

ಮಂಡ್ಯ: ವ್ಯಸನ ಮುಕ್ತ ಭಾರತ ನಿರ್ಮಾಣಕ್ಕಾಗಿ ಯುವ ಸಮುದಾಯ ಸಂಕಲ್ಪ ಮಾಡಬೇಕಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಪಿ.ಮಂಚೇಗೌಡ ಹೇಳಿದರು.
ನಗರದ ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ನೆಹರು ಯುವಕೇಂದ್ರದಿಂದ ಜಿಲ್ಲೆಯನ್ನು ಸಂಪೂರ್ಣ ತಂಬಾಕು ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ಆಯೋಜಿಸಿದ್ದ ಕೋಟ್ಟಾ-2003ರ ಕಾಯ್ದೆ ಬಗ್ಗೆ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಯುವ ಸಮುದಾಯ ತಂಬಾಕು ಉದ್ಯಮಗಳ ಪ್ರೇರಣೆಗೆ ಒಳಗಾಗುವುದನ್ನು ರಕ್ಷಿಸುವುದೇ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಪ್ರಮುಖ ಧ್ಯೇಯ. ತಂಬಾಕು ಉತ್ಪನ್ನಗಳ ಬಳಕೆಯಿಂದ ಉಂಟಾಗುವ ತೊಂದರೆ, ಸಾವಿನ ಪ್ರಮಾಣವನ್ನು ತಡೆಯುವ ಕಾರ್ಯ ನಿರಂತರವಾಗಿ ಸಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ತಿಮ್ಮರಾಜು, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸಂಜಯ್, ಮಿಮ್ಸ್ ಸಹಾಯಕ ಪ್ರಾಧ್ಯಾಪಕ ಡಾ.ಸುರೇಶ್, ಡಾ.ನಂದೀಶ್, ಡಾ.ವಿನಯ್, ಎನ್‌ವೈಕೆ ಲೆಕ್ಕಾಧಿಕಾರಿ ಎಚ್.ಎಂ ಬಸವರಾಜು, ಅನುಪಮಾ, ಶಿವಸ್ವಾಮಿ, ಪ್ರಸನ್ನ, ಮೋಹನ್‌ಕುಮಾರ್ ಇತರರಿದ್ದರು.