

ಆದರ್ಶ್ ಅದ್ಕಲೇಗಾರ್, ಮಡಿಕೇರಿ
ಶ್ರೀ ಕೋಟೆ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿಯು ೪೭ನೇ ವರ್ಷದ ದಸರಾ ಉತ್ಸವ ಆಚರಣೆಗೆ ಸುಮಾರು ೨೨ ಲಕ್ಷ ವೆಚ್ಚದಲ್ಲಿ ಸಜ್ಜಾಗುತ್ತಿದೆ.
ಈ ಬಾರಿ ಮಂಟಪದಲ್ಲಿ ’ರಾಮಾಯಣದಿಂದ ಆಯ್ದ ಸೀತಾಪಹರಣ ರಾವಣನ ಸಂಹಾರ’ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ಎರಡು ಟ್ರ್ಯಾಕ್ಟರ್‌ಗಳನ್ನು ಬಳಸಲಾಗುತ್ತಿದ್ದು, ದಿಂಡಿಗಲ್‌ನ ಕಳೆಯಗಮ್ ಲೈಟಿಂಗ್ ಬೋರ್ಡ್ ಅಳಡಿಸಲಿದ್ದಾರೆ. ಸಮಿತಿ ಸದಸ್ಯರೆ ಪ್ಲಾಟ್ ಫಾರಂ ನಿರ್ಮಿಸಲಿದ್ದಾರೆ. ೨೪ ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಕಲಾವಿದರು ಹಾಗೂ ಸಮಿತಿ ಸದಸ್ಯರು ಕಲಾಕೃತಿಗಳನ್ನು ತಯಾರಿಸಲಿದ್ದಾರೆ. ಮಂಜುನಾಥ ಇಂಜಿನಿಯರಿಂಗ್ ವರ್ಕ್ಸ್ ಜಗದೀಶ್ ಹಾಗೂ ಸಮಿತಿ ಸದಸ್ಯರು ಟ್ರ್ಯಾಕ್ಟರ್ ಸೆಟ್ಟಿಂಗ್ಸ್ ಹಾಗೂ ಕಲಾಕೃತಿಗಳಿಗೆ ಚಲನ ವಲನ ವ್ಯವಸ್ಥೆ ಮಾಡಲಿದ್ದಾರೆ.
ಧ್ವನಿವರ್ಧಕ ಹಾಗೂ ಸ್ಟುಡಿಯೋ ಲೈಟ್ ವ್ಯವಸ್ಥೆಯನ್ನು ಸಮಿತಿ ಸದಸ್ಯ ಪ್ರಶಾಂತ್ ಮತ್ತು ತಂಡ ಮಾಡಲಿದೆ. ಈ ಬಾರಿ ವಿಶೇಷತೆಯಾಗಿ ೨೨ ಅಡಿ ಎತ್ತರದ ಕಲಾಕೃತಿಯೊಂದನ್ನು ತಯಾರಿಸಲಾಗುತ್ತಿದ್ದು, ವಿಭಿನ್ನ ಚಲನ-ವಲನದೊಂದಿಗೆ ಪ್ರದರ್ಶಿಸಲಾಗುತ್ತದೆ. ೨೨ ಲಕ್ಷ ರೂ ವೆಚ್ಚದಲ್ಲಿ ಮಂಟಪ ಹೊರತರಲಾಗುತ್ತಿದ್ದು, ಜನಾಕರ್ಷಣೆ ಪಡೆಯುವುದರ ಜತೆಗೆ ಪ್ರಥಮ ಬಹುಮಾನಕ್ಕೆ ಪೈಪೋಟಿ ನೀಡುವುದಾಗಿ ಬ್ರಿಜೇಶ್ ಮಾಹಿತಿ ನೀಡಿದರು.
