

ಕುಂದಾಪುರ: ಬೈಂದೂರು ತಾಲೂಕು ಹಕ್ಲಾಡಿ ಗ್ರಾಮ ಬ್ರಹ್ಮೇರಿ ಕೊರಗ ಕಾಲನಿ ನೀರಿನ ಸಮಸ್ಯೆ ಪರಿಹರಿಸಿದ ಅಧಿಕಾರಿಗಳು ಮನೆ ಕೆಲಸ ಮಾತ್ರ ಇನ್ನೂ ಪೂರ್ಣಗೊಳಿಸಿಲ್ಲ. ಪರಿಣಾಮ ಈ ಕುಟುಂಬಗಳು ಪ್ರಸಕ್ತ ಮಳೆಗಾಲದಲ್ಲೂ ಶಿಥಿಲಗೊಂಡ ಹಳೇ ಮನೆಯಲ್ಲೇ ಕಳೆಯಬೇಕಾಗಿದೆ.
ಕಳೆದ 8 ದಶಕಕ್ಕೂ ಹಿಂದಿನಿಂದ ಮೂಲನಿವಾಸಿಗಳು ಬ್ರಹ್ಮೇರಿ ಕಾಲನಿಯಲ್ಲಿ ಜೀವನ ಕಟ್ಟಿಕೊಂಡಿದ್ದಾರೆ. ಕಾಲನಿ ವಾಸಿಗಳು ಕೂಲಿ ಮಾಡಿ ಜೀವನ ನಡೆಸುತ್ತಿದ್ದು, ಮನೆಗೆ ಬೇಕಾದ ತರಕಾರಿ ತಾವೇ ಬೆಳೆಸುತ್ತಿದ್ದಾರೆ. ಅಂತ್ಯೋದಯ ಕಾರ್ಡ್ ಇದೆ. ಶ್ರಮಜೀವಿಗಳಾಗಿದ್ದು, ಊರು ಕೋಳಿ ಸಾಕಣೆ ಮಾಡುತ್ತಿದ್ದಾರೆ. ಕಾಲನಿಯ ಹಿರಿಯರು ಅನಕ್ಷರಸ್ಥರಾದರೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ.
ಕಾಲನಿಯಲ್ಲಿ ಐಟಿಡಿಪಿಯ 3.50 ಲಕ್ಷ ರೂ.ಅನುದಾನದಲ್ಲಿ ಮನೆ ನಿರ್ಮಾಣವಾಗುತ್ತಿದ್ದು, ಕಳೆದ ನಾಲ್ಕು ವರ್ಷದಿಂದ ಮನೆ ಕೆಲಸ ಕುಂಟುತ್ತಾ ಸಾಗಿದೆ. ಮಳೆಗಾಲದೊಳಗೆ ಮನೆ ಬಿಟ್ಟುಕೊಡುವ ಐಟಿಡಿಪಿ ಅಧಿಕಾರಿಗಳ ಭರವಸೆ ಇನ್ನೂ ಈಡೇರಿಲ್ಲ. ಗಿಲಾಯಿ, ನೆಲ ಹಾಸು, ಕಿಟಕಿ, ಬಾಗಿಲು, ಅಡುಗೆ ಮನೆ, ವಯರಿಂಗ್ ಕೆಲಸ ಬಾಕಿ ಇದೆ. ತಕ್ಷಣ ಮನೆ ಕೆಲಸ ಮುಗಿಸಿ ಕೊರಗರ ವಾಸಕ್ಕೆ ಅನುಕೂಲ ಮಾಡದಿದ್ದರೆ ಮಳೆಗಾಲದಲ್ಲಿ ಹಳೇ ಮನೆ ಕುಸಿದು ಅನಾಹುತ ಸಂಭವಿಸುವ ಸಾಧ್ಯತೆಯಿದೆ.
ಶೀಘ್ರ ಪೂರ್ಣ ಭರವಸೆ
ಕಾಲನಿ ಮನೆ ಕೆಲಸ ತಕ್ಷಣ ಪೂರ್ಣಗೊಳಿಸಿ ವಾಸಕ್ಕೆ ಬಿಟ್ಟುಕೊಡುವಂತೆ ಐಟಿಡಿಪಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದು, ಕೆಲಸ ಮುಗಿಸಿ ಶೀಘ್ರ ಬಿಟ್ಟುಕೊಡುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.
ವರದಿಯಿಂದ ಎಚ್ಚೆತ್ತ ಅಧಿಕಾರಿಗಳು
ಬ್ರಹ್ಮೇರಿ ಮೂಲನಿವಾಸಿಗಳ ಸಂಕಷ್ಟದ ಬದುಕು ಹೊರ ಪ್ರಪಂಚಕ್ಕೆ ತೆರೆದಿಡುವ ಕೆಲಸ ಮೊದಲು ಮಾಡಿದ್ದು ವಿಜಯವಾಣಿ. ವರದಿ ನಂತರ ಕಾಲನಿಗೆ ಉಡುಪಿ ಐಟಿಡಿಪಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ವಸ್ತು ಸ್ಥಿತಿ ಕಣ್ಣಾರೆ ಕಂಡಿದ್ದರು. ಕಾಲನಿ ವಾಸಿಗಳ ಸಮಸ್ಯೆ ಆಲಿಸಿದ ಅಧಿಕಾರಿಗಳು ಹೊಸ ಕೊಳವೆ ಬಾವಿ ಕೊರೆದು ಅದಕ್ಕೆ ಮೋಟರ್ ಅಳವಡಿಸಿ ನೀರಿನ ಸಮಸ್ಯೆ ಪರಿಹರಿಸಿದ್ದಾರೆ. ಮಳೆಗಾಲದ ನಂತರ ಟ್ಯಾಂಕ್ ಕಟ್ಟಿ ನೀರು ಪೂರೈಕೆ ಮಾಡುವ ಭರವಸೆ ಸಿಕ್ಕಿದೆ. ಆದರೆ ಮನೆ ಮಾತ್ರ ಹಾಗೆ ಉಳಿದಿದ್ದು, ಗೃಹ ಪ್ರವೇಶಕ್ಕಾಗಿ ಕಾಲನಿ ನಿವಾಸಿಗಳು ಕಾಯುತ್ತಿದ್ದಾರೆ.
ಹಳೇ ಮನೆ ಸಂಪೂರ್ಣ ಶಿಥಿಲಗೊಂಡಿದ್ದು, ಕಳೆದ ಮಳೆಗಾಲದಲ್ಲಿ ನಾವೇ ಅಲ್ಪ ಸ್ವಲ್ಪ ದುರಸ್ತಿ ಮಾಡಿದ್ದೆವು. ಹೇಗಿದ್ದರೂ ಹೊಸ ಮನೆ ನಿರ್ಮಾಣವಾಗುತ್ತಿದ್ದು, ಸಮಸ್ಯೆ ಬಗೆಹರಿಯುವ ನಿರೀಕ್ಷೆಯಲ್ಲಿದ್ದೆವು. ಆದರೆ ಮನೆ ಕೆಲಸ ಪೂರ್ಣವಾಗದೆ ಹಳೇ ಮನೆಯಲ್ಲಿ ಭಯದಲ್ಲಿ ದಿನ ಕಳೆಯಬೇಕಿದೆ. ನಮ್ಮ ಕಷ್ಟಕ್ಕೆ ಅಧಿಕಾರಿಗಳು ಸಹಕರಿಸಿದ್ದು, ಹಾಗೆ ನಮ್ಮ ಮನೆ ಕೆಲಸ ಸಂಪೂರ್ಣ ಮಾಡುವ ಮೂಲಕ ಹೊಸ ಮನೆ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು.
ಬೇಬಿ, ಫಲಾನುಭವಿ ಮಹಿಳೆ
ಕಳೆದ ನಾಲ್ಕು ವರ್ಷದ ಹಿಂದೆ ಮನೆ ನಿರ್ಮಾಣಕ್ಕೆ ಫೌಂಡೇಶನ್ ಹಾಕಿದ್ದು, ಇವತ್ತಿಗೂ ಮನೆ ಪೂರ್ಣವಾಗಿಲ್ಲ. ಹಳೇ ಮನೆ ಎಂದು ತಲೆ ಮೇಲೆ ಬೀಳುತ್ತದೋ ಎನ್ನುವ ಆತಂಕ ಬೇರೆ. ಮನೆಯಲ್ಲಿ ಮಕ್ಕಳು ಮರಿ ಇದ್ದು, ಭಯದಲ್ಲಿ ಕಾಲ ಕಳೆಯಬೇಕಿದೆ. ತಕ್ಷಣ ಬಾಕಿ ಕೆಲಸ ಮುಗಿಸಿ ಮನೆ ಬಿಟ್ಟುಕೊಟ್ಟರೆ ಪುಣ್ಯ ಬರುತ್ತದೆ.
ಬಡಿಯ, ಕಾಲನಿ ಹಿರಿಯ ಸದಸ್ಯ