

ಎಚ್.ಡಿ. ಕೋಟೆ : ಯುವಜನರು ಹನುಮಂತನ ತತ್ವಾದರ್ಶಗನ್ನು ಪಾಲಿಸಬೇಕು ಎಂದು ಬಿಡಗಲು ಗ್ರಾಮದ ಪಡವಲು ವಿರಕ್ತ ಮಠದ ಶ್ರೀ ಮಹದೇವ ಸ್ವಾಮೀಜಿ ಹೇಳಿದರು. ಪಟ್ಟಣದ ಆಂಜನೇಯ ದೇವಸ್ಥಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪವಮಾನ ಹೋಮ ಮತ್ತು ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಶ್ರೀರಾಮನ ಭಕ್ತ ಹನುಮಂತ ಶ್ರದ್ಧೆ, ಸ್ವಾಮಿಭಕ್ತಿ ಮತ್ತು ಕಾರ್ಯ ಸಾಧನೆಗೆ ಪ್ರತೀಕವಾಗಿದ್ದಾನೆ. ಭಗವಂತನ ಸೇವೆಗಾಗಿ ಸದಾ ಸಿದ್ಧನಾಗಿರುತ್ತಾನೆ. ನಿಸ್ವಾರ್ಥ ಸೇವೆ ಹೇಗೆ ಮಾಡಬೇಕು ಎಂಬುದನ್ನು ನಾವು ಹನುಮನಿಂದ ಕಲಿಯಬೇಕಿದೆ ಎಂದರು. ಇಂದಿನ ಯುವ ಪೀಳಿಗೆ ಹನುಮಂತನ ತತ್ವ, ಆದರ್ಶಗಳ ಪಾಲನೆಯೊಂದಿಗೆ ಆತನ ಆರಾಧನೆ ಮತ್ತು ಸ್ಮರಣೆಯ ಮೂಲಕ ಸನ್ಮಾರ್ಗದಲ್ಲಿ ಸಾಗಬೇಕಿದೆ ಎಂದು ಸ್ವಾಮೀಜಿ ಸಲಹೆ ನೀಡಿದರು.
ಹಿಂದು ಧರ್ಮದ ಬಗ್ಗೆ ಗೌರವ ಇರಲಿ: ಹಿಂದು ಧರ್ಮದ ಆಚರಣೆಗಳು, ಧಾರ್ಮಿಕ ನಂಬಿಕೆ ಮತ್ತು ಶ್ರದ್ಧೆಗಳನ್ನು ಇತ್ತೀಚೆಗೆ ಕೆಲವರು ವ್ಯಂಗ್ಯವಾಗಿ, ನಗೆಪಾಟಲಿಗೆ ಈಡಾಗುವ ರೀತಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ತೋರಿಸುವುದು ಹೆಚ್ಚಾಗಿದೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಹಿಂದು ಧರ್ಮವನ್ನು ಅಪಹಾಸ್ಯ ಮಾಡುವ ಪ್ರವೃತ್ತಿ ಖಂಡನೀಯ ಎಂದರು. ನಮ್ಮ ಧರ್ಮಾಚರಣೆಯಲ್ಲಿ ಅನೇಕ ವೈಜ್ಞಾನಿಕ ಸಂಗತಿಗಳು ಇವೆ. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ನಿಲುಕದ ಅದೆಷ್ಟೋ ವಿಚಾರಗಳನ್ನು ನಮ್ಮ ಪೂರ್ವಿಕರು ಸಾವಿರಾರು ವರ್ಷಗಳ ಹಿಂದೆಯೇ ಶೋಧನೆ ಮಾಡಿದ್ದರು. ಅಂಥ ಧರ್ಮ ಮತ್ತು ಧಾರ್ಮಿಕ ಸಾಧಕರ ಬಗ್ಗೆ ಗೌರವ ಭಾವನೆ ಹೊಂದಿರುವುದು ಪ್ರತಿಯೊಬ್ಬ ಭಾರತೀಯನ ಸನ್ನಡತೆಯಾಗಿದೆ. ಹಿಂದು ಧರ್ಮದ ಅಸ್ತಿತ್ವಕ್ಕೆ ಧಕ್ಕೆ ತಂದರೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಸ್ವಾಮೀಜಿ ಎಚ್ಚರಿಸಿದರು. ಕೌಟುಂಬಿಕ ಬಾಂಧವ್ಯ ಗಟ್ಟಿಯಾಗಬೇಕು ಎಂದರೆ ಪ್ರತಿ ಮನೆಯ ಮಕ್ಕಳಿಗೆ ನಮ್ಮ ಧರ್ಮದ ಆಚರಣೆಗಳು ರೂಢಿಗತವಾಗಬೇಕು. ಆ ಮೂಲಕ ಮಾನವೀಯ ಗುಣಗಳು ನಮ್ಮದಾಗಬೇಕು. ಅಂತರಂಗದ ಕೊಳೆ ತೊಳೆಯಲು ಸತ್ಸಂಗ, ಧರ್ಮ ಕ್ಷೇತ್ರಗಳ ದರ್ಶನ, ದಾರ್ಶನಿಕರ ವಾಣಿ ಪ್ರೇರಣೆಯಾಗಬೇಕು ಎಂದರು.
ಮಕ್ಕಳಿಗೆ ಸಂಸ್ಕಾರ ಕಲಿಸಿ:
ಕರ್ನಾಟಕ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ಬಿ.ಕೆ. ಜಗದೀಶ ಮಾತನಾಡಿ ನಮ್ಮ ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರ ಕೊಟ್ಟರೆ ಮುಂದೆ ಅವರು ಸಮಾಜವನ್ನು ಉತ್ತಮವಾಗಿ ನಡೆಸಿಕೊಂಡು ಹೋಗುವ ಪ್ರಜೆಗಳಾಗುತ್ತಾರೆ ಎಂದರು. ಇತರೆ ಧರ್ಮಗಳಲ್ಲಿ ಬಿಗಿಯಾದ ಆಚರಣೆ ಇವೆ. ಅವರು ಧರ್ಮವನ್ನು ಪ್ರಶ್ನಿಸಿದರೆ ಅದು ಅಪರಾಧ ಆಗುತ್ತದೆ. ಆದರೆ ಹಿಂದು ಧರ್ಮ ಮುಕ್ತವಾಗಿದೆ. ಮುಕ್ತವಾಗಿ ವಿಕಸನವಾಗಲು ಇಲ್ಲಿ ರಹದಾರಿ ಇದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ನಮ್ಮ ಮನೆತನದ, ಉಪ ಪಂಗಡಗಳ ಸಂಪ್ರದಾಯ ವಿಭಿನ್ನವಾಗಿ ಇದ್ದರೂ ನಾವೆಲ್ಲ ಹಿಂದುಗಳು ಎಂಬ ಮನೋಭಾವ ಮುಖ್ಯ ಎಂದರು.