿ ತೇವರ್ ಮತ್ತು ಇತರ ಮೂವರು ಮುಂಬೈ ತಿಲಕ್ ನಗರದಿಂದ ಫಿಯೆಟ್ ಕಾರಿನಲ್ಲಿ ಹೊರಟಿದ್ದರು. ಕಣ್ಣನ್ ಮಣಿ ಮತ್ತು ಇನ್ನೋರ್ವ ರೈಲಿನಲ್ಲಿ ಮಂಗಳೂರಿಗೆ ಆಗಮಿಸಿದ್ದರು. ಕಾರಿನ ನಂಬರ್ ಪ್ಲೇಟ್ ಅನ್ನು ಎರಡು ಬಾರಿ ಬದಲಿಸಲಾಗಿತ್ತು. ಉಡುಪಿ ಜಿಲ್ಲೆ ಬೈಂದೂರು ಸಮೀಪದ ಶಿರೂರು ಟೋಲ್‌ಗೇಟ್ ಬಳಿ ಕಾರಿಗೆ ಮುಂಬೈಯ ನಕಲಿ ನಂಬರ್‌ಪ್ಲೇಟ್ ಅಳವಡಿಸಿದ್ದು, ಸುರತ್ಕಲ್‌ನಲ್ಲಿ ಕರ್ನಾಟಕದ ನಕಲಿ ನಂಬರ್‌ಪ್ಲೇಟ್ ಅಳವಡಿಸಿದ್ದರು. ದರೋಡೆ ಬಳಿಕ ಮುರುಗಂಡಿ ತೇವರ್ ಮತ್ತು ಯೊಸುವ ರಾಜೇಂದ್ರನ್ ಕಾರಿನಲ್ಲಿ ತಲಪಾಡಿ ಟೋಲ್ ಮೂಲಕ ಕೇರಳಕ್ಕೆ ಪ್ರಯಾಣಿಸಿದ್ದರು. ಇಬ್ಬರು ಆರೋಪಿಗಳು ಆಟೋ ಮತ್ತು ಓರ್ವ ಬಸ್ ಮೂಲಕ ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದರು.

ಸಹಾಯಕ ಪೊಲೀಸ್ ಆಯುಕ್ತರಾದ ಧನ್ಯಾ ನಾಯಕ್, ಮನೋಜ್ ನಾಯಕ್, ಡಿಸಿಪಿಗಳಾದ ಕೆ.ರವಿಶಂಕರ್ ಮತ್ತು ಸಿದ್ಧಾರ್ಥ ಗೋಯಲ್ ಸುದ್ದಿಗೋಷ್ಠಿಯಲ್ಲಿದ್ದರು.

-----

*ವಶಪಡಿಸಿಕೊಂಡ ಸೊತ್ತು:

ಬ್ಯಾಂಕ್ ಆವರಣದಲ್ಲಿ ನಡೆಸಿದ ಮಹಜರು ಪ್ರಕಾರ 18.674 ಕೆ.ಜಿ. ಚಿನ್ನ ಹಾಗೂ 11,67,044 ರೂ. ದರೋಡೆಯಾಗಿದೆ. ಅದರಲ್ಲಿ 18.314 ಕೆ.ಜಿ. ಚಿನ್ನ ಹಾಗೂ 3,80,500 ರೂ. ವಶಪಡಿಸಿಕೊಳ್ಳಲಾಗಿದೆ. ಆರೋಪಿ ಮುರುಗಂಡಿ ತೇವರ್‌ನಿಂದ 2.029 ಕೆ.ಜಿ. ಚಿನ್ನ, 3,80,500 ರೂ., ಕೃತ್ಯಕ್ಕೆ ಬಳಸಿದ ಕಾರು, ಎರಡು ಪಿಸ್ತೂಲ್, ಎರಡು ಮಚ್ಚುಕತ್ತಿ, ಒಂದು ನಕಲಿ ನಂಬರ್‌ಪ್ಲೇಟ್ ಅನ್ನು ವಶಪಡಿಸಿಕೊಳ್ಳಲಾಗಿದೆ. 16.285 ಕೆ.ಜಿ. ಚಿನ್ನಾಭರಣವನ್ನು ಆತನ ತಂದೆ ಎಂ.ಷಣ್ಮುಗ ಸುಂದರಂನಿಂದ ವಶಪಡಿಸಿಕೊಳ್ಳಲಾಗಿದೆ.

