ಹುಸಿಯಾಯತು ಗೃಹ ಸಚಿವರ ಭರವಸೆ: ಕೋಟತಟ್ಟು ಕೊರಗರ ಕಾಲನಿ ಪ್ರಕರಣ ಇನ್ನೂ ಹಿಂಪಡೆದಿಲ್ಲ ಸರ್ಕಾರ

kota sabe
Published on

ಕೋಟ: ಕೋಟತಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಗ ಸಮುದಾಯದ ಮೆಹಂದಿ ಕಾರ್ಯಕ್ರಮದಲ್ಲಿ ಕೋಟ ಪೊಲೀಸರ ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮುದಾಯದ ಕೆಲವರ ಮೇಲಿನ ಪ್ರಕರಣ ಹಿಂಪಡೆಯುವುದಾಗಿ ಗೃಹ ಸಚಿವರು ನೀಡಿದ್ದ ಭರವಸೆ ಹುಸಿಯಾಗಿದೆ.

ಇನ್ನು ಹದಿನೈದು ದಿನ ಕಾಲಾವಕಾಶ ನೀಡಿ, ಅನಂತರವೂ ಕೇಸ್ ಹಿಂಪಡೆಯದಿದ್ದರೆ ತೀವ್ರ ರೀತಿ ಹೋರಾಟ ನಡೆಸಲು ಕೊರಗ ಸಮಾಜದ ಮುಖಂಡರು ಭಾನುವಾರ ಕೋಟತಟ್ಟು ಕಾಲನಿಯಲ್ಲಿ ನಡೆಸಿದ ಸಭೆಯಲ್ಲಿ ನಿರ್ಧರಿಸಿದ್ದಾರೆ.

ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಹಿಂದೆ ಪ್ರಕರಣ ಹಿಂಪಡೆಯುವ ಹೇಳಿಕೆ ನೀಡಿದ್ದರು. ಇತ್ತೀಚೆಗೆ ಸಚಿವ ಕೋಟ ಅವರನ್ನು ಭೇಟಿ ಮಾಡಿದ್ದಾಗ 15 ದಿನ ಕಾಲಾವಕಾಶ ಕೋರಿ, ನ್ಯಾಯ ಒದಗಿಸುವುದಾಗಿ ತಿಳಿಸಿದ್ದರು. ಇದೀಗ ಗಡುವು ಮುಗಿದಿದೆ. ಸಚಿವರು, ಸರ್ಕಾರದ ಮೇಲಿನ ನಂಬಿಕೆ ದೂರವಾಗಿದ್ದು, ಪ್ರತಿಭಟನೆ ಅನಿವಾರ‌್ಯವಾಗಿದೆ. ನ್ಯಾಯ ಸಿಗುವ ತನಕ ನಿರಂತರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದು, ಕೊರಗಜ್ಜ ಹಾಗೂ ಬೈಕಾಡ್ತಿ ಅಮ್ಮನಲ್ಲಿ ಕೋರಿಕೆ ಇಡಲು ಸಮುದಾಯದ ಸಂಘಟಕರು ನಿರ್ಣಯಿಸಿದ್ದಾರೆ.

ಕೊರಗ ಮುಖಂಡರಾದ ಬಾಲರಾಜ್ ಮಂಗಳೂರು, ಸಂಜೀವ ಕೋಡಿಕಲ್, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಮುಖಂಡ ಶ್ರೀಪುತ್ರನ್, ಕೋಟತಟ್ಟು ಗ್ರಾಪಂ ಸದಸ್ಯೆ ಸೀತಾ, ಸ್ಥಳೀಯರಾದ ರಾಜೇಶ್ ಕೋಟ, ಸುದರ್ಶನ ಕೋಟ, ಲಕ್ಷ್ಮಣ ಬೈಂದೂರು, ನಾಗರಾಜ್ ಮಂಗಳೂರು, ಗಣೇಶ್ ಬಾರಕೂರು, ಶಿಲ್ಪಾ ಸಭೆಯಲ್ಲಿ ಉಪಸ್ಥಿತರಿದ್ದರು.

ಆಡಳಿತ ವ್ಯವಸ್ಥೆಯಿಂದ ದೌರ್ಜನ್ಯ: ಜಿಲ್ಲಾಧಿಕಾರಿ, ಸಚಿವರು ಕಾಲನಿಗೆ ಭೇಟಿ ನೀಡಿದ್ದಾಗ ಮೂಲ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದರು. ಆದರೆ ಈ ತನಕ ಈಡೇರಿಲ್ಲ. ಕೋಟ ಠಾಣೆಯ ಬಹುತೇಕ ಸಿಬ್ಬಂದಿಯನ್ನು ವರ್ಗಾಯಿಸುವುದಾಗಿ ಗೃಹ ಸಚಿವರು ನೀಡಿದ್ದ ಭರವಸೆಯೂ ಸುಳ್ಳಾಗಿದೆ. ಇವೆಲ್ಲ ಕೊರಗರ ಮೇಲೆ ಆಡಳಿತ ವ್ಯವಸ್ಥೆಯ ದೌರ್ಜನ್ಯವಲ್ಲವೇ ಮುಖಂಡ ವಿ.ಗಣೇಶ್ ಕುಂದಾಪುರ ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net