ಮುಳುಗು ಸೇತುವೆಯಿಂದ ಮುಕ್ತಿ: ಕೋಟೆಹೋಳೆ ಸೇತುವೆ ಕಾಮಗಾರಿ ಪೂರ್ಣ : ಸಂಪರ್ಕ ರಸ್ತೆ ನಿರ್ಮಾಣ ಪ್ರಗತಿಯಲ್ಲಿ

Published on

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ಉಪ್ಪಿನಂಗಡಿ- ಕಡಬ- ಕುಕ್ಕೆ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆ ಗ್ರಾಮದ ಕೈಕಂಬ ಬಳಿಯ ಕೋಟೆಹೊಳೆಯಲ್ಲಿನ ಮುಳುಗು ಸೇತುವೆ ಬದಲಿಗೆ ಹೊಸ ಸರ್ವಋತು ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಸೇತುವೆಗೆ ಎರಡೂ ಬದಿಯಲ್ಲಿ ಸಂಪರ್ಕ ರಸ್ತೆ ನಿರ್ಮಾಣ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ. ಈ ಮೂಲಕ ಹಲವಾರು ವರ್ಷಗಳಿಂದ ಮಳೆಗಾಲದಲ್ಲಿ ಆಗುತ್ತಿದ್ದ ಸಮಸ್ಯೆಗೆ ಪೂರ್ಣ ವಿರಾಮ ದೊರಕುವಂತಾಗಿದೆ.

ಸಮಸ್ಯೆಗೆ ಮುಕ್ತಿ: ಉಪ್ಪಿನಂಗಡಿ- ಕಡಬ- ಸುಬ್ರಹ್ಮಣ್ಯ ರಾಜ್ಯದಲ್ಲಿ ಕಡಬ ತಾಲೂಕಿನ ಕೈಕಂಬ ಬಳಿ ಹರಿಯುವ ಕೋಟೆಹೊಳೆಯ ಹಳೇ ಸೇತುವೆ ಮುಳುಗು ಸೇತುವೆಯಾಗಿತ್ತು. ಭಾರಿ ಮಳೆಗೆ ಈ ಸೇತುವೆ ಮುಳುಗಡೆಯಾಗುವುದಿಂದ ಸಂಪರ್ಕಕ್ಕೆ ಅಡ್ಡಿಯಾಗುತ್ತಿತ್ತು. ಕಳೆದ ವರ್ಷ ಇಲ್ಲಿ ಹೊಸ ಸರ್ವಋತು ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು.

3 ಕೋಟಿ ರೂ. ಅನುದಾನ

ಕೋಟೆಹೊಳೆಗೆ ಹೊಸ ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯ 5054 ರಾಜ್ಯ ಹೆದ್ದಾರಿಯ ಸೇತುವೆ ಸುಧಾರಣೆ ಯೋಜನೆಯಡಿ 3 ಕೋಟಿ ರೂ. ಅನುದಾನ ಬಿಡುಗಡೆಗೊಂಡಿತ್ತು. ಪ್ರಸ್ತುತ ಇರುವ ಸೇತುವೆಯ ಕೆಳ ಭಾಗದಲ್ಲಿ ಸೇತುವೆ ನಿರ್ಮಾಣಗೊಳ್ಳುತ್ತಿದೆ. ಈಗಿರುವ ಸೇತುವೆಗಿಂದ 3 ಮೀಟರ್ ಎತ್ತರ, 12 ಮೀಟರ್ ಅಗಲದಲ್ಲಿ ಸೇತುವೆ ನಿರ್ಮಾಣವಾಗಿದೆ.

ಸಂಪರ್ಕ ರಸ್ತೆಗೆ 90 ಲಕ್ಷ ರೂ.

ಸೇತುವೆ ಎರಡೂ ಬದಿಯಲ್ಲೂ ಸಂಪರ್ಕ ರಸ್ತೆ ನಿರ್ಮಾಣವಾಗಬೇಕಾಗಿದೆ. 90 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯಲಿದೆ. ಸೇತುವೆ ನೇರವಾಗಿ ಸಂಪರ್ಕ ರಸ್ತೆ ನಿರ್ಮಾಣವಾಗಬೇಕಾಗಿದೆ. ರಸ್ತೆ ಬದಿಯಲ್ಲಿರುವ ಮರಗಳ ತೆರವು ಅನಿವಾರ್ಯವಾದುದರಿಂದ ಈ ಬಗ್ಗೆ ಅನುಮತಿಗಾಗಿ ಜಿಲ್ಲಾಧಿಕಾರಿಗಳ ಮೂಲಕ ಸಂಬಂಧಿಸಿದವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ. ಮಳೆಗಾಲಕ್ಕೆ ಮೊದಲು ಮರಗಳನ್ನು ತೆರವು ನಡೆಸುವ ನಿರೀಕ್ಷೆ ಇದೆ. ಆದರೆ ಸಂಪರ್ಕ ರಸ್ತೆ ಈ ಮಳೆಗಾಲಕ್ಕೆ ಮೊದಲು ಅಸಾಧ್ಯ ಎನ್ನಲಾಗಿದೆ. ಮುಂದಿನ ಬೇಸಿಗೆಯಲ್ಲಿ ಸಂಪರ್ಕ ರಸ್ತೆ ಕಾಮಗಾರಿ ಪೂರ್ಣಗೊಂಡು ಸೇತುವೆ ವಾಹನ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.