-----

ಸುಳಿವು ನೀಡಿದ ಟೋಲ್ ಸಿಸಿ ಕ್ಯಾಮರಾ

ಪ್ರಕರಣ ನಡೆದ ಪ್ರಥಮ ಹಂತದಲ್ಲಿ ಯಾವುದೇ ಕ್ಲೂ ಇರಲಿಲ್ಲ. ಬ್ಯಾಂಕ್‌ನಲ್ಲಿದ್ದ ಒಂದು ಸಿಸಿ ಕ್ಯಾಮರಾ ದುರಸ್ತಿಯಲ್ಲಿತ್ತು. ಸೆಕ್ಯೂರಿಟಿ ಇರಲಿಲ್ಲ. ಆರೋಪಿಗಳು ಕಾರಿನಲ್ಲಿ ಪರಾರಿಯಾಗುವ ದೃಶ್ಯ ಪಕ್ಕದ ಕಟ್ಟಡದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಜಿಲ್ಲೆ ಹಾಗೂ ಆಸುಪಾಸಿನ ಜಿಲ್ಲೆಗಳ ಟೋಲ್‌ಗಳ ಸಿಸಿಟಿವಿಗಳನ್ನು ಪರಿಶೀಲಿಸಲಾಯಿತು. ಸೂಕ್ಷ್ಮವಾಗಿ ಪರಿಶೀಲಿಸಿದಾಗ ಶಿರೂರು ಟೋಲ್ ಸಿಸಿಟಿವಿಯಲ್ಲಿ ದೊರೆತ ಫಿಯೆಟ್ ಕಾರಿನ ಚಿತ್ರ ದರೋಡೆ ಪ್ರಕರಣಕ್ಕೆ ಮುಂಬೈ ನಂಟು ಇರುವುದನ್ನು ಖಚಿತಪಡಿಸಿತು. ಈ ಮಾಹಿತಿಯೊಂದಿಗೆ ತನಿಖೆ ಆರಂಭಗೊಂಡಿತು. ಪ್ರಕರಣದಲ್ಲಿ ಸೊತ್ತುಗಳನ್ನು ಪೂರ್ಣ ಪ್ರಮಾಣದಲ್ಲಿ ವಶಪಡಿಸಿಕೊಳ್ಳುವುದು ದೊಡ್ಡ ಸವಾಲು. ಆದರೆ ಈ ಪ್ರಕರಣದಲ್ಲಿ ನಮ್ಮ ಪೊಲೀಸರು ದಾಖಲೆ ಅವಧಿಯಲ್ಲಿ ದೊಡ್ಡ ಮಟ್ಟದ ಯಶಸ್ಸು ಪಡೆದಿದ್ದಾರೆ. ಕೆಲ ಗ್ರಾಂ ಚಿನ್ನಾಭರಣ, 7,86,544 ರೂ. ವಶಪಡಿಸಿಕೊಳ್ಳಲು ಬಾಕಿ ಇದೆ ಎಂದು ಕಮೀಷನರ್ ಹೇಳಿದರು.

------

ಸ್ಥಳೀಯ ವ್ಯಕ್ತಿಯ ಸಹಕಾರ?

ಪ್ರಕರಣದಲ್ಲಿ ಶಶಿ ತೇವಾರ್ ಸಹಿತ ಕನಿಷ್ಠ ನಾಲ್ವರ ಬಂಧನ ಬಾಕಿ ಇದೆ. ಶಶಿ ತೇವಾರ್ ಮುಂಬೈ ನಿವಾಸಿ ಎನ್ನಲಾಗುತ್ತಿದ್ದು, ಆತನ ಬಂಧನ ಬಳಿಕ ಸ್ಥಳೀಯ ವ್ಯಕ್ತಿಯ ಸಹಕಾರದ ಕುರಿತು ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದು ಅನುಪಮ್ ಅಗರ್ವಾಲ್ ತಿಳಿಸಿದರು.

(ಫೋಟೋ: ಆರೋಪಿಗಳಿಂದ ವಶಪಡಿಸಿಕೊಂಡ ಸ್ವರ್ಣಾಭರಣಗಳ ಜತೆ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಸಹಾಯಕ ಪೊಲೀಸ್ ಆಯುಕ್ತರಾದ ಧನ್ಯಾ ನಾಯಕ್, ಮನೋಜ್ ನಾಯಕ್, ಡಿಸಿಪಿಗಳಾದ ಕೆ.ರವಿಶಂಕರ್ ಮತ್ತು ಸಿದ್ಧಾರ್ಥ ಗೋಯಲ್ ಅವರನ್ನು ಚಿತ್ರದಲ್ಲಿ ಕಾಣಬಹುದು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net