ಕೋರಂ ಕೊರತೆಯಿಂದ ರಾಮನಗರ ತಾಲೂಕು ಪಂಚಾಯಿತಿ ಸಭೆ ಮುಂದಕ್ಕೆ: 22 ಆಹ್ವಾನಿತರಲ್ಲಿ 6 ಸದಸ್ಯರು ಮಾತ್ರ ಭಾಗಿ

04-03-rama-tp
Published on

ರಾಮನಗರ: ಕೋರಂ ಕೊರತೆಯಿಂದಾಗಿ ಬುಧವಾರ ನಿಗದಿಯಾಗಿದ್ದ ರಾಮನಗರ ತಾಲೂಕು ಪಂಚಾಯಿತಿ ಸಭೆ ಮುಂದೂಡಲ್ಪಟ್ಟಿತು.

ತಾಪಂ ಸಭಾಂಗಣದಲ್ಲಿ ಅಧ್ಯಕ್ಷ ಗಾಣಕಲ್ ನಟರಾಜ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಬೇಕಿತ್ತು. ಸಭೆಗೆ 14 ತಾಪಂ ಸದಸ್ಯರು, 4 ನಾಮನಿರ್ದೇಶಿತ ಸದಸ್ಯರು, ಇಬ್ಬರು ಶಾಸಕರು, ಒಬ್ಬರು ವಿಧಾನ ಪರಿಷತ್ತು ಸದಸ್ಯರು ಹಾಗೂ ಸಂಸದರು ಸೇರಿ ಒಟ್ಟು 22 ಮಂದಿ ಆಹ್ವಾನಿತರಾಗಿತ್ತು. ಆದರೆ ಸಭೆಗೆ 6 ಸದಸ್ಯರು ಹಾಜರಾದರೆ ಉಳಿದವರು ಗೈರಾಗಿದ್ದರು. ಸಭೆ ನಡೆಯಲು ಕನಿಷ್ಠ 11 ಜನರ ಅಗತ್ಯ ಇರುವುದರಿಂದ ಸಾಮಾನ್ಯ ಸಭೆ ಮುಂದೂಡಿದ್ದಾಗಿ ಅಧ್ಯಕ್ಷ ನಟರಾಜು ತಿಳಿಸಿದರು ಎಂದು ಇಒ ಶಿವಕುಮಾರ್ ಹೇಳಿದರು.

ತಾಪಂನಲ್ಲಿ ಕಾಂಗ್ರೆಸ್‌ನ 6 ಹಾಗೂ ಜೆಡಿಎಸ್‌ನ 8 ಸದಸ್ಯರಿದ್ದಾರೆ. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್‌ನಿಂದ ಆಯ್ಕೆಯಾದ ಬೆರಳೆಣಿಕೆ ಸದಸ್ಯರು ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದಾರೆ. ಈ ಬೆಳವಣಿಗೆಗಳು ತಾಪಂ ಆಡಳಿತ ವ್ಯವಸ್ಥೆ ಮೇಲೆ ಪರೋಕ್ಷವಾಗಿ ಪರಿಣಾಮ ಬೀರುತ್ತಿದೆ. ಅಲ್ಲದೆ, ಅನುಷ್ಠಾನವಾಗಬೇಕಾದ ಸರ್ಕಾರದ ಯೋಜನೆಗಳ ಬಗ್ಗೆ ಪರಿಣಾಮಕಾರಿಯಾಗಿ ಚರ್ಚೆ ನಡೆಯಲು ಮತ್ತು ಸವಲತ್ತುಗಳನ್ನು ವಿತರಣೆ ಮಾಡುವಾಗ ಅಧ್ಯಕ್ಷ ನಟರಾಜ್ ಇತರ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದೇ ಸಭೆಗೆ ಹೆಚ್ಚಿನ ಸದಸ್ಯರು ಗೈರಾಗಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

