

ಉಡುಪಿ : ಕೊರಗ ಸಮುದಾಯದ ಅನೇಕರಿಗೆ ಇನ್ನೂ ಉಚಿತ ಭೂಮಿ ದೊರೆತಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಿ ಸೂಕ್ತ ಸ್ಥಳ ಗುರುತಿಸಿ ಜಾಗ ನೀಡಬೇಕು. ಪ.ಜಾತಿ ಮತ್ತು ಪ.ವರ್ಗದಲ್ಲಿ ಅತ್ಯಂತ ಹಿಂದುಳಿದಿರುವ ಈ ಸಮಾಜ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಸಾಧನೆ ಮಾಡಬೇಕು. ಇದಕ್ಕೆ ಬೇಕಾದ ಸೌಲಭ್ಯಗಳನ್ನು ದೊರಕಿಸುವ ಅಗತ್ಯವಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಕೊರಗ ಸಂಘಟನೆಗಳ ಸಹಯೋಗದೊಂದಿಗೆ ಪುತ್ತೂರಿನಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಆದಿವಾಸಿ ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮುದಾಯ ಭವನ ಉದ್ಘಾಟಿಸಿದ ಶಾಸಕ ರಘುಪತಿ ಭಟ್ ಮಾತನಾಡಿ, ಜಿಲ್ಲೆಯ ಮೂಲ ನಿವಾಸಿಗಳಾದ ಕೊರಗ ಸಮುದಾಯದವಲ್ಲಿ ಆತ್ಮ ವಿಶ್ವಾಸ ಮೂಡಿಸಿ,ಅವರನ್ನು ಇತರ ಸಮುದಾಯಗಳೊಂದಿಗೆ ಮುಕ್ತವಾಗಿ ಬೆರೆಯಲು ಮಾನಸಿಕವಾಗಿ ಸದೃಢಗೊಳಿಸಲು ಎಲ್ಲಾ ಸಮುದಾಯದವರೂ ಪ್ರಯತ್ನಿಸಬೇಕು. ಕೊರದ ಸಮುದಾಯದ ಜನತೆಯೂ ಸಹ ಶಿಕ್ಷಣವಂತರಾಗಿ ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕು. ಕೊರಗ ಸಮುದಾಯದವರು ಕೀಳಿರಿಮೆಯನ್ನು ತೊರೆಯಲು ಶಿಕ್ಷಣದಿಂದ ಸಾಧ್ಯ. ಹೀಗಾಗಿ ಮಕ್ಕಳಿಗೆ ತಪ್ಪದೇ ಶಿಕ್ಷಣ ಕೊಡಿಸಬೇಕು. ಪ್ರಸ್ತುತ ನಿರ್ಮಿಸಿರುವ ಸಮುದಾಯ ಭವನವು ಕೊರಗ ಸಮುದಾಯದ ಆತ್ಮ ವಿಶ್ವಾಸದ ಸಂಕೇತವಾಗಿದ್ದು, ಈ ಭವನದಲ್ಲಿ ಸಭೆಗಳು, ಚರ್ಚೆಗಳು, ವಿಚಾರಗೋಷ್ಠಿಗಳು ನಡೆಯಲು ಅನುಕೂಲವಾಗುವಂತೆ ಸೂಕ್ತ ವ್ಯವಸ್ಥೆಗಳು ಮತ್ತು ತಾಂತ್ರಿಕ ಸೌಲಭ್ಯಗಳನ್ನು ಒದಗಿಸುವಂತೆ ಸೂಚಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್. ಮಾತನಾಡಿ, ಜಿಲ್ಲೆಯಲ್ಲಿ ಆಶ್ರಮಶಾಲೆಗಳಲ್ಲಿ ಉಚಿತ ಊಟ ವಸತಿಯೊಂದಿಗೆ ಉತ್ತಮ ಶಿಕ್ಷಣ ಸೌಲಭ್ಯಗಳಿದ್ದು, ತಮ್ಮ ಮಕ್ಕಳನ್ನು ಅಲ್ಲಿಗೆ ಸೇರ್ಪಡೆ ಮಾಡಬೇಕು. ಸಮುದಾಯದ ಸಮಗ್ರ ಅಧ್ಯಯನ ಕುರಿತಂತೆ ಸಮೀಕ್ಷೆ ನಡೆಸಲಾಗುತ್ತಿದ್ದು, ಇವರ ಸಮಗ್ರ ಶ್ರೇಯೋಭಿವೃದ್ದಿಗೆ ಜಿಲ್ಲಾಡಳಿತ ಬದ್ದವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕೊರಗ ಸಮುದಾಯದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಹಾಯಧನದ ಚೆಕ್ ಗಳನ್ನು ಶಾಸಕರು ವಿತರಿಸಿದರು.
ನಗರಸಭೆ ಅಧ್ಯಕ್ಷೆ ಸಮಿತ್ರಾ ನಾಯಕ್ , ಕುಂದಾಪುರ ಪುರಸಭೆ ಸದಸ್ಯ ಪ್ರಭಾಕರ್, ಉಡುಪಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ರಮೇಶ್, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಹಾಯಕ ಇಂಜಿನಿಯರ್ ರಾಮು, ಕೊರಗ ಸಮುದಾಯುದ ಬಾಬು ಪಾಂಗಾಳ, ಬೊಗ್ರ ಕೊರಗ, ಸಂಜೀವ ಕೊರಗ, ಸುಶೀಲ ನಾಡ, ಗೌರಿ ಕೊರಗ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ದಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ದೂದ್‌ಪೀರ್ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು.