

ನಂದಗುಡಿ: ಶಿವನಾಪುರ ಗ್ರಾಪಂ ವ್ಯಾಪ್ತಿಯ ಕೊರಡಹಳ್ಳಿಯಲ್ಲಿ ಹಲವು ದಶಕಗಳಿಂದ ಸಮರ್ಪಕ ರಸ್ತೆ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ. ಇಲ್ಲಿನ ರಸ್ತೆ ಗುಂಡಿಗಳಿಂದಾಗಿ ಬಂಡಿಗಳೂ ಸಾಗದಂತಹ ಪರಿಸ್ಥಿತಿ ಇದೆ. ಶಿವನಾಪುರ-ಚಿಕ್ಕನಹಳ್ಳಿ ಮಾರ್ಗವಾಗಿ ಕೋಲಾರ ರಾಷ್ಟ್ರಿಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಮಳೆ ಬಂದಾಗ ಕೆಸರುಗದ್ದೆಯಂತಾಗುತ್ತದೆ. ಇಲ್ಲಿ 45ಕ್ಕೂ ಅಧಿಕ ಮನೆಗಳಿದ್ದು, 200ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಮುಖ್ಯರಸ್ತೆಯಿಂದ ಈ ಮನೆಗಳಿಗೆ ತೆರಳಬೇಕಾದರೆ ಯಾತನೆ ಅನುಭವಿಸಬೇಕಿದೆ.
ಮಕ್ಕಳು ಶಾಲೆಗೆ ತೆರಳಬೇಕಾದರೆ 3 ಕಿ.ಮೀ. ದೂರದಲ್ಲಿರುವ ಶಿವನಾಪುರಕ್ಕೆ ಮತ್ತು 5 ಕಿ.ಮೀ. ದೂರದಲ್ಲಿರುವ ನಂದಗುಡಿಗೆ ಸಾಗಬೇಕಿದೆ. ಮಳೆಗಾಲದಲ್ಲಿ ಕೆಸರುಗದ್ದೆಯಂತಾಗುವ ರಸ್ತೆಯಲ್ಲಿ ಬಿದ್ದು ಗಾಯಗೊಂಡಿರುವ ನಿದರ್ಶನಗಳಿವೆ ಎನ್ನುತ್ತಾರೆ ಗ್ರಾಮಸ್ಥರು.
ಆಗಿದ್ದು ಭೂಮಿ ಪೂಜೆ ಮಾತ್ರ: ರಸ್ತೆೆ ಅಭಿವೃದ್ಧಿ ಮಾಡಲು ಹಲವು ಬಾರಿ ಭೂಮಿ ಪೂಜೆಯೇನೋ ನೆರವೇರಿದೆ. ಆದರೆ ನಾನಾ ಕಾರಣಗಳಿಂದ ಕಾಮಗಾರಿ ನಡೆಯದೇ ನನೆಗುದಿಗೆ ಬಿದ್ದಿದೆ. ಇದರಲ್ಲಿ ರಾಜಕೀಯ ನಡೆಯುತ್ತಿದೆ ಎಂಬುದು ಗ್ರಾಮಸ್ಥರ ದೂರಾಗಿದೆ.
ಅನುದಾನವೂ ಇಲ್ಲ: ರಸ್ತೆ ದುರಸ್ತಿ ಬಗ್ಗೆ ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿದರೂ ಕಾಳಜಿ ವಹಿಸಿಲ್ಲ. ತಾಪಂ, ಜಿಪಂ ಸದಸ್ಯರು ಚುನಾವಣೆ ಸಮಯದಲ್ಲಿ ಬಂದು ಹೋಗಿರುವುದು ಬಿಟ್ಟರೆ ಯಾವುದೇ ಅನುದಾನ ನೀಡಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಕೇವಲ ಚುನಾವಣೆ ವೇಳೆ ಮತ ಕೇಳಲು ಬರುವ ಅಭ್ಯರ್ಥಿಗಳು ಗೆದ್ದ ನಂತರ ಮೂಲಸೌಕರ್ಯ ಕಲ್ಪಿಸಲು ಮೀನಮೇಷ ಎಣಿಸುತ್ತಾರೆ. ಹಲವು ದಶಕಗಳಿಂದ ಗ್ರಾಮದ ರಸ್ತೆ ಪರಿಸ್ಥಿತಿ ಹೀಗೇ ಇದೆ. ಮುನಿಯಪ್ಪ, ಗ್ರಾಮಸ್ಥ, ಕೊರಡಹಳ್ಳಿ ಗ್ರಾಮದಲ್ಲಿ ಐದನೇ ತರಗತಿಗೆ ಮಾತ್ರ ಶಾಲೆ ಇದೆ. ಮುಂದಿನ ವಿದ್ಯಾಭ್ಯಾಸಕ್ಕಾಗಿ 3 ಕಿಮೀ ದೂರದ ಶಿವನಾಪುರ ಅಥವಾ 6 ಕಿ.ಮೀ ದೂರದ ನಂದಗುಡಿಗೆ ಹೋಗಬೇಕು. ಮಳೆ ಬಂದರೆ ರಸ್ತೆಯ ಗುಂಡಿಗಳಲ್ಲಿ ನೀರು ನಿಂತು ರಸ್ತೆ ದಾಟಲು ಸಾಹಸಪಡಬೇಕಿದೆ. ವೇದಾಂತ್, ವಿದ್ಯಾರ್ಥಿ, ಕೊರಡಹಳ್ಳಿ ನರೇಗಾದಡಿ ಕೊರಡಹಳ್ಳಿ ಗ್ರಾಮಕ್ಕೆ ಚರಂಡಿ, ದನದ ಕೊಟ್ಟಿಗೆ, ಸ್ಮಶಾನ ಅಭಿವೃದ್ಧಿ ಕೈಗೊಳ್ಳಲಾಗಿದ್ದು, ರಸ್ತೆ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಗೆ ಒಳಪಡುವುದರಿಂದ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ಚೇತನ್ ಕುಮಾರ್, ಪಿಡಿಒ, ಶಿವನಾಪುರ ಗ್ರಾಪಂ