ಕೊರಮ್ಮ ಯುವ ಜನತೆಯನ್ನು ಬೆರಗುಗೊಳಿಸುವ ಸಿನಿಮಾ- ನಿರ್ದೇಶಕ ಶಿವಧ್ವಜ್ ಶೆಟ್ಟಿ ಅಭಿಮತ

8d96dc59c0892a17bbd36fbd208b9602
Published on




ಮಂಗಳೂರು : ತುಳುನಾಡಿನ ಸಂಸ್ಕೃತಿ, ಆಚಾರ- ವಿಚಾರ, ಜೀವನ ಪದ್ಧತಿ ಇವೆಲ್ಲವುಗಳೊಂದಿಗೆ ಮನೋರಂಜನೆಯನ್ನು ಬೆರಸಿಕೊಂಡು ಸುಂದರವಾಗಿ ಮೂಡಿಬಂದಿರುವ ತುಳು ಸಿನೆಮಾ ಕೊರಮ್ಮ ಇಂದಿನ ಯುವ ಜನತೆಯನ್ನು ಬೆರಗುಗೊಳಿಸುವಂತೆ ಮಾಡಿದೆ. ಈ ಸಿನಿಮಾವನ್ನು ತುಳುನಾಡಿನ ಜನತೆ ವೀಕ್ಷಿಸಿ ಪ್ರೋತ್ಸಾಹಿಸ ಬೇಕು ಎಂದು ನಿರ್ದೇಶಕ ಶಿವಧ್ವಜ್ ಶೆಟ್ಟಿ ತಿಳಿಸಿದರು.
ಸುರತ್ಕಲ್ನ ಸಿನಿ ಗ್ಯಾಲಕ್ಸಿ ಚಿತ್ರಮಂದಿರದಲ್ಲಿ ಕೊರಮ್ಮ ತುಳು ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಅವರು ಮಾತನಾಡಿದರು.
ನಿರ್ಮಾಪಕ ಅಡ್ಯಾರ್ ಮಾಧವ ನಾಯ್ಕ್, ಸಿನಿಗ್ಯಾಲಕ್ಸಿ ಸಂಸ್ಥೆಯ ನಿರ್ದೇಶಕ ಶಶಿಕುಮಾರ್, ಕೃಷ್ಣ ಅಡ್ಯಂತಾಯ, ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ, ವೆಂಕಟರಮಣ, ದಿನೇಶ್ ಪರಂಗಿಪೇಟೆ, ಮಧು ಸುರತ್ಕಲ್, ನಟ ಮೋಹನ್ ಶೇಣಿ, ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯ ಉಪಾಧ್ಯಕ್ಷೆ ಸರೋಜ ಟಿ ಶೆಟ್ಟಿ, ಸರಾಯು ಶೆಟ್ಟಿ, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಸಿನಿಗ್ಯಾಲಕ್ಸಿಯ ದೀಪಕ್ ಉಪಸ್ಥಿತರಿದ್ದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರು, ಸುರತ್ಕಲ್, ಪುತ್ತೂರು, ಪಡುಬಿದ್ರೆ, ಮುಂತಾದ ಕಡೆಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ . ಚಿತ್ರದ ಹಾಡಿನ ದೃಶ್ಯವೊಂದರಲ್ಲಿ ತುಳುನಾಡಿನ ಪೂರ್ವಜರ ಬದುಕು ಮಾರ್ಮಿಕವಾಗಿ ಪ್ರತಿಬಿಂಬಿತವಾಗಿದೆ. ತುಳುನಾಡಿನ ಹಿರಿಯರ ಕಾಲದ ಪರಿಕರಗಳನ್ನು ಸಮರ್ಥವಾಗಿ ಬಳಸಿಕೊಂಡು ಮಾಡಿರುವ ಈ ಸಿನೆಮಾದ ಕಥೆ-ಚಿತ್ರಕಥೆ-ನಿರ್ದೇಶನ ರಾಷ್ಟ್ರ ಪ್ರಶಸ್ತಿ ವಿಜೇತ
ನಿರ್ದೇಶಕ ಶಿವಧ್ವಜ್ ಶೆಟ್ಟಿ ಅವರದ್ದು. ಅಡ್ಯಾರ್ ಮಾಧವ ನಾಯ್ಕ್, ಈಶ್ಚರಿದಾಸ್ ಶೆಟ್ಟಿ ಮತ್ತು ರಾಜೇಶ್ವರಿ ರೈ ಚಿತ್ರದ ನಿರ್ಮಾಪಕರಾಗಿದ್ದಾರೆ. ಸಂಗೀತ ಶಿನೋಯ್ ಎ. ಜೋಸೆಫ್, ಛಾಯಾಗ್ರಹಣ ಸುರೇಶ್ ಬೈರಸಂದ್ರ, ಸಂಕಲನ ಗಣೇಶ್ ನೀರ್ಚಾಲ್, ಸಂಭಾಷಣೆ ಶ್ರೀನಿಧಿ ಭಟ್.
ಕಾರ್ಕಳದ ಬೈಲೂರಿನ ಸುಂದರ ತಾಣದಲ್ಲಿ ಒಂದೇ ಹಂತದಲ್ಲಿ ಚಿತ್ರೀಕಣವಾಗಿರುವ ಕೊರಮ್ಮ ಚಿತ್ರದ ತಾರಾಗಣದಲ್ಲಿ - ಗುರುಹೆಗ್ಡೆ, ರೂಪಶ್ರೀ ವರ್ಕಾಡಿ, ಮೋಹನ್ ಶೇಣಿ, ಬಿಂದುರಕ್ಷಿದಿ, ಜಿನಪ್ರಸಾದ್, ದಿವ್ಯಶ್ರೀ ನಾಯಕ್, ಲಕ್ಷ್ಮಣ ಕುಮಾರ್‌ಮಲ್ಲೂರು, ನಮಿತಾ ಕೂಳೂರು, ಸುಮನ ಮಂಗಳೂರು, ಹರೀಶ್ ಜೋಡು ರಸ್ತೆ ಮುಂತಾದವರಿದ್ದಾರೆ. ತುಳು ಚಿತ್ರರಂಗಕ್ಕೆ ಬದಲಾವಣೆ ಕೊಡಬಲ್ಲ ಮೌಲ್ಯಯುತವಾದ ಕಥಾವಸ್ತುವನ್ನು ಕೊರಮ್ಮ ಚಲನಚಿತ್ರ ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net