ಸಾರ್ವಜನಿಕರಿಗೆ ಅನುಕೂಲ

ಒಂದು ಕಾಲದಲ್ಲಿ ಉಪ್ಪಿನಂಗಡಿ- ಕಡಬ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಅಲ್ಲಲ್ಲಿ ಮುಳುಗು ಸೇತುವೆಗಳಿದ್ದವು. ಮಳೆಗಾಲದಲ್ಲಿ ಸೇತುವೆಗಳ ಮುಳುಗಡೆ ಆಗುತ್ತಿರುವುದರಿಂದ ಶಾಲಾ ಮಕ್ಕಳು ಸೇರಿದಂತೆ ಪ್ರಯಾಣಿಕರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದರು. ಪ್ರಮುಖವಾಗಿ ಕಡಬ ಸಮೀಪದ ಹೊಸಮಠ, ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಧಾರಾ, ನೆಟ್ಟಣ ಸೇತುವೆ, ಕೋಟೆಹೊಳೆ ಸೇತುವೆಗಳು ಮುಳುಗುಗಡೆಯಾಗುತ್ತಿದ್ದವು. ಅಲ್ಲಿ ಕೆಲ ವರ್ಷಗಳ ಹಿಂದೆ ಸುಸಜ್ಜಿತ ಸೇತುವೆ ನಿರ್ಮಾಣಗೊಂಡು ಸಂಚಾರಕ್ಕೆ ಮುಕ್ತಗೊಂಡಿವೆ. ಇದೀಗ ಕೋಟೆಹೊಳೆಗೂ ಹೊಸ ಸೇತುವೆ ನಿರ್ಮಾಣಗೊಂಡಿದೆ. ಮುಂದಿನ ದಿನಗಳಲ್ಲಿ ಉಪ್ಪಿನಂಗಡಿ- ಕಡಬ- ಸುಬ್ರಹ್ಮಣ್ಯ ನಡುವಿನ ಮುಳುಗು ಸೇತುವೆಗಳಿಗೆ ಮುಕ್ತಿ ಸಿಕ್ಕಂತಾಗುತ್ತದೆ.

ಹಲವು ದಶಕಗಳಿಂದ ಮಳೆಗಾಲದಲ್ಲಿ ಆಗುತ್ತಿದ್ದ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಈ ಯೋಜನೆಯಿಂದಾಗಿ ಸರ್ವಋತು ಸೇತುವೆ ನಿರ್ಮಾಣಗೊಂಡು ಪ್ರಯಾಣಿಕರು ಮಳೆಗಾಲದಲ್ಲಿ ಅನುಭವಿಸುತ್ತಿದ್ದ ಸಮಸ್ಯೆಗೆ ಪೂರ್ಣ ವಿರಾಮ ದೊರಕಿದೆ. ಮಳೆಗಾಲದಲ್ಲಿ ಸೇತುವೆ ಮುಳುಗಡೆಗೊಂಡು ನೆಟ್ಟಣ ರೈಲು ನಿಲ್ದಾಣ ಸೇರಿದಂತೆ ಮಂಗಳೂರು ಮತ್ತಿತರ ಕಡೆ ಹೋಗುವ ಪ್ರಯಾಣಿಕರು ಮತ್ತು ಭಕ್ತರು ಹೆಚ್ಚಿನ ತೊಂದರೆಗೆ ಸಿಲುಕುತ್ತಿದ್ದರು. ಇದೀಗ ಎತ್ತರವಾದ ಸೇತುವೆ ನಿರ್ಮಾಣವಾದ ಕಾರಣ ಸಾರ್ವಜನಿಕರಿಗೆ ಹೆಚ್ಚಿನ ಉಪಯೋಗವಾಗಿದೆ. ಸುಂದರ ಬಿಳಿನೆಲೆ, ಕಡಬ ತಾಲೂಕು ಭಜನಾ ಪರಿಷತ್ ಅಧ್ಯಕ್ಷ https://www.vijayavani.net/adalth https://www.vijayavani.net/theft-case-8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net