

ಮಂಡ್ಯ: ಭೀಮಾ ಕೋರೆಗಾಂವ್ ಯುದ್ಧದ ವಿಜಯವು ಭಾರತೀಯ ಶೋಷಿತರ ವಿರೋಚಿತ ಚರಿತ್ರೆಯನ್ನು ವಿಶ್ವಕ್ಕೆ ಸಾರಿದೆ ಎಂದು ಅಂಬೇಡ್ಕರ್ ವಿಚಾರವಾದಿ ರಂಗಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಕಾವೇರಿ ಉದ್ಯಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಮತ್ತು ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತದ ನೆಲದಲ್ಲಿ 1818 ಜ.1ರಂದು 2ನೇ ಬಾಜಿರಾಯ ಪೇಶ್ವೆ ಸೇನೆಯ 28 ಸಾವಿರ ಸೈನಿಕರ ಮೇಲೆ ಕೇವಲ 5 ಮಹರ್ ರೆಜಿಮೆಂಟ್‌ನ ಸೈನಿಕರು ಭೀಮಾ ಕೋರೆಗಾಂವ್ ಯುದ್ಧದ ವಿಜಯ ಸಾಧಿಸಿದರು ಎಂದರು.
ಮನುವಾದಿ ಇತಿಹಾಸಕಾರರು ದಾಖಲಿಸದೇ ಘಟನೆಯು ಹೂತು ಹೋಗಿತ್ತು. ಈ ಚರಿತ್ರೆಯನ್ನು ಅಂಬೇಡ್ಕರ್ ಅವರು ಹೆಕ್ಕಿ ತೆಗೆದು ಜಗತ್ತಿಗೆ ಪರಿಚಯಿಸಿದರು. ಶೋಷಿತರು ಶಾಂತಿಗೂ ಸೈ, ಕೆಣಕಿದರೆ ಕ್ರಾಂತಿಗೂ ಸೈ ಎಂಬುದನ್ನು ಮಹರ್ ಸೈನಿಕರು ರಣರಂಗದಲ್ಲಿ ಘರ್ಜಿಸಿ ಇತಿಹಾಸ ಸೃಷ್ಟಿಸಿದರು. ಅಂತಹ ಇತಿಹಾಸವನ್ನು ನಮ್ಮ ಮುಂದಿನ ತಲೆಮಾರಿಗೆ ತಿಳಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.
ಮೈತ್ರಿ ಗೃಹ ನಿರ್ಮಾಣದ ಸಹಕಾರ ಸಂಘದ ಮುಖ್ಯಸ್ಥ ಪರಶಿವಮೂರ್ತಿ ಮಾತನಾಡಿದರು. ಮಿಮ್ಸ್ ವೈದ್ಯ ಡಾ.ಮನೋಹರ್, ಕಾರ್ಯಪಾಲಕ ಇಂಜಿನಿಯರ್ ಚಂದ್ರಹಾಸ್, ಆಚರಣಾ ಸಮಿತಿಯ ಟಿ.ಡಿ.ನಾಗರಾಜ್, ವಕೀಲರಾದ ಸುಂಡಹಳ್ಳಿ ಮಂಜುನಾಥ್, ಶಿವಶಂಕರ್, ಹರೀಶ್, ಜೆ.ರಾಮಯ್ಯ ಇತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ವಿಜಯೋತ್ಸವ ಪ್ರಯುಕ್ತ ನಗರದ ಪ್ರಮುಖ ರಸ್ತೆಗಳಲ್ಲಿ ಕ್ಯಾಂಡಲ್ ಬೆಳಕಿನ ಮೆರವಣಿಗೆ ಮಾಡಲಾಯಿತು.