

ಉಳ್ಳಾಲ: ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಹಳೇ ಚೆಕ್‌ಪೋಸ್ಟ್ ಹಿಂಭಾಗದಲ್ಲಿರುವ ಕೊರಗಜ್ಜನ ಕಟ್ಟೆಯಲ್ಲಿ ಶನಿವಾರ ರಾತ್ರಿ ಕೋಲ ನಡೆಯುತ್ತಿದ್ದಾಗ ಕಲ್ಲೆಸೆದು ದಾಂಧಲೆಗೈದ ಮಾದಕ ವ್ಯಸನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ಪ್ಯಾರೀಸ್ ಹೋಟೆಲ್ ಬಳಿ ನಿವಾಸಿ ಮಹಮ್ಮದ್ ಹಫೀಝ್(25) ಆರೋಪಿ. ಇಲ್ಲಿ ಸುದೀರ್ಘ ಅವಧಿಯ ಬಳಿಕ ಶನಿವಾರ ಕೋಲ ಅಯೋಜಿಸಲಾಗಿದ್ದು, ಸಾಕಷ್ಟು ಭಕ್ತರು ಭಾಗವಹಿಸಿದ್ದರು. ಕೋಲ ನಡೆದ ಬಳಿಕ ಅಗೇಲು ಪ್ರಸಾದ ವಿತರಿಸುತ್ತಿದ್ದಾಗ ಹಫೀಜ್ ಹತ್ತಿರದ ಕಟ್ಟಡದ ಛಾವಣಿಯನ್ನೇರಿ ಕೋಲ ನಿಲ್ಲಿಸುವಂತೆ ಬೊಬ್ಬೆ ಹಾಕಿ ಜನರಿಗೆ ಕಲ್ಲೆಸೆಯಲು ಆರಂಭಿಸಿದ್ದಾನೆ. ಉಳ್ಳಾಲ ಠಾಣೆಯ ವಾಹನದ ಮೇಲೂ ಕಲ್ಲು ಬಿದ್ದಿತ್ತು. ತಕ್ಷಣ ಕೋಲದಲ್ಲಿ ಭಾಗವಹಿಸಿದ್ದ ಭಕ್ತರ ಗುಂಪೊಂದು ಹಫೀಝ್‌ನನ್ನು ಕೆಳಗೆ ಕರೆತಂದು ಥಳಿಸಿ, ನಂತರ ಪೊಲೀಸರಿಗೆ ಒಪ್ಪಿಸಿದೆ. ಆರೋಪಿ ನಶೆಯಲ್ಲಿದ್ದು, ತೊಕ್ಕೊಟ್ಟಿನಲ್ಲೂ ಲಾಕ್‌ಡೌನ್ ಇದೆಯೆನ್ನುವ ಭ್ರಮೆಯಿಂದ ದಾಂಧಲೆ ನಡೆಸಿರಬಹುದು ಎನ್ನುವ ಶಂಕೆ ಪೊಲೀಸರದ್ದು.
ಬೇರೇನು ಕಾರಣ?: ಇಲ್ಲಿರುವ ಕೊರಗಜ್ಜನ ಕಟ್ಟೆಯಲ್ಲಿ ಹಿಂದೆ ತೊಕ್ಕೊಟ್ಟು ಸ್ವಾಮಿ ಕೊರಗಜ್ಜ ಸೇವಾ ಸಮಿತಿಯಿಂದ ಪ್ರತಿವರ್ಷ ಕೋಲ ನಡೆಸಲಾಗುತ್ತಿತ್ತು. ಕೆಲವರ್ಷಗಳ ಹಿಂದೆ ಕೋಲ ನಡೆಯುತ್ತಿದ್ದ ಪಕ್ಕದ ಜಮೀನನ್ನು ಉದ್ಯಮಿಯೊಬ್ಬರು ಖರೀದಿಸಿ ವಾಣಿಜ್ಯ ಮತ್ತು ವಸತಿ ಸಂಕೀರ್ಣ ನಿರ್ಮಿಸಿದ್ದರು. ಇದು ಸರ್ಕಾರಿ ಜಾಗ ಎನ್ನುವ ತಕರಾರು ಕೂಡ ಇದೆ. ಇಲ್ಲಿ ಕೊರಗಜ್ಜನ ಕಟ್ಟೆ ನಿರ್ಮಿಸುವುದಕ್ಕೆ ವಸತಿ ಸಂಕೀರ್ಣದ ಕೆಲವು ನಿವಾಸಿಗಳು ಆಕ್ಷೇಪಿಸಿದ್ದು, ವ್ಯಸನಿಗೆ ಹಣ ನೀಡಿ ಕುಮ್ಮಕ್ಕು ನೀಡಿರುವ ಸಾಧ್ಯತೆಯಿದೆ ಎನ್ನುವ ಆರೋಪ ಕೇಳಿ ಬಂದಿದೆ.