ಚುನಾವಣಾ ಅಖಾಡ ಸಿದ್ಧ: ಕೋಟೆಕಾರ್‌ನಲ್ಲಿ ಅಧಿಕಾರ ಕಸಿಯಲು ಕಾಂಗ್ರೆಸ್, ಉಳಿಸಲು ಬಿಜೆಪಿ ಕಸರತ್ತು

kotekar
Published on

ಅನ್ಸಾರ್ ಇನೋಳಿ ಉಳ್ಳಾಲ
ಕೋಟೆಕಾರ್ ಪಟ್ಟಣ ಪಂಚಾಯಿತಿಗೆ ನಾಳೆ ಚುನಾವಣೆ ನಡೆಯಲಿದ್ದು, ಅಖಾಡ ಸಿದ್ಧವಾಗಿದೆ. ರಾಜಕೀಯ ಪಕ್ಷಗಳೂ ಪೈಪೋಟಿಯಲ್ಲಿ ಪ್ರಚಾರ ನಡೆಸಿವೆ.
ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ ಸೋಮೇಶ್ವರ ಮತ್ತು ಕೋಟೆಕಾರ್ ಬಿಜೆಪಿಯ ಭದ್ರಕೋಟೆಯಾಗಿದೆ. ಕೋಟೆಕಾರ್ ಗ್ರಾಮ ಪಂಚಾಯಿತಿಯಾಗಿದ್ದಾಗಲೂ ಅಧಿಕಾರದಲ್ಲಿದ್ದ ಬಿಜೆಪಿ ಕಳೆದ ಅವಧಿಯಲ್ಲೂ ಬಹುಮತ ಗಳಿಸಿ ಪಟ್ಟಣ ಪಂಚಾಯಿತಿಯಲ್ಲಿ ಆಡಳಿತ ನಡೆಸಿತ್ತು.

ಕಳೆದ ಬಾರಿಯ ಚುನಾವಣೆಯಲ್ಲಿ 17 ಸದಸ್ಯ ಬಲದ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ 11, ಕಾಂಗ್ರೆಸ್ 4, ಎಸ್‌ಡಿಪಿಐ ಮತ್ತು ಸಿಪಿಐಎಂ ತಲಾ ಒಂದು ಸ್ಥಾನ ಗಳಿಸಿತ್ತು. ಎರಡು ವರ್ಷಗಳಿಂದ ಅಧ್ಯಕ್ಷರಿಲ್ಲದೆ ಸೊರಗಿದ್ದ ಪಟ್ಟಣ ಪಂಚಾಯಿತಿಗೆ ಜಯಶ್ರೀ ಪ್ರಫುಲ್ಲಾದಾಸ್ ಆರು ತಿಂಗಳ ಅವಧಿಗೆ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಅದೇ ಆಧಾರದಲ್ಲಿ ಬಿಜೆಪಿ ಮುಖಂಡರು ಈ ಬಾರಿಯೂ ಅಧಿಕಾರ ಉಳಿಸಿಕೊಳ್ಳುವ ಭರವಸೆ ಹೊಂದಿದ್ದಾರೆ.

ಕಾಂಗ್ರೆಸ್ ಕಸರತ್ತು: ಇದೇ ವೇಳೆ ಕಾಂಗ್ರೆಸ್‌ನಿಂದಲೂ ಅಧಿಕಾರಕ್ಕೇರುವ ನಿಟ್ಟಿನಲ್ಲಿ ಸಾಕಷ್ಟು ಕಸರತ್ತು ನಡೆದಿದೆ. ಪಟ್ಟಣ ಪಂಚಾಯಿತಿಯ ಆಡಳಿತ, ರಾಜ್ಯ, ಕೇಂದ್ರ ಸರ್ಕಾರದ ಆಡಳಿತ ವೈಖರಿ ಮುಂದಿಟ್ಟುಕೊಂಡು ಪ್ರಚಾರ ನಡೆಸಿದೆ. ಇವೆಲ್ಲವೂ ಈ ಬಾರಿ ಆಡಳಿತಕ್ಕೇರಿಸಲಿದೆ ಎನ್ನುವ ಆಶಾಭಾವನೆ ಕಾಂಗ್ರೆಸ್ ಮುಖಂಡರದ್ದು.

ಎಸ್‌ಡಿಪಿಐ ಕೂಡ 6 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಕಾಂಗ್ರೆಸ್‌ಗೆ ಸೆಡ್ಡು ಹೊಡೆದಿದೆ. ಚುನಾವಣೆ ಘೋಷಣೆಗೆ ಕೆಲದಿನಗಳ ಮೊದಲು ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಮುಖಂಡರ ನಡುವೆ ನಡೆದಿದ್ದ ತಕರಾರಿನ ಪ್ರತಿಧ್ವನಿ ಎನ್ನುವಂತೆ ಖಬರಸ್ತಾನ, ಆಸ್ಪತ್ರೆ ತಲುಪುವಂತಹ ಮಾತುಗಳವರೆಗೆ ಮುಂದುವರಿದಿತ್ತು. ಈ ಪ್ರಕರಣದ ಬಳಿಕ ಎರಡೂ ಪಕ್ಷಗಳ ಪಾಲಿಗೆ ಚುನಾವಣೆ ಸವಾಲಾಗಿ ಕಾಡಿದೆ. ಇವೆಲ್ಲಕ್ಕೂ ಸೋಮವಾರ ನಡೆಯಲಿರುವ ಚುನಾವಣೆ ಉತ್ತರ ನೀಡಲಿದೆ.

ಕಣದಲ್ಲಿ 45 ಅಭ್ಯರ್ಥಿಗಳು:  ಸೋಮವಾರ ನಡೆಯಲಿರುವ ಚುನಾವಣೆ 45 ಅಭ್ಯರ್ಥಿಗಳ ಭವಿಷ್ಯ ನಿರ್ಣಯಿಸಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ 17 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಎಸ್‌ಡಿಪಿಐ ಆರು, ಸಿಪಿಐಎಂ ಎರಡು ಹಾಗೂ ಮೂರು ವಾರ್ಡ್‌ಗಳಲ್ಲಿ ಪಕ್ಷೇತರರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಮತ ಯಾಚನೆಗಾಗಿ ಹೋದಲ್ಲೆಲ್ಲ ಜನರು ಶಾಸಕರು ಮಾಡಿದ ಕೆಲಸದ ಬಗ್ಗೆ ಹೇಳುತ್ತಿದ್ದಾರೆಯೇ ಹೊರತು, ಪಟ್ಟಣ ಪಂಚಾಯಿತಿಯ ಕೆಲಸದ ಬಗ್ಗೆ ಹೇಳುತ್ತಿಲ್ಲ. ಇದನ್ನು ಗಮನಿಸಿದಾಗ ಮತದಾರರಲ್ಲಿ ಬಿಜೆಪಿ ವಿರೋಧಿ ನಿಲುವು ಇರುವುದು ಸ್ಪಷ್ಟವಾಗಿದ್ದು, ಕಾಂಗ್ರೆಸ್ ಗೆ ಸಹಕಾರಿಯಾಗಲಿದೆ.
ಸುರೇಶ್ ಭಟ್ನಗರ, ಉಪಾಧ್ಯಕ್ಷ, ಉಳ್ಳಾಲ ಬ್ಲಾಕ್ ಕಾಂಗ್ರೆಸ್

ಕಳೆದ ಬಾರಿ ಬಿಜೆಪಿ ಪಟ್ಟಣ ಪಂಚಾಯಿತಿಯಲ್ಲಿ ಜನರಪರ ಮತ್ತು ಅಭಿವೃದ್ಧಿಯ ಆಡಳಿತ ನಡೆಸಿದೆ. ಅಲ್ಲದೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನಪರ ಆಡಳಿತದ ಅಲೆಯೂ ಇದೆ. ಇವೆಲ್ಲವೂ ಬಿಜೆಪಿಗೆ ವರದಾನವಾಗಿದ್ದು, ಕಳೆದ ಬಾರಿಗಿಂತಲೂ ಹೆಚ್ಚಿನ ಸ್ಥಾನ ಗಳಿಸಿ ಅಧಿಕಾರಕ್ಕೆ ಬರಲಿದೆ
ಸತೀಶ್ ಕುಂಪಲ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ

ನಮ್ಮ ಪಕ್ಷ ಎಲ್ಲ ಕಡೆ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸದೆ ಹೆಚ್ಚಿನ ಕಾರ್ಯಕರ್ತರು ಇರುವ, ಗೆಲ್ಲುವ ಸಾಧ್ಯತೆ ಹೆಚ್ಚಿರುವ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಲಾಗಿದೆ. ಮುಖಂಡರು ಮತ್ತು ಕಾರ್ಯಕರ್ತರು ಗೆಲುವಿಗಾಗಿ ಶ್ರಮಿಸಲಿದ್ದಾರೆ.
ಝಾಯೀದ್ ಮಲಾರ್, ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net