ಜೆಡಿಎಸ್ ಸದಸ್ಯರ ಆಕ್ರೋಶ: ತಾಪಂ ಸದಸ್ಯರನ್ನು ಕೇವಲ ಸಾಮಾನ್ಯಸಭೆಗೆ ಸೀಮಿತಗೊಳಿಸಿ, ಎಲ್ಲವನ್ನು ಅಧ್ಯಕ್ಷರೇ ತೀರ್ಮಾನ ತೆಗೆದುಕೊಳ್ಳುವುದಾದರೆ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವುದಾದರೆ ಹೇಗೆ? ನಮ್ಮ ಗಮನಕ್ಕೆ ತರದೆ ತಾಪಂ ಅನುದಾನದಲ್ಲಿ ಬಿಸಿಎಂ ಹಾಸ್ಟೆಲ್‌ಗಳಿಗೆ ಸೌಲಭ್ಯ ವಿತರಣೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಒಬ್ಬರೇ ಭೇಟಿ ನೀಡುವುದು ಮಾಡಿದರೆ ತಾಪಂ ಸದಸ್ಯರ ಬಗ್ಗೆ ಜನರಲ್ಲಿ ತಪ್ಪು ಸಂದೇಶ ರವಾನೆಯಾಗಲಿದೆ. ಈ ಹಿಂದೆ ಮಹದೇವಯ್ಯ ಅಧ್ಯಕ್ಷರಾಗಿದ್ದಾಗ ನಟರಾಜು ಅವರೇ ತಾಪಂನಿಂದ ಯಾವುದೇ ಕಾರ್ಯಕ್ರಮ ಆಯೋಜನೆ, ಪ್ರವಾಸ ಮಾಡುವಾಗ ಅಲ್ಲಿನ ಸದಸ್ಯರ ಗಮನಕ್ಕೆ ತಂದು ಅವರ ಜತೆಯೇ ಭೇಟಿ ನೀಡಬೇಕೆಂದು ಪಟ್ಟು ಹಿಡಿದು ಸಭಾ ನಡಾವಳಿ ಮಾಡಿಸಿದ್ದಾರೆ. ಆದರೆ ಅಧ್ಯಕ್ಷರಾದ ಬಳಿಕ ಸಭಾ ನಡಾವಳಿ ನಿರ್ಣಯ ಧಿಕ್ಕರಿಸುತ್ತಿದ್ದಾರೆ. ಹೀಗಾಗಿ ಸಭೆಯಿಂದ ದೂರ ಉಳಿಯಲಾಗಿತ್ತು ಎಂದು ಜೆಡಿಎಸ್ ಸದಸ್ಯರು ಹೇಳುತ್ತಾರೆ.

ಸಭೆಗೆ ಗೈರು-ಹಾಜರಿ: ಜೆಡಿಎಸ್‌ನ ಮಹದೇವಯ್ಯ, ಭದ್ರಯ್ಯ, ಲಕ್ಷ್ಮೀಕಾಂತ, ಪ್ರಕಾಶ್, ಜಗದೀಶ್, ಪದ್ಮಾ, ನೀಲಾ, ಪ್ರಭಾವತಿ ಅವರು ಸಭೆಯಿಂದ ದೂರ ಉಳಿದಿದ್ದರು. ಕಾಂಗ್ರೆಸ್ ಅಧ್ಯಕ್ಷ ನಟರಾಜು, ಉಪಾಧ್ಯಕ್ಷೆ ರಮಾಮಣಿ, ಸದಸ್ಯರಾದ ಚಂದ್ರಕಲಾ, ವರಲಕ್ಷ್ಮಮ್ಮ, ರೇಣುಕಯ್ಯ, ಲಕ್ಷ್ಮಮ್ಮ ಸಭೆಗೆ ಹಾಜರಾಗಿದ್ದರು.

