ಸರ್ಕಾರಕ್ಕೆ ಕೇಳಿಸದೆ 'ಕೊರಗರ' ಕೂಗು..?

UDP-28-2-Koraga
ಉಡುಪಿ ಜಿಲ್ಲಾಧಿಕಾರಿ ಕಚೇರಿ ಬಳಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಕೊರಗ ಸಮುದಾಯದವರು.
Published on

ಬುಡಕಟ್ಟು ಜನರಿಗೆ ಸಮಸ್ಯೆಗಳ ಸರಣಿ | ಉದ್ಯೋಗ, ಭೂಮಿಗಾಗಿ ಧರಣಿ

ಪ್ರಶಾಂತ ಭಾಗ್ವತ, ಉಡುಪಿ
ಭಾರತದಲ್ಲಿ ಹಲವಾರು ಬುಡಕಟ್ಟು ಸಮುದಾಯಗಳಿದ್ದು, ಅವುಗಳಲ್ಲಿ ಕೊರಗ ಜನಾಂಗವೂ ಒಂದು. ಪರಿಶಿಷ್ಟ ಪಂಗಡದ ಈ ಸಮುದಾಯವು ಕರ್ನಾಟಕದಲ್ಲಿ ಮುಖ್ಯವಾಗಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕಂಡು ಬರುತ್ತಾರೆ.

ಭಾರತ ಸರ್ಕಾರವು 1986ರಲ್ಲಿ ದೇಶದಲ್ಲಿ 75 ರೀತಿಯ ಬುಡಕಟ್ಟು ಪಂಗಡವನ್ನು ರ್ನಿದಿಷ್ಟ ದುರ್ಬಲ ಬುಡಕಟ್ಟು ಗುಂಪು (ಪರ್ಟಿಕ್ಯುಲರ್ಲಿ ವುಲ್ನೆರೆಬಲ್​ ಟೆಬಲ್​ ಗ್ರೂಪ್​) ಎಂದು ವರ್ಗೀಕರಿಸಿದ್ದು, ಆ ಗುಂಪುಗಳಲ್ಲಿ ಈ ಕೊರಗ ಸಮುದಾಯವೂ ಒಂದು.

ಸಾಮಾಜಿಕ ಸ್ಥಿತಿ

ಸ್ವಾತಂತ್ರ್ಯ ಪೂರ್ವ 1901ರ ಜನಗಣತಿಯ ವರದಿ ಪ್ರಕಾರ ಕೊರಗರು ಬುಟ್ಟಿ ತಯಾರಿಸುವವರು ಮತ್ತು ಕಾರ್ಮಿಕರಲ್ಲಿ ಕೆಳಮಟ್ಟದ ಬುಡಕಟ್ಟು ಎಂದು ಗುರುತಿಸಲಾಗಿದೆ. 2011ರ ಜನಗಣತಿಯ ಪ್ರಕಾರ ಇವರ ಜನಸಂಖ್ಯೆ 16,376 ಇದೆ. ಇದರಲ್ಲಿ ಕರ್ನಾಟಕದಲ್ಲಿ 14,794, ಕೇರಳ ಕಾಸರಗೋಡಿನಲ್ಲಿ 1,582 ಜನರಿದ್ದಾರೆ. (ಉಡುಪಿಯಲ್ಲಿ 11,113 ಹಾಗೂ ದ.ಕ.ದಲ್ಲಿ 3,100 ಜನಸಂಖ್ಯೆ ಇದೆ.) ಪ್ರಸ್ತುತ ಇವರು ಸಮಾಜದಲ್ಲಿ ಸ್ವಚ್ಛತಾ ಕಾರ್ಯಗಳಿಗಷ್ಟೇ ಸೀಮಿತರಾಗಿದ್ದಾರೆ. ಗ್ರಾಮೀಣ ಭಾಗದ ಆಡಳಿತ ವ್ಯವಸ್ಥೆಯಲ್ಲಿ ಇಂದಿಗೂ ಅಸ್ಪೃಶ್ಯರಾಗಿಯೇ ಇದ್ದಾರೆ.

