ಕಾವೇರಿ ಹೋರಾಟಕ್ಕೆ ಕೋಟೆಜನ ಜೈ

CTD 29 BANDA--0 3(2)
Published on

ಚಿತ್ರದುರ್ಗ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ನಿರ್ಧಾರ ಖಂಡಿಸಿ ಚಿತ್ರದುರ್ಗ ಜಿಲ್ಲಾದ್ಯಂತ ರೈತ, ಕನ್ನಡಪರ ಸೇರಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕೆಲವೆಡೆ ಬಂದ್ ನಡೆಸಿದರೆ, ಕೆಲ ತಾಲೂಕು, ಹೋಬಳಿ ಕೇಂದ್ರಗಳಲ್ಲಿ ರಸ್ತೆ ತಡೆ, ಪ್ರತಿಭಟನಾ ಮೆರವಣಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಕೆ ಮೂಲಕ ಕರ್ನಾಟಕ ಬಂದ್‌ಗೆ ಬೆಂಬಲಿಸಲಾಯಿತು.

ಚಿತ್ರದುರ್ಗದ ಗಾಂಧಿ ವೃತ್ತ, ಬಿ.ಡಿ.ರಸ್ತೆ ಸೇರಿ ಪ್ರಮುಖ ರಸ್ತೆಗಳಲ್ಲಿ ಬೆಳಗ್ಗೆ ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿದ್ದವು. ಗಾಂಧಿ ವೃತ್ತದಲ್ಲಿ ರೈತ, ಕಾರ್ಮಿಕ, ಕನ್ನಡಪರ ಸೇರಿ ಅನೇಕ ಸಂಘಟನೆಗಳ ಕಾರ್ಯಕರ್ತರು ಬೆಳಗ್ಗೆಯೇ ಜಮಾಯಿಸಿ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಭಾವಚಿತ್ರದ ಮೇಲೆ ರಕ್ತಾಭಿಷೇಕ ನಡೆಸಿದ ಪ್ರತಿಭಟನಾಕಾರರು ರಾಜ್ಯದ ಬಿಜೆಪಿ ಸಂಸದರ ವಿರುದ್ಧ ಘೋಷಣೆ ಕೂಗಿದರು.

ವಿವಾದ ಬಗೆಹರಿಸಲು ಮಧ್ಯ ಪ್ರವೇಶಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಇನ್ನು ಕೆಲ ಸಂಘಟನೆಗಳ ಕಾರ್ಯಕರ್ತರು ತಮಿಳುನಾಡಿಗೆ ನೀರು ಹರಿಸದಂತೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. 40ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಮಧ್ಯಾಹ್ನದ ಬಳಿಕ ಬಿಡುಗಡೆ ಮಾಡಿದರು.

ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಎಂದಿನಂತೆ ಆರಂಭವಾದರೂ, ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಖಾಸಗಿ ಬಸ್ ನಿಲ್ದಾಣದಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ನಗರದ ಪ್ರಮುಖ ಬೀದಿಗಳಲ್ಲಿ ಅಂಗಡಿ- ಮುಂಗಟ್ಟುಗಳು ಕ್ರಮೇಣ ವಹಿವಾಟು ಆರಂಭಗೊಂಡಿದ್ದು, ಆಟೋ ಸೇರಿ ನಾನಾ ವಾಹನಗಳ ಸಂಪೂರ್ಣ ಸಂಚಾರದೊಂದಿಗೆ ಮಧ್ಯಾಹ್ನ 12ರ ನಂತರ ನಗರ ಸಹಜ ಸ್ಥಿತಿಗೆ ತಲುಪಿತು.

ಎಪಿಎಂಸಿ ಬಂದ್: ಎಪಿಎಂಸಿಯಲ್ಲಿ ವಹಿವಾಟು ಇರಲಿಲ್ಲ. ಆದರೆ,ಹಣ್ಣು, ಹೂವು, ತರಕಾರಿ ವ್ಯಾಪಾರ, ಬ್ಯಾಂಕ್, ಸರ್ಕಾರಿ ಕಚೇರಿಗಳು, ಕೋರ್ಟ್ ಕಲಾಪಗಳು, ಶಾಲಾ, ಕಾಲೇಜುಗಳು ಎಂದಿನಂತೆ ನಡೆದವು. ಕೆಲವು ಖಾಸಗಿ ಶಾಲೆಗಳು ರಜೆ ಪ್ರಕಟಿಸಿದ್ದವು. ಕೆಲ ಪೆಟ್ರೋಲ್ ಬಂಕ್‌ಗಳಲ್ಲಿ ಬೆಳಗ್ಗೆ ಇಂಧನ ಮಾರಾಟಕ್ಕೆ ಸಿಬ್ಬಂದಿ ಹಿಂದೇಟು ಹೊಡೆದರು.

ಗಾಂಧಿವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಮಂಡಳಿ ಕಾರ್ಯದರ್ಶಿ ಜಿ.ಸಿ.ಸುರೇಶ್‌ಬಾಬು ಮಾತನಾಡಿ, ರಾಜ್ಯದ ರೈತರ ಹಿತ ಕಡೆಗಣಿಸಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದು ಸರಿಯಲ್ಲ. ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಸರ್ವೋದಯ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಮಾತನಾಡಿ, ಚಳವಳಿ ನಡೆಸುತ್ತಿರುವ ಕನ್ನಡಿಗರನ್ನು ಅವಮಾನಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಮುಖಂಡರಾದ ಬಿ.ಬಸವರಾಜಪ್ಪ, ಟಿ.ಆರ್.ಉಮಾಪತಿ, ಜಯದೇವಮೂರ್ತಿ, ರಾಜಪ್ಪ, ಸತ್ಯಕೀರ್ತಿ, ತಿಪ್ಪೇಸ್ವಾಮಿ, ರವಿಕುಮಾರ್, ಬಾಬು, ಚಂದ್ರಪ್ಪ, ದುರುಗೇಶ್, ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜೆ.ಮಂಜುನಾಥ್, ಪ್ರಧಾನ ಕಾರ‌್ಯದರ್ಶಿ ವೈ.ಕುಮಾರ್, ಕೆ.ಗೌಸ್‌ಪೀರ್, ಡಿ.ಈಶ್ವರಪ್ಪ, ತಿಮ್ಮಯ್ಯ, ಇಮಾಂ ಮೊಹಿದ್ದೀನ್, ಎಂ.ಆರ್.ಸ್ವಾಮಿ, ರೈತ ಮುಖಂಡರಾದ ಡಿಎಸ್‌ಹಳ್ಳಿ ಮಲ್ಲಿಕಾರ್ಜುನ್, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹಂಪಯ್ಯನಮಾಳಿಗೆ ಧನಂಜಯ, ಪುಟ್ಟರಂಗಪ್ಪ, ರುದ್ರಪ್ಪ, ತಿಪ್ಪೇಸ್ವಾಮಿ, ಕುಮಾರ್, ಸಿದ್ದಪ್ಪ, ರೈತಸಂಘದ ಹುಚ್ಚವ್ವನಹಳ್ಳಿ ಮಂಜುನಾಥ ಬಣದ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ್ ಮತ್ತಿತರರು ಇದ್ದರು.

ಕರವೇ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ಕೆ.ಆರ್.ಮಂಜುನಾಥ್, ಟಿ.ಹನುಮಂತಪ್ಪ, ಪಿ.ಜಿ.ಗೋವಿಂದರಾಜು, ರಾಜ್ಯ ನವಪ್ರಜಾರಕ್ಷಣಾ ವೇದಿಕೆ ಅಧ್ಯಕ್ಷ ಎಚ್.ಏಕಾಂತಪ್ಪ, ಎಚ್.ಶಿವಮೂರ್ತಿ, ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಆರ್.ರಾಜೇಶ್ ಮಧುರೆ, ಕಾರ್ಯಾಧ್ಯಕ್ಷ ಅರುಣ್‌ಕುಮಾರ್, ಬಿ.ಮಂಜುನಾಥ್ ಸೇನ್ ಇತರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ರಾಜಕೀಯ ಮೇಲಾಟಕ್ಕೆ ಕಾರಣವಾಗಿರುವ ಕಾವೇರಿ ನೀರು ವಿವಾದಕ್ಕೆ ಅಂತ್ಯವಾಡಲು ಮಧ್ಯಪ್ರವೇಸಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿ ಅಂಬೇಡ್ಕರ್ ಸೇನೆ ಕಾರ‌್ಯಕರ್ತರು ಜಿಲ್ಲಾಧಿಕಾರಿ ಮೂಲಕ ಮನವಿ ರವಾನಿಸಿದರು. ಜಿಲ್ಲಾಧ್ಯಕ್ಷ ಕೆ.ಅವಿನಾಶ, ಸಿ.ಎ.ತಿಪ್ಪೇಸ್ವಾಮಿ, ಆರ್.ಸಂತೋಷ್, ಟಿ.ಮಹಂತೇಶ್ ಇದ್ದರು.

ಹಲವರ ಬಂಧ, ಬಿಡುಗಡೆ: ಕರುನಾಡು ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಾ ಗೌರಣ್ಣ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಎಸ್.ಕೆ.ಮಹಂತೇಶ್, ಮುಖಂಡರಾದ ಕೃಷ್ಣಮೂರ್ತಿ, ತಿಪ್ಪೇಸ್ವಾಮಿ, ಬಾಬು, ಸುರೇಶ್, ಗಾಯತ್ರಿ, ನಾಗಲಕ್ಷ್ಮೀ ಇತರರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net