ಸಾಮಾಜಿಕ ನ್ಯಾಯಕ್ಕೆ ಆದ್ಯತೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ

Kota Srinivas 10Oct19-1
Published on

ಮಂಗಳೂರು: ಸಮಾಜ ಕಲ್ಯಾಣ ಇಲಾಖೆ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರಲು ಅವಕಾಶವಿದೆ. ಅಲ್ಲಿನ ಸಮಸ್ಯೆಗಳನ್ನು ಮತ್ತು ಅಗತ್ಯವಿರುವ ಸವಲತ್ತುಗಳ ಬಗ್ಗೆ ಅಧ್ಯಯನ ಮಾಡುವುದರೊಂದಿಗೆ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಜಿಲ್ಲೆಗೆ ಶನಿವಾರ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನೂತನ ಸಚಿವ ಸಂಪುಟದಲ್ಲಿ ಬಡವರ ಮಧ್ಯೆ ಕೆಲಸ ಮಾಡಲು ಅವಕಾಶ ಇರುವ ಮಹತ್ವದ ಖಾತೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ. ಅದನ್ನು ಪ್ರೀತಿಯಿಂದ ಸ್ವೀಕಾರ ಮಾಡಿದ್ದೇನೆ ಎಂದರು.

ಹಿಂದುಳಿದ ವರ್ಗಗಳ ಹಾಸ್ಟೆಲ್, ದೇವರಾಜು ಅರಸು ನಿಗಮ ಸೇರಿದಂತೆ ಅನೇಕ ನಿಗಮಗಳ ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡಲಾಗುವುದು. ಜನರಿಗೆ ಸಾಮಾಜಿಕ ನ್ಯಾಯ ಕೊಡಬಲ್ಲ ಅತಿ ಅಗತ್ಯ ಖಾತೆ ಇದಾಗಿರುವುದರಿಂದ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಾಗುವುದು ಎಂದು ಕೋಟ ಹೇಳಿದರು.

ಶಶಿಕಲಾ ಜೊಲ್ಲೆ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಬಲ್ಲರು. ಈ ಖಾತೆಯಲ್ಲಿ ನಾನೂ ಕೆಲಸ ಮಾಡಿದ ಅನುಭವದ ಆಧಾರದಲ್ಲಿ ಅವರಿಗೆ ಒಂದಷ್ಟು ಸಲಹೆಗಳನ್ನು ನೀಡುತ್ತೇನೆ ಎಂದರು.

ಹಬ್ಬಗಳಿಗೆ ನಿಯಂತ್ರಣ ಇಲ್ಲ: ಕರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಕೋವಿಡ್ ಕಾರಣದಿಂದಾಗಿ ಮುಂಬರುವ ಹಬ್ಬಗಳನ್ನು ನಿಯಂತ್ರಣ ಮಾಡುವುದಿಲ್ಲ. ಆದರೆ ಕೋವಿಡ್ ನಿಯಮಾವಳಿಗಳನ್ನು ಅನುಸರಿಸಿ ಆಚರಣೆ ಮಾಡಬೇಕಾಗಿದೆ. ಈ ಬಗ್ಗೆ ಸೂಕ್ತ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಸಚಿವ ಕೋಟ ತಿಳಿಸಿದರು.

ನೆಗೆಟಿವ್ ವರದಿ ಕಡ್ಡಾಯ ಅನಿವಾರ್ಯ: ಕೇರಳದಲ್ಲಿ ಕೋವಿಡ್-19 ಪ್ರಕರಣಗಳ ಏರಿಕೆಯಾಗುತ್ತಿದ್ದು, ರಾಜ್ಯ ಪ್ರವೇಶಕ್ಕೆ ಆರ್‌ಟಿ-ಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯ ಅನಿವಾರ್ಯ. ಅಂತಾರಾಜ್ಯ ಪ್ರಯಾಣಕ್ಕೆ ಎರಡು ಡೋಸ್ ಲಸಿಕೆ ಸಾಕು ಎನ್ನುವ ರಾಷ್ಟ್ರೀಯ ಮಾರ್ಗಸೂಚಿ ಇರುವಾಗ ನೆಗೆಟಿವ್ ವರದಿ ಕಡ್ಡಾಯಗೊಳಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ಜನರು ಪ್ರಶ್ನಿಸುವುದನ್ನು ನೋಡಿದ್ದೇನೆ. ಎರಡು ಬಾರಿ ಲಸಿಕೆ ಹಾಕಿದ ಜನರು ರೋಗಕ್ಕೆ ತುತ್ತಾಗದಿರಬಹುದು. ಆದರೆ ಅವರಿಂದ ಇತರರಿಗೆ ಹರಡುವ ಸಾಧ್ಯತೆಯಿದೆ. ಆದರೂ ಈ ಬಗ್ಗೆ ಮತ್ತೊಮ್ಮೆ ಆರೋಗ್ಯ ಇಲಾಖೆಯ ಅಭಿಪ್ರಾಯ ಕೇಳುತ್ತೇವೆ ಎಂದು ಸಚಿವ ಕೋಟ ತಿಳಿಸಿದರು.

ಕರೊನಾ ಲೆಕ್ಕಿಸದೆ ಕಾರ್ಯಕರ್ತರು ಜಮಾಯಿಸಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವ ಕೋಟ, ಇಂತಹ ಸಮಯದಲ್ಲಿ ನಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು ಎನ್ನುವುದು ನಿಜ. ಆದರೆ ಬರುವ ದಾರಿಯಲ್ಲಿ ಕಾರ್ಯಕರ್ತರು ಹಾರ ಹಿಡಿದು ನಿಂತಾಗ ಅದನ್ನು ಸ್ವೀಕರಿಸುವ ಅನಿವಾರ್ಯತೆ ಇತ್ತು. ಆದರೆ ಸಾಧ್ಯವಾದಷ್ಟು ಜಾಗ್ರತೆ ವಹಿಸಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net