ಆರಂಭಗೊಂಡ ಸಂಘಟನೆ

ಹಿಂದುಳಿದವರು ಸುಶಿಕ್ಷಿತರಾಗಿ ಸಮಾಜಮುಖಿಯಾಗಬೇಕು ಎಂಬ ಸರ್ಕಾರದ ಹಾಗೂ ಪ್ರಾಜ್ಞರ ಮಾತಿನಿಂದ ಪ್ರಭಾವಕ್ಕೊಳಗಾದ ಈ ಸಮುದಾಯ ಶಿಕ್ಷಣಕ್ಕೆ ಆದ್ಯತೆ ನೀಡತೊಡಗಿತು. 1988ರ ನಂತರ ಇದಕ್ಕಾಗಿಯೇ ಕೊರಗ ಅಭಿವೃದ್ಧಿ ಸಂಗಳ ಒಕ್ಕೂಟ (ರಿ.) ಕರ್ನಾಟಕ-ಕೇರಳ ಸಂಘಟನೆ ಸ್ಥಾಪನೆಯಾಯಿತು. ಕುಟುಂಬದ ಪಾಲಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಕಳುಹಿಸಿದರು. ಅದರ ಫಲವಾಗಿ ಕೊರಗ ಸಮುದಾಯದಲ್ಲೂ ಇದೀಗ ಕನಿಷ್ಠ ಎಸ್​ಎಸ್​ಎಲ್​ಸಿ ತನಕ ಕಲಿತವರಿದ್ದಾರೆ. ಪಿಯುಸಿ, ಪದವಿ, ಸ್ನಾತಕೋತ್ತರ, ಬಿ.ಇಡಿ, ಡಿ.ಇಡಿ, ಎಂಎ ಇಂಗ್ಲಿಷ್​, ಎಲ್​ಎಲ್​ಬಿ ಮಾಡಿದವರೂ ಇದ್ದಾರೆ.

ಅಹೋರಾತ್ರಿ ಧರಣಿ

ಶಿಕ್ಷಣ ಪಡೆದ ಕೊರಗರ ಯುವಜನರಿಗೆ ಉದ್ಯೋಗ ನೀಡಲು ಸರ್ಕಾರ ಹಾಗೂ ಜಿಲ್ಲಾಡಳಿತ ಆಶ್ವಾಸನೆ ನೀಡಿದ್ದರೂ ರ್ನಿಲಕ್ಷ್ಯ ಮಾಡುತ್ತಿದೆ. ಗ್ರಾಪಂ, ಪುರಸಭೆ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಕೆಲಸ ಮಾಡುವುದೇ ಸರ್ಕಾರಿ ಕೆಲಸ ಎನ್ನುವಂತಾಗಿದೆ. ಸ್ವಚ್ಛತಾ ಕಾರ್ಯದಿಂದಾಗಿ ಅನೇಕ ಕಾಯಿಲೆಗಳಿಗೆ ತುತ್ತಾಗಿ ಜನಸಂಖ್ಯೆಯೂ ಕ್ಷೀಣಿಸುತ್ತಿದೆ. ಈ ಎಲ್ಲ ಹಿನ್ನೆಲೆಯಲ್ಲಿ ನೇರ ನೇಮಕಾತಿ ಮೂಲಕ ಸರ್ಕಾರಿ ಉದ್ಯೋಗ ಹಾಗೂ ಡಾ.ಮಹಮ್ಮದ್​ ಫೀರ್​ ವರದಿಯಂತೆ ಪ್ರತಿ ಕುಟುಂಬಕ್ಕೆ 2.5 ಎಕರೆ ಕೃಷಿ ಭೂಮಿ ಕೊಡುವಂತೆ ಒತ್ತಾಯಿಸಿ ಕೊರಗ ಸಮುದಾಯದವರು ಉಡುಪಿ ಜಿಲ್ಲಾಧಿಕಾರಿ ಕಚೇರಿ ಬಳಿ ಜು.22ರಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

UDP-28-2A-Koraga
ಡಿಸಿ ಕಚೇರಿಯ ಗೇಟ್​ ಬಳಿ ಡೋಲು ಬಡಿಯುತ್ತಿರುವ ಕೊರಗ ಸಮುದಾಯದವರು.