ಇತಿಹಾಸ: ಭಕ್ತರ ಹರಕೆಯನ್ನು ಕಾರ್ಯಸಿದ್ಧಿಗೊಳಿಸುವ ’ಶ್ರೀ ಕೋಟೆ ಮಾರಿಯಮ್ಮ’ ಮಡಿಕೇರಿ ನಗರದ ಹೃದಯ ಭಾಗದಲ್ಲಿ ಸುಮಾರು ೩೦೦ ವರ್ಷಗಳಿಂದ ನೆಲೆ ನಿಂತಿದ್ದಾಳೆ. ನಗರದಲ್ಲಿ ನಾಲ್ಕು ಶಕ್ತಿ ದೇವತೆಗಳಿವೆ. ಚೌಟಿ ಮಾರಿಯಮ್ಮ, ಕೋಟೆ ಮಾರಿಯಮ್ಮ, ದಂಡಿನ ಮಾರಿಯಮ್ಮ, ಮುತ್ತು ಮಾರಿಯಮ್ಮ. ಇವರೆಲ್ಲ ಸಹೋದರಿಯರು. ನಾಲ್ವರಲ್ಲಿ ಕೋಟೆ ಮಾರಿಯಮ್ಮ’ ಕೂಡ ಒಬ್ಬಳು. ಈ ನಾಲ್ವರು ಮೂಲತಃ ತಮಿಳುನಾಡಿವರು. ಸುಮಾರು ೩೦೦ ವರ್ಷಗಳ ಹಿಂದೆ, ಕೊಡಗು ರಾಜ್ಯವನ್ನು ರಾಜರು ಆಳ್ವಿಕೆ ನಡೆಸುತ್ತಿದ್ದ ಕಾಲವಾಗಿತ್ತು. ಈ ಸಂದರ್ಭದಲ್ಲಿ ಮಡಿಕೇರಿಯಲ್ಲಿ ವಿಪರೀತ ಕ್ಷಾಮ, ರೋಗ-ರುಜಿನಗಳು ಕಾಣಿಸಿಕೊಂಡಿದ್ದವು. ಅನೇಕ ಜನ ಮಾರಕ ಕಾಯಿಲೆಗಳಿಗೆ ಬಲಿಯಾಗಿದ್ದರು. ಇದರಿಂದ ಕಂಗಾಲಾದ ರಾಜ, ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಮಿಳುನಾಡಿನಿಂದ ನಾಲ್ವರು ಶಕ್ತಿದೇವತೆಗಳನ್ನು ಮಡಿಕೇರಿಯಲ್ಲಿ ಪ್ರತಿಷ್ಟಾಪಿಸಿದ್ದ. ಅದರಲ್ಲಿ ಕೋಟೆ ಮಾರಿಯಮ್ಮ’ ಕೂಡಾ ಒಬ್ಬಳಾಗಿದ್ದಾಳೆ.
ಆರೋಗ್ಯ ರಕ್ಷಣೆಗಾಗಿ-ಚೌಟಿ ಮಾರಿಯಮ್ಮ, ರಾಜನು ಅಂದು ಯುದ್ಧಕ್ಕೆ ಹೋರಡುವಾಗ(ದಂಡಿಗೆ) ದೇವಿಯೊಡನೆ ಸಮಾಲೋಚಿಸಿ, ಆಕೆಯ ಆರ್ಶೀವಾದ ಪಡೆಯಲು-ದಂಡಿನ ಮಾರಿಯಮ್ಮ, ಐಶ್ವರ್ಯ ಮತ್ತು ಸಂಪತ್ತಿಗಾಗಿ ಕಂಚಿಕಾಮಾಕ್ಷಿ(ಮುತ್ತುಮಾರಿಯಮ್ಮ), ರಾಜನ ಕೋಟೆಯ ರಕ್ಷಣೆಗಾಗಿ ಕೋಟೆ ಮಾರಿಯಮ್ಮ ದೇವಿಯನ್ನು ಪ್ರತಿಷ್ಠಾಪಿಸಿದ್ದ ಎಂದು ಅರ್ಚಕ ಅನೀಶ್ ಕುಮಾರ್ ಹೇಳುತ್ತಾರೆ.
ಭಕ್ತರು ತಮ್ಮ ಬೇಡಿಕೆ ಈಡೇರಿಕೆಗಾಗಿ ದೇವಾಲಯಕ್ಕೆ ಹೆಚ್ಚಾಗಿ ಭೇಟಿನೀಡುತ್ತಾರೆ. ಅಲ್ಲದೆ ಮಕ್ಕಳ ಪ್ರಾಪ್ತಿಗಾಗಿ ಕೂಡ ’ಕೋಟೆಮಾರಿಯಮ್ಮ’ಳ ಬಳಿ ಭಕ್ತಾಧಿಗಳು ಹರಕೆ ಹೊತ್ತುಕೊಳ್ಳುತ್ತಾರೆ. ಬೇಡಿಕೆ ಈಡೇರಿದ ನಂತರ ಭಕ್ತರು ತಮ್ಮ ಕಾಣಿಕೆಯನ್ನು ದೇವಾಲಯಕ್ಕೆ ಅರ್ಪಿಸುತ್ತಾರೆ’ಅನೀಶ್ ಕುಮಾರ್, ಅರ್ಚಕರುಕೋಟ್ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾಗಿರುವ ಶ್ರೀ ಕೋಟೆ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿಯು ೪೭ನೇ ವರ್ಷದ ದಸರಾ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ. ೨೨ ಲಕ್ಷ ರೂ ವೆಚ್ಚದಲ್ಲಿ ಮಂಟಪ ಹೊರತರಲಾಗುತ್ತಿದ್ದು, ಜನಾಕರ್ಷಣೆ ಪಡೆಯುವುದರ ಜತೆಗೆ ಪ್ರಥಮ ಬಹುಮಾನಕ್ಕೆ ಪೈಪೋಟಿ ನೀಡಲು ಸಜ್ಜಾಗಿದೆ.-ವಿ.ಬಿ.ಬ್ರಿಜೇಶ್, ಅಧ್ಯಕ್ಷರು, ಶ್ರೀ ಕೋಟೆ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