

ಸಂದೀಪ್ ಸಾಲ್ಯಾನ್ ಬಂಟ್ವಾಳ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಕೊರಗ, ಮಲೆಕುಡಿಯ ಸಹಿತ ಪರಿಶಿಷ್ಟ ಪಂಗಡದ ಜನರಿಗೆ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಸ್ಥಾಪಿಸಿದ ಸಂಚಾರಿ ಗಿರಿಜನ ಆರೋಗ್ಯ ಘಟಕದಲ್ಲಿ ವೈದ್ಯರೂ ಇಲ್ಲ, ಸಿಬ್ಬಂದಿ ಹುದ್ದೆಗಳೂ ಖಾಲಿ ಖಾಲಿ. ಜತೆಗೆ ಮನೆಬಾಗಿಲಿಗೆ ಸೇವೆ ನೀಡುವುದಕ್ಕಾಗಿ ಇದ್ದ ಘಟಕದ ವಾಹನವೂ ವರ್ಷದಿಂದ ಪೊದೆಯೊಳಗೆ ಸೇರಿದೆ. ಅರಣ್ಯದ ಅಂಚಿನಲ್ಲಿ, ರಾಜ್ಯದ ಗಡಿಭಾಗದಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗದ ಕೊರಗರು, ಮಲೆಕುಡಿಯರು, ಗಿರಿಜನರಿಗೆ ಆರೋಗ್ಯ ಸೇವೆ ನೀಡಲೆಂದೇ ಬಿ.ಸಿ.ರೋಡಿನ ಕೈಕಂಬದಲ್ಲಿ ಸಂಚಾರಿ ಗಿರಿಜನ ಆರೋಗ್ಯ ಘಟಕ ಕಾರ್ಯನಿರ್ವಹಿಸುತ್ತಿದೆ. ಎಸ್ಟಿ ಕಾಲನಿಗಳಲ್ಲಿ ಮನೆಮನೆಗೆ ತೆರಳಿ ಆರೋಗ್ಯ ಸೇವೆ ನೀಡಲಾಗುತ್ತಿದ್ದು, ತಿಂಗಳ ಹಿಂದೆಯಷ್ಟೇ ಇಲ್ಲಿನ ವೈದ್ಯರು ವರ್ಗಾವಣೆಯಾದ್ದರಿಂದ ಎಲ್ಲ ಸೇವೆ ಬಂದ್ ಆಗಿದೆ. ಇಬ್ಬರು ಆರೋಗ್ಯ ಸಹಾಯಕರು ಹಾಗೂ ಚಾಲಕರ ಹುದ್ದೆ ಹಲವು ಸಮಯಗಳಿಂದ ಖಾಲಿ ಇದ್ದು, ಈಗಾಗಲೇ ಇದ್ದ ಗ್ರೂಪ್ ಡಿ ಸಿಬ್ಬಂದಿ ಬಂಟ್ವಾಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ವರ್ಗಾವಣೆಗೊಂಡಿದ್ದಾರೆ. ಐದು ಮಂದಿ ಕರ್ತವ್ಯ ನಿರ್ವಹಿಸಬೇಕಾದ ಘಟಕದಲ್ಲಿ ಪ್ರಸ್ತುತ ಮಹಿಳಾ ಆರೋಗ್ಯ ಸುರಕ್ಷಾಧಿಕಾರಿ ಮಾತ್ರ ಕರ್ತವ್ಯ ನಿರ್ವಹಿಸುತಿದ್ದು, ಇದರಿಂದ ಜನರಿಗೆ ನೀಡಬೇಕಾದ ಸೇವೆಗಳೆಲ್ಲವೂ ತಿಂಗಳುಗಳಿಂದ ವ್ಯತ್ಯಯವಾಗಿದೆ. ಕೊರಗರ ಸಭೆಯಲ್ಲಿ ಪ್ರಸ್ತಾಪ ಬಿ.ಸಿ.ರೋಡಿನ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಜುಲೈ ತಿಂಗಳಿನಲ್ಲಿ ನಡೆದ ಕೊರಗ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಗಿರಿಜನ ಸಂಚಾರಿ ಆರೋಗ್ಯ ಘಟಕಕ್ಕೆ ವೈದ್ಯಾಧಿಕಾರಿ ಹಾಗೂ ವಾಹನ ಇಲ್ಲದೆ ಸಮಸ್ಯೆಯಾಗುತ್ತಿರುವ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ ವಿಷಯ ಪ್ರಸ್ತಾಪಿಸಿ ಗಮನ ಸೆಳೆದಿದ್ದರು. ದೂರದ ಊರುಗಳಿಗೆ ಸಿಬ್ಬಂದಿ ಬಸ್ಸಿನಲ್ಲಿ ಹೋಗಿ ಸೇವೆ ನೀಡಲು ತೊಂದರೆಯಾಗುತ್ತಿರುವ ಬಗ್ಗೆ ತಿಳಿಸಿದ್ದರು. 34 ಕಾಲನಿಗೆ ಒಂದೇ ಘಟಕ ತಾಲೂಕಿನಲ್ಲಿ 534 ಕೊರಗ ಸಮುದಾಯದವರು, 371 ಮಲೆಕುಡಿಯರು, 18,321 ಇತರ ಪರಿಶಿಷ್ಟ ಪಂಗಡದವರು ವಾಸಿಸುತ್ತಿದ್ದಾರೆ. ಗಿರಿಜನ ಸಂಚಾರಿ ಆರೋಗ್ಯ ಘಟಕ 20 ಹಾಸ್ಟೆಲ್‌ಗಳಿಗೆ, 34 ಕೊರಗರ ಕಾಲನಿ ಹಾಗೂ ಪರಿಶಿಷ್ಟ ಪಂಗಡದ ಕಾಲನಿಗೆ ಈ ಘಟಕದಿಂದ ಆರೋಗ್ಯ ಸೇವೆ ದೊರೆಯುತ್ತಿದೆ. ತುಕ್ಕುಹಿಡಿದ ವಾಹನ ಸಂಚಾರಿ ಗಿರಿಜನ ಆರೋಗ್ಯ ಘಟಕದ ವಾಹನ ಚಾಲಕರಿಲ್ಲದೆ ವರ್ಷದಿಂದ ಪೊದೆ ಸೇರಿದ್ದು, ಈಗಾಗಲೇ ತುಕ್ಕು ಹಿಡಿಯಲಾರಂಭಿಸಿದೆ. ಲಭ್ಯವಿರುವ ಸಿಬ್ಬಂದಿ ಖಾಸಗಿ ವಾಹನ ಅವಲಂಬಿಸಿ ಕನ್ಯಾನ, ಪುಣಚ, ಅಡ್ಕನಡ್ಕದಂತಹ ದೂರದ ಪ್ರದೇಶಗಳಿಗೆ ತೆರಳಿ ಸೇವೆ ನೀಡುತ್ತಿದ್ದಾರೆ. ಈ ಹಿಂದೆ ಇದ್ದ ಜೀಪೊಂದನ್ನು ಫಿಟ್‌ನೆಸ್ ಕೊರತೆಯಿಂದ ಇಲಾಖೆಗೆ ಹಿಂದಿರುಗಿಸಿದ್ದು, ಹೊಸ ವಾಹನ ನೀಡುವಂತೆ ತಾಲೂಕು ಆರೋಗ್ಯಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ನೀಡಲಾಗಿದೆ.
ಗಿರಿಜನ ಸಂಚಾರಿ ಆರೋಗ್ಯ ಘಟಕದಲ್ಲಿ ಒಬ್ಬ ವೈದ್ಯರು, ಒಬ್ಬ ಚಾಲಕ, ಎರಡು ಆರೋಗ್ಯ ಸಹಾಯಕರು, ಒಬ್ಬ ಡಿ.ಗ್ರೂಪ್ ಸಿಬ್ಬಂದಿ ಅವಶ್ಯಕತೆ ಇದೆ. ಡಾ.ತಿಮ್ಮಯ್ಯ, ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಸಂಚಾರಿ ಆರೋಗ್ಯ ಘಟಕದ ವಾಹನ ವರ್ಷದಿಂದ ಹಾಳಾಗಿದೆ. ಸಿಬ್ಬಂದಿ ಬಸ್ಸಿನಲ್ಲಿ ತೆರಳಿ ಆರೋಗ್ಯ ಸೇವೆ ನೀಡುತ್ತಿದ್ದಾರೆ. ರಾಷ್ಟ್ರೀಯ ಬಾಲಸ್ವಾಸ್ಥೃ ತಂಡವೂ ಕ್ಷೇತ್ರ ಭೇಟಿ ಕಾರ್ಯ ನಡೆಸುತ್ತಿದೆ. ಸಂಚಾರಿ ಗಿರಿಜನ ಘಟಕದಲ್ಲಿ ಕರ್ತವ್ಯದಲ್ಲಿದ್ದ ವೈದ್ಯಾಧಿಕಾರಿ ಇಲ್ಲಿಂದ ವರ್ಗಾವಣೆಯಾದ ಬಳಿಕ ಈ ಹುದ್ದೆ ಖಾಲಿ ಉಳಿದಿದೆ. ಡಾ.ಅಶೋಕ್ ಕುಮಾರ್ ರೈ, ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