

ವಿಜಯವಾಣಿ ಸುದ್ದಿಜಾಲ ಮಂಗಳೂರು
ಅವನತಿ ಅಂಚಿನಲ್ಲಿರುವ ಬುಡಕಟ್ಟು ಸಮುದಾಯಗಳಿಗೆ ವಿಶೇಷ ಒತ್ತು ನೀಡಿ ಅಗತ್ಯ ಸೌಲಭ್ಯ ಒದಗಿಸುವ ಉದ್ದೇಶದಿಂದ ಪ್ರಧಾನ ಮಂತ್ರಿಗಳ ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳ ಯೋಜನೆಯಡಿ ಹಮ್ಮಿಕೊಂಡಿರುವ ಅಭಿಯಾನದಡಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಒಟ್ಟು 243 ಕೊರಗ ಕುಟುಂಬಗಳು ಹೊಸ ಬಿಪಿಎಲ್ ರೇಷನ್ ಕಾರ್ಡು ಪಡೆದಿದ್ದಾರೆ.
ಈ ಕಾರ್ಯಕ್ರಮಕ್ಕೆ ಜನವರಿ 31 ಕೊನೆಯ ದಿನವಾಗಿತ್ತು. ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಇನ್ನು ಉಭಯ ಜಿಲ್ಲೆಗಳಲ್ಲಿ ಬಿಪಿಎಲ್ ರೇಷನ್ ಕಾರ್ಡು ಇಲ್ಲದ ಯಾವುದೇ ಕೊರಗ ಕುಟುಂಬವಿಲ್ಲ!
ವಿಶೇಷ ದುರ್ಬಲ ಬುಡಕಟ್ಟು ಸಮುದಾಯಗಳಾಗಿ ಕೇಂದ್ರ ಸರ್ಕಾರದಿಂದ ಗುರುತಿಸಲ್ಪಟ್ಟಿರುವ ಕೊರಗ ಹಾಗೂ ಜೇನುಕುರುಬ ಕುಟುಂಬಗಳಿಗೆ ಆದ್ಯತೆ ನೆಲೆಯಲ್ಲಿ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಹಾಗೂ ವಿತರಣೆ ಕಾರ್ಯ ಕಳೆದ ಡಿಸೆಂಬರ್ 24ರಂದು ಆರಂಭಗೊಂಡಿತ್ತು. ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 2025, ಜನವರಿ 31 ನಿಗಪಡಿಸಲಾಗಿತ್ತು.
ದ.ಕ. ಜಿಲ್ಲೆಯಲ್ಲಿ ಒಟ್ಟು 320 ಸದಸ್ಯರು ಇರುವ 159 ಕುಟುಂಬಗಳು ಹಾಗೂ ಉಡುಪಿ ಜಿಲ್ಲೆಯ 84 ಕುಟುಂಬಗಳು ಜನವರಿ 31ರ ತನಕ ಹೊಸ ಬಿಪಿಎಲ್ ರೇಷನ್ ಕಾರ್ಡ್ ಪಡೆದಿವೆ.
ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳ ಯೋಜನೆಯಡಿ ಗುತುತಿಸಲ್ಪಟ್ಟಿರುವ ಕೊರಗ ಕುಟುಂಬಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಿದ್ದು, ಅವುಗಳನ್ನು ಪಡೆಯಲು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮೊದಲಾದ ಸೌಲಭ್ಯಗಳು ಅತ್ಯಂತ ಅವಶ್ಯಕ. ಅರ್ಜಿ ಸಲ್ಲಿಕೆಗೂ ಸುಮಾರು 15 ದಿನಗಳ ಮೊದಲು ಐಟಿಡಿಪಿ ಇಲಾಖೆಯು ತಾಲೂಕು ಮಟ್ಟದಲ್ಲಿ ರೇಷನ್ ಕಾರ್ಡ್ ಹೊಂದಿರದ ಕೊರಗ ಕುಟುಂಬಗಳ ಅಗತ್ಯ ಅಂಕಿ ಅಂಶಗಳನ್ನು(ಹೆಸರು, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಹಾಗೂ ಆಧಾರ್ ಕಾರ್ಡ್) ಸಂಗ್ರಹಿಸಿ ಆಹಾರ ಇಲಾಖೆಗೆ ಸಲ್ಲಿಸಿತ್ತು. ಆ ಅಂಕಿ ಅಂಶಗಳನ್ನು ಇಲಾಖೆಯು ಕೇಂದ್ರ ಕಚೇರಿಗೆ ಕಳುಹಿಸಿ ಮ್ಯಾಪಿಂಗ್ ಕಾರ್ಯ ನಡೆಸಲಾಗಿತ್ತು. ಬಳಿಕ ಡಿ.24ರಿಂದ ಅರ್ಹ ಫಲಾನುಭವಿಗಳಿಂದ ಆನ್‌ಲೈನ್ ಅರ್ಜಿ ಪಡೆದು ಕಾರ್ಡ್ ವಿತರಿಸಲಾಗಿದೆ.
