ಅನಾವರಣಗೊಂಡ ಕೊರಗ ಸಂಸ್ಕೃತಿ

dolu
ಕುಂಭಾಸಿಯಲ್ಲಿ ಕೊರಗ ಸಂಪ್ರಾದಯ ಅನಾವರಣಗೊಂಡಿತು. ಕೊರಗರ ಜೀವಂತಿಕೆಯ ಪರಿಕರಗಳಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಲಾಯಿತು.
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಕರಾವಳಿಯ ಆದಿವಾಸಿಗಳಾದ ಕೊರಗ ಸಮುದಾಯದ ಜನಸಂಖ್ಯೆ ಕಾಲಚಕ್ರ ಉರುಳಿದಂತೆ ಕ್ಷೀಣಿಸುತ್ತಾ ಸಾಗುತ್ತಿದೆ. ಕಾಡಿನ ಜತೆ ಅವರ ನಂಟು, ಕರಾವಳಿಯ ಬದುಕಿನ ಜತೆ ಹಾಸುಹೊಕ್ಕಾದ ಅವರ ನಡೆ-ನುಡಿ, ಆಚಾರ-ವಿಚಾರ, ಪರಿಶುದ್ಧ ಸಂಪ್ರಾದಾಯಗಳನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಕುಂಭಾಸಿಯ ಮಕ್ಕಳ ಮನೆಯಲ್ಲಿ ಕೊರಗ ಸಮುದಾಯದ ಸಂಸ್ಕೃತಿ ಹಾಗೂ ಸಂಪ್ರಾದಾಯ ಬೆಳಕಿನ ಹಬ್ಬ ದೀಪಾವಳಿ ಬೊಲ್ಪು ಎನ್ನುವ ಕಾರ್ಯಕ್ರಮದ ಮೂಲಕ ಮಂಗಳವಾರ ವಿಶಿಷ್ಟವಾಗಿ ಅನಾವರಣಗೊಂಡಿತು.

ಕೊರಗ ಸಮುದಾಯದ ಸಂಸ್ಕೃತಿ, ಸಂಪ್ರದಾಯಗಳನ್ನು ಬೆಳಕು ಚೆಲ್ಲುವ ಮೂಲಕ ಹಿರಿಯರು ಈ ಹಿಂದೆ ನಡೆಸಿದ ಜೀವನ ಪದ್ಧತಿ, ದೈವಗಳ ಆರಾಧನೆ, ಮಾನವೀಯ ಮೌಲ್ಯಗಳ ಪ್ರಾಕೃತಿಕ ಸಂಬಂಧ, ಬದುಕಿನ ಬುತ್ತಿಗೆ ದಾರಿ ತೋರಿಸಿದ ಪರಿಕರಗಳನ್ನು ತಯಾರಿಸುವ ಅವರ ಕರಕುಶಲ ಕಲೆಗಳ ವೈಶಿಷ್ಟೃವನ್ನು ಪೂಜಿಸುವ ಮೂಲಕ ಬೊಲ್ಪು ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂತು.

ವಿಶೇಷ ಭೋಜನ

ಹಿಂದೆ ಸಮುದಾಯದ ಜನರು ಹೊನ್ನೆಣ್ಣೆಯಲ್ಲಿ ದೀಪ ಬೆಳಗಿಸಿ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿದ್ದರು. ಈ ಒಂದು ಅನುಭವ ಇಂದಿನ ಮಕ್ಕಳಿಗೂ ಸಿಗಬೇಕು ಎನ್ನುವ ಕಾರಣಕ್ಕಾಗಿ ಕಾರ್ಯಕ್ರಮದ ಆಯೋಜಕರು ವಿಶೇಷವಾಗಿ ದೊಂದಿ ಬೆಳಕಿನಲ್ಲಿಯೇ ವಿಶೇಷ ಭೋಜನದ ವ್ಯವಸ್ಥೆ ಮಾಡಿದ್ದರು.

ಸಮುದಾಯದ ಏಳಿಗೆಗಾಗಿ ಪ್ರಾರ್ಥನೆ

ಹಿಂದಿನ ಕಾಲದಲ್ಲಿ ಕೊರಗ ಸಮುದಾಯ ಕೃಷಿ ಬೆಳೆದ ಸಂದರ್ಭ, ಭತ್ತ ಕಟಾವು ಮಾಡಿದ ಬಳಿಕ ಪ್ರಕೃತಿಗೆ ಪೂಜೆ ಸಲ್ಲಿಸುವ ವಿಧಾನವಿತ್ತು. ಆ ಸಂದರ್ಭ ಕೃಷಿಕರು ಭತ್ತ ಕಟಾವು ಮಾಡುವ ವೇಳೆ, ಭತ್ತ ಸಾಗಿಸುವ ವೇಳೆ ದಾರಿಯಲ್ಲಿ ಬಿದ್ದ ಭತ್ತವನ್ನು ಹೆಕ್ಕಿ ತಂದು ತಿಂಡಿ ತಯಾರಿಸಿ ಪ್ರಕೃತಿ ಮಾತೆಗೆ ಪೂಜೆ ಸಲ್ಲಿಸುತ್ತಿದ್ದರು. ಮೊದಲಿಗೆ ಆ ತಿಂಡಿಯನ್ನೇ ನೈವೇದ್ಯ ರೂಪದಲ್ಲಿ ಅರ್ಪಿಸುವ ಮೂಲಕ ಪೂಜಿಸಲಾಗುತ್ತಿತ್ತು. ಅದರಂತೆ ಇಲ್ಲಿಯೂ ತಮ್ಮ ಸಮುದಾಯದ ಪರಿಕರಗಳನ್ನು ಮೆರವಣಿಗೆ ಮೂಲಕ ತಂದು ಪ್ರಕೃತಿಯ ಮಡಿಲಿನಲ್ಲಿಟ್ಟು ಸಮುದಾಯದ ಏಳಿಗೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಡೋಲು ನಮ್ಮ ರಕ್ಷಕನಾದ ಮಹಾದೇವ. ಮುಂದೆಯೂ ಕೂಡ ಅವನು ನಮ್ಮ ಜತೆಗೆ ಇರಬೇಕು. ಬದುಕು ರೂಪಿಸುವುದಕ್ಕೆ ಬುಟ್ಟಿ ನಮಗೆ ಜೀವನದ ದಾರಿ ತೋರಿಸಿದೆ. ನಮ್ಮ ಅವಿಭಾಜ್ಯ ಅಂಗವಾದ ಕತ್ತಿಯು ಕೂಡ ನಮ್ಮ ಬದುಕು ರೂಪಿಸಲು ಮುಖ್ಯವಾಗಿತ್ತು. ಸಮಾಜದ ಪ್ರತಿಯೊಬ್ಬರಿಗೂ ಒಳಿತನ್ನು ಮಾಡಲಿ ಎನ್ನುವ ವಿಶೇಷ ಪ್ರಾರ್ಥನೆ ಮೂಲಕ ಮೊದಲಿಗೆ ಹುಭಾಶಿಕ ರಾಜ, ಕೊರಗ ತನಿಯ, ನಂದರಾಯನಿಗೆ ಪೂಜೆ ಸಲ್ಲಿಸಿ ನಮ್ಮ ದಿನ ಆರಂಭವಾಗುತ್ತದೆ. -ಗಣೇಶ್ ಬಾರ್ಕೂರು, ಕೊರಗ ಸಮುದಾಯ ಕಾನನದೊಳಗೆ ನಮ್ಮ ಹಿರಿಯರು ಕಟ್ಟಿಕೊಂಡ ಸಂಬಂಧವನ್ನು ಯುವ ಸಮೂಹಕ್ಕೆ ಪರಿಚಯಿಸುವ ಸಲುವಾಗಿ ಕಾಡಿನಿಂದ ತಂದ ಬೆತ್ತ, ಬಳ್ಳಿಯಿಂದ ತಯಾರಿಸಲಾದ ಅನ್ನ ಬಸಿಯುವ ತಟ್ಟಿ, ತಡಪೆ(ಮೊರ), ಕೊರಗಜ್ಜನ ಬುಟ್ಟಿ, ಜೀವನಕ್ಕೆ ಆಧಾರವಾದ ಕತ್ತಿ ಸೇರಿದಂತೆ ಡೋಲಿನಿಂದಲೇ ನಮ್ಮ ಹಿರಿಯರು ಶ್ರಮಜೀವಿಗಳಾಗಿ ಬದುಕು ಕಟ್ಟಿಕೊಂಡಿದ್ದರು ಎಂಬ ಕಾರಣಕ್ಕಾಗಿ ಪರಿಕರಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸುವ ಪರಿಯನ್ನು ಈ ಮಕ್ಕಳ ಮನೆಯಲ್ಲಿ ನಡೆಸಿಕೊಂಡು ಬರುತ್ತಿದ್ದೇವೆ. -ಶೇಖರ ಮರವಂತೆ ಕೊರಗ ಸಮುದಾಯ ಮುಖಂಡ ಆಧುನಿಕ ದೀಪಾವಳಿಯ ಸಂಭ್ರಮದ ನಡುವೆ ಕೊರಗ ಸಮುದಾಯದ ಸಂಪ್ರಾದಾಯ, ಭಾಷೆ ಮುಂದಿನ ದಿನದಲ್ಲಿ ಉಳಿಯಬೇಕು ಎನ್ನುವ ಕಾರಣದಿಂದ ಕುಂಭಾಸಿ ಮಕ್ಕಳ ಮನೆಯಲ್ಲಿ ವಿದ್ಯಾರ್ಥಿಗಳು, ಯುವ ಸಮೂಹ, ಸಮುದಾಯದ ಜನರ ನಡುವೆ ಈ ದೀಪಾವಳಿಯ ಸಂದರ್ಭ ಈ ಬೊಲ್ಪು ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇವೆ. -ಗಣೇಶ್ ವಿ. ಕುಂಭಾಸಿ ಮಕ್ಕಳ ಮನೆ ಕುಂದಾಪುರ ಮುಖ್ಯಸ್ಥ ಕೊರಗರ ಬದುಕಿನ ಜೀವನದ ಪ್ರತಿಯೊಂದು ಕ್ಷಣಗಳನ್ನು ಈ ಹಬ್ಬದ ಮೂಲಕ ತೋರಿಸಿದ್ದಾರೆ. ಇಂದಿನ ಕೊರಗ ಮಕ್ಕಳು ಮುಂದಿನ ಪೀಳಿಗೆಯ ಅಭಿವೃದ್ಧಿಗೆ ಮೆಟ್ಟಿಲಾಗಿ ನಿಲ್ಲಬೇಕು. ಅಳಿವಿನಂಚಿನಲ್ಲಿರುವ ಈ ಸಮುದಾಯಕ್ಕೆ ಶಿಕ್ಷಣವೇ ಒಂದು ಆಸ್ತಿ. ಶಿಕ್ಷಣದ ಜತೆಗೆ ನಮ್ಮ ಆಚಾರ, ವಿಚಾರ ಸಂಸ್ಕೃತಿಯನ್ನು ಉಳಿಸಿಕೊಂಡು ಧನಾತ್ಮಕವಾದ ಚಿಂತನೆ ಮೈಗೂಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. -ಕೆ.ರಘುಪತಿ ಭಟ್, ಮಾಜಿ ಶಾಸಕ https://www.vijayavani.net/awarded-to-hattiangadi-residential-school https://www.vijayavani.net/ground-waste-clearance

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net