

ವಿಜಯವಾಣಿ ಸುದ್ದಿಜಾಲ ಕೊರಟಗೆರೆ
ಸತತ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಎರಡನೇ ದೊಡ್ಡಕೆರೆ ಎಂದು ಗುರುತಿಸಿಕೊಂಡಿರುವ ಇರಕಸಂದ್ರ ಕಾಲನಿಕೆರೆಯು ಕೋಡಿ ಬಿದ್ದು ಮೈತುಂಬಿ ಹರಿಯುವ ಮೂಲಕ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುವ ತಾಣವಾಗಿ ಮಾರ್ಪಟ್ಟಿದೆ.
ಇರಕಸಂದ್ರ ಕಾಲನಿ ಕೆರೆಗೆ 1957ರಲ್ಲಿ ಮೈಸೂರು ದಿವಾನ ಸರ್.ಎಂ.ವಿಶ್ವೇಶ್ವರಯ್ಯ ಅವರು ಅಡಿಗಲ್ಲು ಹಾಕಿದ್ದು, ನೂರಾರು ಇಂಜಿನಿಯರ್ಗಳು ಮತ್ತು ಸಾವಿರಾರು ಕಾರ್ಮಿಕರ ಶ್ರಮ ದಿಂದ ನಿಮಾರ್ಣಗೊಂಡಿರುವ ಕಾಲನಿಕೆರೆಗೆ ಈಗ 75 ಹರೆಯ ತುಂಬಿದ್ದು, ಕಳೆದ ಒಂದು ವಾರದಿಂದ ಸುರಿದ
ಮಳೆಗೆ ಮೈತುಂಬಿ ಹರಿಯುತ್ತಿದೆ.
ಪ್ರವಾಸಿಗರ ದಂಡು ಇರಕಸಂದ್ರಕಾಲನಿ ಕೆರೆ ಮೈದುಂಬಿ ಹರಿಯುತ್ತಿರುವ ಹಿನ್ನೆಲೆ ಕೊರಟಗೆರೆ ತಾಲೂಕಿನ ಬಹುತೇಕ ಗ್ರಾಮಗಳಿಂದ ಮಾತ್ರವಲ್ಲದೇ ಜಿಲ್ಲೆಯ ನಾನಾ ಕಡೆಗಳಿಂದ ಕೆರೆ ಕೋಡಿಯ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಸಾಲುಸಾಲಾಗಿ ಪ್ರವಾಸಿಗರು ಬರುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿದೆ.
ರೈತರ ಜೀವನಾಡಿ ಇರಕಸಂದ್ರ ಕೆರೆ: ಕೆರೆಯನ್ನೇ ಆಶ್ರಯಿಸಿ ಬದುಕು ಕಟ್ಟಿಕೊಂಡಿರುವ ರೈತರು ಕೆರೆ ತುಂಬಿರುವುದಕ್ಕೆ ಸಂತಸಪಟ್ಟಿದ್ದಾರೆ. ದಿನನಿತ್ಯ ರೈತರು ಪಶು ಸಂಗೋಪನೆ, ತೋಟಗಾರಿಕೆ, ಕೃಷಿ ನಂಬಿಕೊಂಡು ಜೀವನ ಸಾಗಿಸುತ್ತಿದ್ದು, ಈ ಭಾಗದಲ್ಲಿ ಬಹುತೇಕ ಅಡಕೆ ಹಾಗೂ ತೆಂಗಿನ ತೋಟಗಳು ಸಾವಿರಾರು ಎಕರೆ ವ್ಯಾಪ್ತಿಯಲ್ಲಿದ್ದು, ನೀರಿಗಾಗಿ ಇರಕಸಂದ್ರ ಕೆರೆಯನ್ನೇ ಆಶ್ರಯಿಸಿದ್ದಾರೆ.
ಕೆರೆಯ ವಿಶೇಷತೆ: ಇರಕಸಂದ್ರ ಕೆರೆ ಕೋಡಿಯು ಕುದುರೆಯ ಲಾಳದ ಆಕಾರವಿದ್ದು, ಭಾರತದಎರಡನೇ ಕೋಡಿಯ ಆಕಾರದ ಕೆರೆಯಾಗಿದೆ. ಈ ಕೆರೆಗೆ ಎಷ್ಟೇ ಒಳ ಹರಿವು ನೀರು ಬಂದರೂ ಇದುವರೆಗೂ ಯಾವುದೇ ಅಡಚಣೆ, ಹಾನಿ ಉಂಟಾಗಿಲ್ಲ. ಅತಿ ಹೆಚ್ಚು ನೀರು ಬಂದರೆ ಸುತ್ತಲೂ ನೀರು ಹೊರಗೆ ಹೋಗುವಂತೆ ಕುದುರೆ ಲಾಳದ ಆಕಾರದಲ್ಲಿ ವಿನ್ಯಾಸ ಮಾಡಲಾಗಿದೆ. ಒಟ್ಟಾರೆ ತಾಲೂಕಿನಲ್ಲಿನ ಬಹುತೇಕ ಕೆರೆ&ಕಟ್ಟೆಗಳು ಕೋಡಿ ತುಂಬುವ ಹಂತಕ್ಕೆ ತಲುಪಿದ್ದು, ತಾಲೂಕಿನ ಬಹುದೊಡ್ಡ ಕೆರೆ ಎಂದೇ ಕರೆಯಲ್ಪಡುವ ಮಾವತ್ತೂರು ಕೆರೆ ತುಂಬಲು ಇನ್ನೂ ಹೆಚ್ಚಿನ ನೀರಿನ ಅವಶ್ಯಕತೆಯಿದೆ. ಹೀಗೆ ಮಳೆ ಮುಂದುವರೆದರೆ ಆದಷ್ಟು ಬೇಗ ಕೆರೆ ತುಂಬುವ ನಿರೀೆಯಲ್ಲಿ ರೈತರಿದ್ದಾರೆ.