ರಾಜ್ಯದಲ್ಲಿ ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳಡಿ ಗುರುತಿಸಲ್ಪಟ್ಟಿರುವ ಜೇನುಕುರುಬ ಸಮುದಾಯ ಹೊಂದಿರುವ ಮೈಸೂರು, ಕೊಡಗು ಹಾಗೂ ಚಾಮರಾಜ ನಗರದಲ್ಲಿಯೂ ಅರ್ಹ ಫಲಾನುಭವಿಗಳಿಗೆ ರೇಷನ್ ಕಾರ್ಡ್ ವಿತರಣೆ ಕಾರ್ಯ ನಡೆಯುತ್ತಿದೆ. ಜೇನುಕುರುಬ ಹಾಗೂ ಕೊರಗ ಸಮುದಾಯದ ಒಟ್ಟು 1,670 ಪಿವಿಟಿಜಿ ಕುಟುಂಬಳಿಗೆ ರೇಷನ್ ಕಾರ್ಡ್ ಒದಗಿಸಲು ರಾಜ್ಯದಲ್ಲಿ ಕ್ರಮ ವಹಿಸಲಾಗಿದೆ. ಇದರಲ್ಲಿ ಮೈಸೂರಿನಲ್ಲಿ 365, ಕೊಡಗಿನಲ್ಲಿ 342 ಹಾಗೂ ಚಾಮರಾಜ ನಗರದಲ್ಲಿ 516 ಜೇನು ಕುರುಬ ಕುಟುಂಬಗಳು ಸೇರಿವೆ.
2011ರ ಜನಗಣತಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,235 ಕೊರಗ ಕುಟುಂಬಗಳಲ್ಲಿ 4,800 ಮಂದಿ ಸದಸ್ಯರು ಇದ್ದಾರೆ. ಉಡುಪಿಯಲ್ಲಿ 2,450 ಕೊರಗ ಕುಟುಂಬಗಳಲ್ಲಿ 9,500 ಸದಸ್ಯರು ಇದ್ದಾರೆ.
-----
ವಿವಿಧ ಕಡೆಗಳಲ್ಲಿ ಹಂಚಿ ಹೋಗಿರುವ ದಕ್ಷಿಣ ಕನ್ನಡದ ಕೊರಗ ಕುಟುಂಬಗಳನ್ನು ಹುಡುಕಿ ಪಡಿತರ ಚೀಟಿ ಒದಗಿಸುವ ಪ್ರಯತ್ನ ನಡೆದಿದೆ. ಸರ್ಕಾರದ ಇತರ ಸರ್ಕಾರಿ ಯೋಜನೆಗಳ ಜತೆ ಮನೆ ಇಲ್ಲದವರಿಗೆ ಮತ್ತು ಶಿಥಿಲಾವಸ್ಥೆಯ ಮನೆ ಹೊಂದಿರುವವರಿಗೆ ಹೊಸ ಮನೆ ನಿರ್ಮಿಸಲು 4.5 ಲಕ್ಷ ರೂ. ಆರ್ಥಿಕ ನೆರವು ದೊರೆಯುತ್ತದೆ. ಇದು ಮನೆ ನಿರ್ಮಿಸಲು ಕೊರಗ ಕುಟುಂಬಗಳಿಗೆ ಮಾತ್ರ ಲಭ್ಯವಿರುವ ಗರಿಷ್ಠ ಆರ್ಥಿಕ ನೆರವು. ಪೌಷ್ಟಿಕ ಆಹಾರ ಸಹಿತ ಅವರಿಗಾಗಿಯೇ ಇರುವ ವಿವಿಧ ಯೋಜನೆಗಳಿವೆ.
ಬಸವರಾಜು, ಐಟಿಡಿಪಿ ಅಧಿಕಾರಿ (ದ.ಕ.)