ಬಾಲಕೃಷ್ಣ ಸೂಚಿಸಿದರೆ ಇಂದೇ ರಾಜೀನಾಮೆ: ಈ ಹಿಂದೆ ತಾಲೂಕು ಪಂಚಾಯಿತಿ ಅಧ್ಯಕ್ಷ ಚುನಾವಣೆ ಹೊಣೆ ಹೊತ್ತಿದ್ದ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಸೂಚಿಸಿದರೆ ಇಂದೇ ರಾಜೀನಾಮೆ ನೀಡುವುದಾಗಿ ಅಧ್ಯಕ್ಷ ಗಾಣಕಲ್ ನಟರಾಜ್ ತಿಳಿಸಿದರು. ಬುಧವಾರ ತಾಲೂಕು ಪಂಚಾಯಿತಿ ಅಧ್ಯಕ್ಷರ ಕೊಠಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದೊಂದಿಗೆ ನಡೆದಿರುವ ಒಡಂಬಡಿಕೆಗೆ ಬದ್ಧನಾಗಿದ್ದೇನೆ. ಸಂಸದ ಡಿ.ಕೆ.ಸುರೇಶ್ ಸಹ ಎಚ್.ಸಿ. ಬಾಲಕೃಷ್ಣ ಜತೆ ಚರ್ಚಿಸಿ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಮಾ.31ಕ್ಕೆ ರಾಜೀನಾಮೆ ನೀಡುವಂತೆ ಬಾಲಕೃಷ್ಣ ಸಹ ತಿಳಿಸಿದ್ದಾರೆ ಎಂದರು.

ಹಲವು ಕಾರಣಗಳನ್ನು ಮುಂದಿಟ್ಟು ರಾಜೀನಾಮೆ ನೀಡಲು ವಿಳಂಬ ಮಾಡಲಾಗುತ್ತಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಆದರೆ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ, ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಕಾಂಗ್ರೆಸ್ ಹೈಕಮಾಂಡ್ ಮುಖ್ಯ. ಅವರ ಅಣತಿಯಂತೆ, ಪಕ್ಷದ ಮುಖಂಡರು ಕಾರ್ಯಕರ್ತರಿಗೆ ನೋವು ತರುವ ಯಾವುದೇ ಕೆಲಸ ಮಾಡುವುದಿಲ್ಲ. ಹಿಂದೆ ಅಧ್ಯಕ್ಷರಾಗಿದ್ದ ಮಹದೇವಯ್ಯ ಅವರು ಒಡಂಬಡಿಕೆಯಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ, ಇಷ್ಟೆಲ್ಲ ಸಮಸ್ಯೆಗಳು ಉದ್ಭವವಾಗುತ್ತಿರಲಿಲ್ಲ. ಹೈಕಮಾಂಡ್ ತಿಳಿಸಿದ ತಕ್ಷಣ ರಾಜೀನಾಮೆ ನೀಡುತ್ತೇನೆ. ಆದರೆ ಜೆಡಿಎಸ್‌ನ ಲಕ್ಷ್ಮೀಕಾಂತ್ ಅಥವಾ ಯಾವುದೇ ಸದಸ್ಯರು ಇಲ್ಲ ಮಹದೇವಯ್ಯ ಅವರೇ ಅಧ್ಯಕ್ಷರಾಗಲೀ ನನಗೂ ಅದಕ್ಕೂ ಸಂಬಂಧವಿಲ್ಲ ಎಂದರು. ತಾಪಂ ಸದಸ್ಯರಾದ ರೇಣುಕಯ್ಯ, ಲಕ್ಷ್ಮಮ್ಮ, ಚಂದ್ರಕಲಾ, ಉಪಾಧ್ಯಕ್ಷೆ ರಮಾಮಣಿ, ಸ್ಥಾಯಿಸಮಿತಿ ಅಧ್ಯಕ್ಷೆ ವರಲಕ್ಷ್ಮಮ್ಮ ಇದ್ದರು.

ಸಭೆಯಲ್ಲಿ ಕಾಮಗಾರಿಗಳ ಸ್ಥಳ ಬದಲಾವಣೆ, ವಿವಿಧ ಇಲಾಖೆಗಳ ಪ್ರಗತಿ ಕುರಿತು ಸಭೆಯಲ್ಲಿ ಚರ್ಚಿಸಬೇಕಿತ್ತು. ಆದರೆ ಸದಸ್ಯರ ಗೈರುಹಾಜರಿಯಿಂದ ಸಾಮಾನ್ಯ ಸಭೆ ರದ್ದಾಗಿದೆ. ಎಲ್ಲರ ಸಹಕಾರದಿಂದ ಅಭಿವೃದ್ಧಿ ಕೆಲಸ ಮಾಡಿರುವ ತೃಪ್ತಿ ಇದೆ. -ಗಾನಕಲ್ ನಟರಾಜು, ತಾಪಂ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net