

ಮಂಗಳೂರು: ತಲಪಾಡಿ ಕೆ.ಸಿ.ರೋಡ್‌ನಲ್ಲಿರುವ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ಸಂಕ್ರಮಣ ಹಿನ್ನೆಲೆಯಲ್ಲಿ ಹೊರಗೆ ಇರುವ ಅಯ್ಯದ ಕಲ್ಲಿನಲ್ಲಿ ಇರಿಸಿದ ದೀಪ ಜೋರಾಗಿ ಗಾಳಿ, ಮಳೆ ಸುರಿದರೂ ನಂದಿ ಹೋಗದೆ ಇನ್ನಷ್ಟು ಪ್ರಕಾಶಮಾನವಾಗಿ ಉರಿದಿದೆ. ಇದು ಈ ಕ್ಷೇತ್ರದಲ್ಲಿ ನೆಲೆ ನಿಂತ ಬಬ್ಬುಸ್ವಾಮಿಯ ಕಾರ್ಣಿಕದ ಒಂದು ದೃಷ್ಟಾಂತ ಎನ್ನಲಾಗುತ್ತಿದೆ. ಇಂತಹ ದೈವಿಕ ಶಕ್ತಿಯ ಕ್ಷೇತ್ರದಲ್ಲಿ ನಡೆದ ಈ ವಿಶೇಷ ಪವಾಡ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಬಾರಿಯ ಸಂಕ್ರಮಣ ಆಚರಣೆ ಸಂದರ್ಭ ಹೆಚ್ಚಿನ ದೈವಸ್ಥಾನಗಳಲ್ಲಿ ಕರೊನಾ ಮಹಾಮಾರಿಯ ಸರ್ವನಾಶಕ್ಕೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಬಬ್ಬುಸ್ವಾಮಿಗೆ ಮಹಾಮಾರಿ ರೋಗಗಳನ್ನು ನಿಗ್ರಹಿಸುವ ಶಕ್ತಿ ಇದೆ. ಅದರಂತೆ ದೇಶಕ್ಕೆ ಬಂದಿರುವ ಕರೊನಾ ಎನ್ನುವ ಮಹಾಮಾರಿಯನ್ನು ಬಬ್ಬುಸ್ವಾಮಿ ನಿಗ್ರಹಿಸಲಿ ಎಂದು ಗ್ರಾಮಸ್ಥರು ಈ ಸಂದರ್ಭ ಪ್ರಾರ್ಥಿಸಿದರು. ಕೈಲಾಸವಾಸಿ ಈಶ್ವರ ದೇವರ ಅಂಶಸಂಭೂತರಾಗಿ ಜನಿಸಿದ ಬಬ್ಬುಸ್ವಾಮಿಗೆ ಅದಿಮಾಯೆ ಮಹಮ್ಮಾಯಿ ದೇವಿ ಮಹಾಮಾರಿ ರೋಗಳನ್ನು ನಿಗ್ರಹಿಸುವ ವರಪ್ರಸಾದವನ್ನು ನೀಡಿದ ಉಲ್ಲೇಖ ಜನಪದದಲ್ಲಿದೆ ಎನ್ನುತ್ತಾರೆ ಎಸ್.ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ.