ಸಚಿವ ಸ್ಥಾನ ನೀಡಲು ಕೊರವೇ ಒತ್ತಾಯ

PAVAN PEMMAIHA
Published on

ಮಡಿಕೇರಿ: ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿ ಇಬ್ಬರು ನೂತನ ಶಾಸಕರು ಆಯ್ಕೆಯಾಗಿದ್ದು, ಹೊಸ ಸರ್ಕಾರ ರಚನೆ ಸಂದರ್ಭ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕೆಂದು ಕೊಡಗು ರಕ್ಷಣಾ ವೇದಿಕೆ ಒತ್ತಾಯಿಸಿದೆ.


ಪತ್ರಿಕಾ ಪ್ರಕಟಣೆ ನೀಡಿರುವ ಕೊರವೇ ಅಧ್ಯಕ್ಷ ಅಚ್ಚಂಡೀರ ಪವನ್ ಪೆಮ್ಮಯ್ಯ, ನೂತನವಾಗಿ ಆಯ್ಕೆಯಾಗಿರುವ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ವೈದ್ಯರಾಗಿ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ವಕೀಲರಾಗಿ ಸಾಕಷ್ಟು ಹೆಸರು ಮಾಡಿದ್ದಾರೆ. ಇಬ್ಬರೂ ವಿದ್ಯಾವಂತರು, ಮಾತ್ರವಲ್ಲದೆ ಅಭಿವೃದ್ಧಿಪರ ಚಿಂತನೆಯ ಉತ್ಸಾಹಿ ಯುವಕರಾಗಿದ್ದಾರೆ. ಸಚಿವ ಸ್ಥಾನವನ್ನು ನಿಭಾಯಿಸಲು ಇವರು ಅರ್ಹರಾಗಿದ್ದು, ಕನಿಷ್ಠ ಒಬ್ಬರಿಗಾದರು ಮಂತ್ರಿಗಿರಿ ನೀಡಬೇಕೆಂದು ಆಗ್ರಹಿಸಿದ್ದಾರೆ.


ಕಳೆದ ಅನೇಕ ವರ್ಷಗಳಿಂದ ಜಿಲ್ಲೆಯವರಿಗೆ ಸಚಿವ ಸ್ಥಾನ ದೊರೆಯದೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಜಿಲ್ಲೆಯ ಜನರ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಸರ್ಕಾರ ರಚಿಸುತ್ತಿದ್ದು, ಸಚಿವ ಸಂಪುಟದಲ್ಲಿ ಕೊಡಗಿನವರಿಗೆ ಸ್ಥಾನ ಕಲ್ಪಿಸಬೇಕು. ಕಾವೇರಿ ನೀರು ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ತನ್ನದೇ ಆದ ರೀತಿಯಲ್ಲಿ ಪುಟ್ಟ ಜಿಲ್ಲೆ ಕೊಡಗು ಅಪಾರ ಕೊಡುಗೆಯನ್ನು ನೀಡುತ್ತಾ ಬಂದಿದೆ. ಸಚಿವ ಸ್ಥಾನ ನೀಡುವ ಮೂಲಕ ಜಿಲ್ಲೆಯ ಜನರಿಗೆ ಸರ್ಕಾರ ಉಡುಗೊರೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net