

ವಿಜಯವಾಣಿ ಸುದ್ದಿಜಾಲ ಉಡುಪಿ
ಕೇಂದ್ರ ಪ್ರಾಯೋಜಿತ ಇಎಸ್ಐ ಆರೋಗ್ಯ ವಿಮೆಯು 21 ಸಾವಿರ ರೂ. ಒಳಗೆ ವೇತನ ಪಡೆಯುವ ಸಿಬ್ಬಂದಿಗೆ ಮಾತ್ರ ಸೀಮಿತವಾಗಿದ್ದು ಅದನ್ನು 30 ಸಾವಿರ ರೂ.ವರೆಗೆ ವೇತನದ ವರೆಗೆ ಮಿತಿ ಹೆಚ್ಚಿಸಬೇಕು ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಕಾರ್ಮಿಕ ಸಚಿವ ಡಾ. ಮನ್ಸುಕ್ ಮಾಂಡವೀಯ ಅವರಿಗೆ ಲಿಖಿತ ಮನವಿ ಸಲ್ಲಿಸಿದರು.
ದೆಹಲಿಯಲ್ಲಿ ಸಚಿವರನ್ನು ಮೇ 28ರಂದು ಭೇಟಿ ಮಾಡಿ ಈ ವಿಚಾರವನ್ನು ಚರ್ಚಿಸಿ, ಇತ್ತೀಚೆಗಿನ ವರ್ಷದಲ್ಲಿ ಸರ್ಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ವೇತನ ಪರಿಷ್ಕರಣೆ ಮಾಡಿದ್ದಾರೆ. ಅದರಿಂದ ಬಹುತೇಕ ಕಾರ್ಮಿಕರು ಹೆಚ್ಚು ವೇತನ ಪಡೆಯುತ್ತಿದ್ದದಾರೆ. ಹೀಗಾಗಿ ಇಎಸ್ಐ ವಿಮೆಯ ವೇತನದ ಮಿತಿಯನ್ನು 21 ಸಾವಿರದಿಂದ 30 ಸಾವಿರ ರೂ.ಗೆ ಏರಿಕೆ ಮಾಡಬೇಕು ಎಂದು ವಿನಂತಿಸಿದರು.
ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಪ್ರಸ್ತಾಪಿತ ಇಎಸ್ಐ ಆಸ್ಪತ್ರೆಯನ್ನೂ ಸಹ ಶೀಘ್ರ ಪ್ರಾರಂಭಿಸಲು ಮುತುವರ್ಜಿ ವಹಿಸಬೇಕು ಎಂದು ಸಚಿವರಲ್ಲಿ ಕೋರಿಕೆ ಸಲ್ಲಿಸಿದರು. ಮನವಿ ಪರಿಶೀಲಿಸಿದ ಸಚಿವ ಡಾ. ಮನ್ಸುಕ್, ಇಎಸ್ಐ ಮೊತ್ತ ಪರಿಷ್ಕರಣೆ ಹಾಗೂ ಬ್ರಹ್ಮಾವರದಲ್ಲಿ ಆಸ್ಪತ್ರೆ ಬಗ್ಗೆ ಸದ್ಯದಲ್ಲೇ ಆದೇಶ ಹೊರಡಿಸುವುದಾಗಿ ಭರವಸೆ ನೀಡಿದರು.