

ಮಡಿಕೇರಿ:
ಮಡಿಕೇರಿಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಮತ್ತು ಗಾಳಿಯ ಕಾರಣದಿಂದ ಮುಚ್ಚಿಹೋಗಿದ್ದ ಇಲ್ಲಿನ ಐತಿಹಾಸಿಕ ಕೋಟೆ ಬಾಗಿಲನ್ನು ಜೆಸಿಬಿ ಬಳಸಿ ಸೋಮವಾರ ಮತ್ತೆ ತೆರೆಯಲಾಯಿತು.
ಕಳೆದ ಒಂದು ವಾರದಿಂದ ಮಡಿಕೇರಿ ಸೇರಿದಂತೆ ಜಿಲ್ಲೆಯಾದ್ಯಂತ ಜೋರು ಮಳೆ ಆಗುತ್ತಿದೆ. ಜತೆಗೆ ಗಾಳಿಯ ರಭಸವೂ ಆತಂಕಕಾರಿಯಾಗಿ ಬೀಸುತ್ತಿದೆ. ಶನಿವಾರ ಬೀಸಿದ ರಭಸದ ಗಾಳಿಗೆ ಮಡಿಕೇರಿ ಕೋಟೆಯ ಬಾಗಿಲು ಮುಚ್ಚಿಹೋಗಿತ್ತು.
ಇದನ್ನು ಕೈಯಿಂದ ತಳ್ಳಿ ತೆರೆಯಲು ಸ್ಥಳೀಯರು ಪ್ರಯತ್ನಿಸಿದರಾದರೂ ಸಾಧ್ಯವಾಗಿರಲಿಲ್ಲ. ಬಾಗಿಲು ಮುಚ್ಚಿದ್ದರಿಂದ ಕೋಟೆ ಒಳಗೆ ಇರುವ ಶ್ರೀ ಕೋಟೆ ಮಹಾಗಣಪತಿ ದೇವಾಲಯ ಮತ್ತು ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯಕ್ಕೆ ತೆರಳಲು ಸಾಧ್ಯ ಆಗುತ್ತಿರಲಿಲ್ಲ. ಹಾಗಾಗಿ ಜೆಸಿಬಿ ತರಿಸಿ ಕೋಟೆ ಬಾಗಿಲು ತೆರೆಯಲಾಯಿತು.
ಮಡಿಕೇರಿ ಕೋಟೆ ಬಾಗಿ ಭಾರಿ ಗಾತ್ರದ ಮರದಿಂದ ನಿರ್ಮಿಸಿದ್ದು, ಹೆಚ್ಚಿನ ತೂಕ ಇರುವುದರಿಂದ ಮುಚ್ಚಿದ್ದ ಕೋಟೆ ಬಾಗಿಲು ತೆರೆಯಲು ಯಂತ್ರವನ್ನೇ ಬಳಸಬೇಕಾಯಿತು.