

ಗುರುಪುರ: ಸರ್ಕಾರದ ಸವಲತ್ತುಗಳು ಎಲ್ಲರಿಗೂ ಸಿಗಬೇಕು ಎಂಬ ಮಾತು ಆಗಾಗ ಕೇಳಿಸುತ್ತಿರುತ್ತದೆ. ಆದರೆ ಅದು ಕೆಲವೊಮ್ಮೆ ವೇದಿಕೆಗಷ್ಟೇ ಸೀಮಿತ ಎಂಬುದಕ್ಕೆ ಜ್ವಲಂತ ಉದಾಹರಣೆ ಕುಪ್ಪೆಪದವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಕ್ಕೇರಿಯಲ್ಲಿದೆ.
ಕೊರಗ ಜನಾಂಗಕ್ಕೆ ಸೇರಿದ ಲೀಲಾ ಎಂಬುವರು ತಮ್ಮ ಜಾಗದಲ್ಲಿ ಸುಮಾರು 500 ಅಡಕೆ ಗಿಡ ನೆಟ್ಟು, ಸಮಗ್ರ ಗಿರಿಜನ ಅಭಿವೃದ್ಧಿ ನಿಗಮದ ಮೂಲಕ 2016-17ರಲ್ಲಿ ಕೊಳವೆಬಾವಿ ಮಂಜೂರು ಮಾಡಿಸಿಕೊಂಡಿದ್ದು, ಅದರಲ್ಲಿ ಉತ್ತಮ ನೀರು ಸಿಕ್ಕಿದೆ. ವಿದ್ಯುತ್ ಸಂಕರ್ಪಕ್ಕೆ ವ್ಯವಸ್ಥೆ ಮಾಡಿ, ನೀರು ಸಂಗ್ರಹಿಸಲು ಟ್ಯಾಂಕ್ ಕೂಡ ನಿರ್ಮಿಸಲಾಗಿದೆ. ಮುಂದೆ ನಡೆದಿರುವುದೆಲ್ಲವೂ ‘ನೀರಲ್ಲಿಟ್ಟ ಹೋಮ’ದಂಥ ಕತೆ.
2016-17ರಲ್ಲಿ ಕೊರೆಯಲಾದ ಹೊಸ ಬೋರ್‌ವೆಲ್‌ಗೆ ವಿದ್ಯುತ್ ಸಂಪರ್ಕ ನೀಡಲು ನಿರಾಕರಿಸಲಾಗಿದೆ. ಲೀಲಾಗೆ ಸೇರಿದ ಜಮೀನಿನ ಪಕ್ಕದಲ್ಲೇ 150 ಮೀಟರ್ ಅಂತರದಲ್ಲಿ ಕುಡಿಯುವ ನೀರಿನ ಬೋರ್‌ವೆಲ್ ಇರುವುದು ವಿದ್ಯುತ್ ಪೂರೈಕೆಗೆ ತೊಡಕುಂಟು ಮಾಡಿದೆ. ಅಡಕೆ ತೋಟಕ್ಕೆ ನೀರಿಗಾಗಿ ಕೊಳವೆಬಾವಿ ಕೊರೆಯಲು ಕುಪ್ಪೆಪದವು ಗ್ರಾಪಂ ಅಧಿಕಾರಿಗಳು ನಿರಾಕ್ಷೇಪಣಾ ಪತ್ರ ನೀಡಿದ ಬಳಿಕವೇ ಗಿರಿಜನ ಅಭಿವೃದ್ಧಿ ಇಲಾಖೆ ವತಿಯಿಂದ ಕೊರೆಯಲಾಗಿತ್ತು. ಕಾನೂನಾತ್ಮಕ ಪರಿಶೀಲನೆ ನಡೆದ ಬಳಿಕ, ಒಂದು ಬೋರ್‌ವೆಲ್ ಇರುವಲ್ಲಿಂದ 250 ಮೀಟರ್ ವ್ಯಾಪ್ತಿಯಲ್ಲಿ ಮತ್ತೊಂದನ್ನು ಕೊರೆಯುವಂತಿಲ್ಲ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವಂತಿಲ್ಲ ಎಂದರೆ ಏನು ಮಾಡಬೇಕು?
ಎಲ್ಲೂ 250 ಮೀಟರ್ ಅಂತರದಲ್ಲಿ ಒಂದಕ್ಕಿಂತ ಹೆಚ್ಚು ಕೊಳವೆಬಾವಿಗಳು ಇಲ್ಲವೇ ಎಂದು ಪ್ರಶ್ನಿಸಿದರೆ, ಯಾವ ಅಧಿಕಾರಿಯೂ ಉತ್ತರಿಸುವುದಿಲ್ಲ. ಸಂಬಂಧಿತ ಇಲಾಖೆಯವರು ಮಾನವೀಯ ನೆಲೆಯಲ್ಲಿ ಹೊಸ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ನೀಡಬಹುದಲ್ಲವೇ ಎನ್ನುತ್ತಾರೆ ಕೆಲವರು. ಪಕ್ಕದಲ್ಲೇ ನೀರು ಲಭ್ಯವಿದ್ದರೂ, ಅಡಕೆ ತೋಟ ಒಣಗುತ್ತಿದೆ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಹೊಸ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ನೀಡಬಹುದು ಎಂದು ಸ್ಥಳೀಯ ಜನಪ್ರತಿನಿಧಿಯೊಬ್ಬರು ಹೇಳಿದ್ದಾರೆ.
ನಾಲ್ಕು ವರ್ಷಗಳಿಂದ ವಿದ್ಯುತ್ ಸಂಪರ್ಕಕ್ಕೆ ಅಲೆದಾಡುತ್ತಿದ್ದೇನೆ. ಒಬ್ಬೊಬ್ಬ ಅಧಿಕಾರಿ ಒಂದೊಂದು ಕಾರಣ ನೀಡುತ್ತಿದ್ದಾರೆ. ಅಧಿಕಾರಿಗಳ ಹೇಳಿಕೆ ಮೇರೆಗೆ ಕೊರೆಯಲಾದ ಕೊಳವೆಬಾವಿ ವ್ಯರ್ಥವಾಗುತ್ತಿದೆ. ಇದಕ್ಕೆ ಹೊಣೆ ಯಾರು ಎಂದಾದರೂ ಕೇಳಬೇಕಲ್ಲವೇ?
-ಲೀಲಾ, ಕೊಳವೆಬಾವಿ ಮಾಡಿಸಿಕೊಂಡವರು
ಸಮಸ್ಯೆ ಕುರಿತು ಪರಿಶೀಲಿಸಿ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರಯತ್ನಿಸಲಾಗುವುದು. ಎಲ್ಲಿ ತಪ್ಪಾಗಿದೆ ಎಂಬುದನ್ನು ಮೊದಲು ಪರಿಶೀಲಿಸಲಾಗುವುದು.
-ಹೇಮಲತಾ, ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ ಉಪ-ನಿರ್ದೇಶಕಿ