

ಮಂಡ್ಯ: ನಾವಿಂದು ಸಾಂಸ್ಕೃತಿಕ ಗುಲಾಮಗಿರಿಗೆ ಸಿಲುಕಿದ್ದೇವೆ. 3500 ವರ್ಷದ ಹಿಂದೆ ಕಶ್ಯಪ ಮಹರ್ಷಿಗಳು ಸಪ್ತ ಮಾತೃಕೆಯರನ್ನು ಗುಲಾಮರಾಗಿಸಿಕೊಂಡಂತೆ ಇಂದು ಮೇಲ್ಜಾತಿಯವರು ಕೆಳಜಾತಿಯವರನ್ನು ಗುಲಾಮರಾಗಿಸಿಕೊಂಡು ಅವಕಾಶ ವಂಚಿತರನ್ನಾಗಿ ಮಾಡುತ್ತಿದ್ದಾರೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕುಳುವ ಸಮಾಜ ಹಾಗೂ ಡ್ರೀಮ್ ಫೌಂಡೇಶನ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ‘ಕೊರವಂಜಿ ಸಂಸ್ಕೃತಿ ಉತ್ಸವ’ ಕಾರ್ಯಕ್ರಮದಲ್ಲಿ ನೆಲಮೂಲ ಸಂಸ್ಕೃತಿ ಕುರಿತು ಪ್ರಧಾನ ಭಾಷಣ ಮಾಡಿದ ಅವರು, ಸಾಂಸಕ್ಕತಿಕ ದಾಸ್ಯದಿಂದ ಮುಕ್ತವಾಗದಿದ್ದಲ್ಲಿ ತಳ ಸಮುದಾಯಗಳು ಅಭಿವೃದ್ಧಿ ಕಾಣಲು ಸಾಧ್ಯವೇ ಇಲ್ಲ. ಪ್ರಸ್ತುತ ರಾಜಕಾರಣದಲ್ಲಿ ಶೋಷಿತ ತಳ ಸಮುದಾಯಗಳ ಜನಪ್ರತಿನಿಧಿಗಳು ಮಾರಾಟವಾಗುತ್ತಿದ್ದಾರೆ. ಆ ಮೂಲಕ ತಮ್ಮ ಸಮುದಾಯವನ್ನು ವಂಚಿಸುತ್ತಾ ಕುಲಕಂಟಕರಾಗುತ್ತಿದ್ದಾರೆ ಎಂದು ವಿಷಾಧಿಸಿದರು.
ನಮ್ಮ ಮಕ್ಕಳು ವಿದ್ಯೆಕಲಿತವರ ಕೈಗೊಂಬೆಯಾಗಿ, ಅವರ ಕಾಲಾಳುಗಳಾಗಿ ಬಳಕೆಯಾಗುತ್ತಿದ್ದಾರೆ. ಇದಕ್ಕೆ ಕಾರಣವೆಂದರೆ, ನಾವು ನಮ್ಮ ಮೂಲ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ನಮ್ಮ ಕೈಗೆ ಲೇಖನಿ ಕೊಡುವ ಬದಲು ಕತ್ತಿ ಗುರಾಣಿ ಕೊಟ್ಟು ನಮ್ಮನ್ನು ಕಿತ್ತಾಡುವಂತೆ ಮಾಡಿದ್ದಾರೆ. ಈ ದೇಶದ ಧರ್ಮ ರಾಜಕಾರಣಕ್ಕೆ ಸಿಲುಕಿದವರು ನಾವು. ಕುಲಚರಿತ್ರೆಗಳು ನಮ್ಮ ಸಂಸ್ಕೃತಿಯನ್ನು ತೋರಿಸುತ್ತವೆಯಾದ್ದರಿಂದ ಕುಲಶಾಸ್ತ್ರೀಯ ಅಧ್ಯಯನವಾಬೇಕು. ಆಗ ಎಲ್ಲ ಕ್ಷೇತ್ರಗಳಲ್ಲೂ ಅವಕಾಶಗಳು ತನ್ನಿಂದ ತಾನೇ ತೆರೆದುಕೊಳ್ಳುವಂತಾಗುತ್ತದೆ ಎಂದು ವಿಶ್ಲೇಷಿಸಿದರು.
ಶ್ರೀರಂಗಪಟ್ಟಣ ಪಶ್ಚಿಮವಾಹಿನಿಯ ಚಂದ್ರವನ ಆಶ್ರಮದ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವಿಧಾನಸಭೆಯ ಉಪಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಕುಳುವ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಕುಮಾರ್ ಗಣಂಗೂರು ಅಧ್ಯಕ್ಷತೆ ವಹಿಸಿದ್ದರು. ಶಾಸಕ ರವಿಕುಮಾರ್ ಗಣಿಗ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಶಿವಣ್ಣ, ತಹಸೀಲ್ದಾರ್ ಶಿವಕುಮಾರ್ ಬಿರಾದಾರ್, ಕಿರಣ್ ಕುಮಾರ್ ಕೊತ್ತಗೆರೆ, ಶಿವಾನಂದ ಎಂ.ಭಜಂತ್ರಿ, ವೆಂಕಟೇಶ್, ಡಾ.ರವಿ ಮಾಕಳಿ, ಡಾ.ವಿ.ಭಾಗ್ಯಲಕ್ಷ್ಮೀ, ಭೀಮಪುತ್ರಿ ನಾಗಮ್ಮ, ವೆಂಕಟರಮಣಯ್ಯ, ಲೋಹಿತಾಶ್ವ, ಸುರೇಶ್‌ನಾಯ್ಡು ಇತರರಿದ್ದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಲಕ್ಷ್ಮೀಪತಿ ಕೋಲಾರ, ಶ್ರೀನಿವಾಸ್, ಸಿ.ಎನ್.ಮಂಜೇಶ್, ಸುನಿಲ್ ಮಾನ್ಪಡೆ, ಮುತ್ತಪ್ಪ, ಫರ್ನಾಂಡಿಸ್ ಅವರಿಗೆ ರಾಜ್ಯಮಟ್ಟದ ಕೊರವಂಜಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದಕ್ಕೂ ಮೊದಲು ರಾಜ್ಯದ ವಿವಿಧ ಜಿಲ್ಲೆಯ ಕೊರವಂಜಿ ವೇಷಧಾರಿಗಳು ಹಾಗೂ ಜನಪದ ಕಲಾತಂಡಗಳು ನಗರದ ಸಿಲ್ವರ್ ಜ್ಯುಬಿಲಿ ಉದ್ಯಾನದಿಂದ ಅಂಬೇಡ್ಕರ್ ಭವನದವರೆಗೆ ಮೆರವಣಿಗೆ ನಡೆಸಿದರು. ಇನ್ನು ಸಂಸ್ಕೃತಿ ಉತ್ಸವದಲ್ಲಿ ಲಕ್ಷ್ಮೀಪತಿ ಕೋಲಾರ ವಿರಚಿತ ‘ಮರೆತ ದಾರಿ’ ನಾಟಕದ ಕೊರವಿ ದೃಶ್ಯ ಪ್ರದರ್ಶನ ಜನಮನ ಸೆಳೆಯಿತು. ಬೆಂಗಳೂರಿನ ಅಜೀವಕ ತಂಡದ ಡಾ.ಉದಯ್ ಸೋಸಲೆ ನಿರ್ದೇಶನದಲ್ಲಿ ಕೊರವಿ ಮೂಲ ಸಂಸ್ಕೃತಿಯನ್ನು ಅನಾವರಣಗೊಳಿಸಲಾಯಿತು.