ಪಾಲನೆಯಾಗದ ರಾಷ್ಟ್ರಪತಿಯ ನಿರ್ದೇಶನ

ಉದ್ಯೋಗಾವಕಾಶ ಲಭಿಸದೇ ಇರುವುದರಿಂದ ಕೊರಗರು 2023 ಜುಲೈ 3ರಂದು ಬೆಂಗಳೂರಿಗೆ ಭೇಟಿ ನೀಡಿದ್ದ, ಬುಡಕಟ್ಟು ಜನಾಂಗದವರೇ ಆದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಂಡಿದ್ದರು. ಇವರಿಗೆ ಸ್ಪಂದಿಸಿದ್ದ ರಾಷ್ಟ್ರಪತಿ, ಕೊರಗ ಯುವಜನರಿಗೆ ಶೇ.100 ಉದ್ಯೋಗ ಭದ್ರತೆಗೆ ಕಾಲಬದ್ಧ ಕ್ರಿಯಾಯೋಜನೆ ರೂಪಿಸಿ, ಕಾರ್ಯರೂಪಕ್ಕೆ ತರುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ನಿರ್ದೇಶನ ಮಾಡಿದ್ದರು. ಬಳಿಕ ಇಲಾಖೆಯ ಮುಖ್ಯ ಕಾರ್ಯದರ್ಶಿ ಮಣಿವಣ್ಣನ್​, ಶೇ.100 ಉದ್ಯೋಗಕ್ಕೆ ಸಂಬಂಧಿಸಿ ಸರ್ವೇ ಕಾರ್ಯಕ್ಕೆ ಚಾಲನೆ ನೀಡಿದ್ದರು. ಆದರೆ, ಕೆಲವೇ ದಿನಗಳಲ್ಲಿ ಅವರು ಬೇರೆ ಇಲಾಖೆಗೆ ವರ್ಗಾವಣೆಯಾಗಿದ್ದು, ವರ್ಷಗಳೇ ಕಳೆದರೂ ಸಹ ರಾಷ್ಟ್ರಪತಿಯ ನಿರ್ದೇಶನ ಪಾಲನೆಯಾಗಿಲ್ಲ ಎನ್ನುವುದು ಧರಣಿ ನಿರತರ ಆರೋಪ.

ಉಡುಪಿ ಜಿಲ್ಲಾಡಳಿತಕ್ಕೂ ಇಕ್ಕಟ್ಟು

ಉಡುಪಿ ಜಿಲ್ಲೆಯ ಸುಮಾರು 500 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗಿದ್ದು, ಇನ್ನೂ 800ಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕಿದೆ. ತಹಸೀಲ್ದಾರರರಿಗೆ ಹಕ್ಕೊತ್ತಾಯದ ಅರ್ಜಿ ಸಲ್ಲಿಸಿ ವರ್ಷವೇ ಕಳೆದಿದ್ದರೂ ಸ್ಪಂದಿಸದ್ದರಿಂದ 2023ರ ಸೆ.20ರಂದು ಉಡುಪಿ ಡಿಸಿ ಕಚೇರಿ ಬಳಿ ಅಹೋರಾತ್ರಿ ಧರಣಿ ಆರಂಭಿಸಿದ್ದರು. ಈ ವೇಳೆ ಮನವಿ ಸ್ವೀಕರಿಸಿದ್ದ ಜಿಲ್ಲಾಧಿಕಾರಿ, 15 ದಿನದೊಳಗೆ ಸಭೆ ಕರೆದು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ವರ್ಷ ಕಳೆದರೂ ಕ್ರಮ ಕೈಗೊಳ್ಳದ್ದರಿಂದ ಜು.22ರಿಂದ ಕೊರಗರು ಮತ್ತೆ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಉಡುಪಿ ಜಿಲ್ಲಾಡಳಿತವೂ ಇಕ್ಕಟ್ಟಿಗೆ ಸಿಲುಕಿದೆ.

ನಾವು ಸ್ವಚ್ಛತೆ ಕಾರ್ಯಕ್ಕಷ್ಟೇ ಸೀಮಿತವೇ? ನಮ್ಮ ಬೇಡಿಕೆ ಈಡೇರುವವರೆಗೂ ಧರಣಿ ಮುಂದುವರಿಸುತ್ತೇವೆ. ಶಾಸಕರು, ಮಾಜಿ ಶಾಸಕರು ಬಂದು ಬೆಂಬಲ ಸೂಚಿಸದರೆ ಸಾಲದು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಬಂದು ನಮ್ಮ ಮನವಿ ಸ್ವೀಕರಿಸಿ, ಸಿಎಂ ಜತೆ ಮಾತನಾಡಲು ಅವಕಾಶ ಮಾಡಿಕೊಡಬೇಕು. ಕೊರಗರ ಸುಶಿಕ್ಷಿತ ಮಕ್ಕಳಿಗೆ ಸರ್ಕಾರದಿಂದ ಉದ್ಯೋಗ ಆದೇಶದ ಪ್ರತಿ ಕೈಸೇರುವವರೆಗೂ ನಾವು ಅಹೋರಾತ್ರಿ ಪ್ರತಿಭಟನೆ ಮುಂದುವರಿಸುತ್ತೇವೆ. | ಸುಶೀಲಾ ನಾಡ. ಅಧ್ಯಕ್ಷೆ, ಕೊರಗ ಅಭಿವೃದ್ಧಿ ಸಂಗಳ ಒಕ್ಕೂಟ (ರಿ.) ಕರ್ನಾಟಕ-ಕೇರಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net