ಅನುದಾನ ದುರ್ಬಳಕೆ; ಚಿಕ್ಕಬೆಣಕಲ್ ಗ್ರಾಪಂ ಪಿಡಿಒ ಅಮಾನತು: ಜಿಪಂ ಸಿಇಒ ಫೌಜಿಯಾ ತರನ್ನುಮ್ ಆದೇಶ

11112022 koppal FOUZIA TARNUM zp ceo
Published on


ಕೊಪ್ಪಳ: ಹದಿನೈದನೇ ಹಣಕಾಸು ಯೋಜನೆ ಅನುದಾನ ದುರ್ಬಳಕೆ ಆರೋಪದಡಿ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಗ್ರಾಪಂ ಪಿಡಿಒ ಯು.ಮಲ್ಲಿಕಾರ್ಜುನನನ್ನು ಅಮಾನತು ಮಾಡಿ ಜಿಪಂ ಸಿಇಒ ಫೌಜಿಯಾ ತರನ್ನುಮ್ ಆದೇಶಿಸಿದ್ದಾರೆ.

ಮಲ್ಲಿಕಾರ್ಜುನ ಹಣವಾಳ ಗ್ರಾಪಂ ಪಿಡಿಒ ಆಗಿದ್ದಾಗ 2021-22ನೇ ಸಾಲಿನ 15ನೇ ಹಣಕಾಸಿನಡಿ 44,79,786 ರೂ. ಬಳಕೆಯಾಗಿದ್ದು, ನಿಯಮ ಮೀರಿ ದುರ್ಬಳಕೆ ಮಾಡಲಾಗಿದೆ. ಬೀದಿದೀಪಕ್ಕೆ 11,26,438 ರೂ., ಕುಡಿವ ನೀರಿಗಾಗಿ 12,24,016 ರೂ., ಕಸ ವಿಲೇವಾರಿ ವಾಹನ ಖರೀದಿ 5,05,893 ರೂ. ಅನುದಾನ ವೆಚ್ಚ ಮಾಡಲಾಗಿದೆ. ಬೀದಿ ದೀಪಕ್ಕೆ 2.90 ಲಕ್ಷ ರೂ. ಬಳಕೆಗೆ ಅವಕಾಶವಿದ್ದು, ಬರೋಬ್ಬರಿ 11,26,438 ರೂ. ಬಳಸಲಾಗಿದೆ. ಗಂಗಾವತಿಯ ಅಂಬಿಕಾ ಎಲೆಕ್ಟ್ರಾನಿಕ್ಸ್, ರಮೇಶ ಎಲೆಕ್ಟ್ರಿಕಲ್ಸ್, ಗಗನ್ ಎಲೆಕ್ಟ್ರಿಕಲ್ಸ್ ಹೆಸರಿಗೆ ಬಿಲ್ ಮಾಡಿದ್ದಾರೆ.

ನೀರು ಸರಬರಾಜಿಗೆ ಕ್ರಿಯಾಯೋಜನೆಯಲ್ಲಿ 9,06,790 ರೂ. ಮೀಸಲಿದ್ದು, 12,24,016 ರೂ. ಬಳಸಲಾಗಿದೆ. ಅಂಬಿಕಾ ಎಲೆಕ್ಟ್ರಾನಿಕ್ಸ್ ಹಾಗೂ ಅಂಜಿನಾ ಎಂಟರ್‌ಪ್ರೈಸಸ್‌ಗೆ ಬಿಲ್ ಮಾಡಿದ್ದಾರೆ. 2022-23ನೇ ಸಾಲಿನಲ್ಲಿ 15ನೇ ಹಣಕಾಸಿನಡಿ 17,70,957 ರೂ. ಅನುದಾನ ಬಳಸಲಾಗಿದ್ದು, 4,66,246 ರೂ. ಬೀದಿ ದೀಪಕ್ಕೆ, 15,58,885 ರೂ. ನೀರು ಸರಬರಾಜಿಗೆ ಬಳಸಿದ್ದು ಬೆಳಕಿಗೆ ಬಂದಿದೆ. ಗ್ರಾಮದಲ್ಲಿ 338 ಬೀದಿ ದೀಪಗಳಿದ್ದು, ಒಂದೊಂದಕ್ಕೂ ಎಲ್‌ಇಡಿ ಬಲ್ಬ್ ಅಳವಡಿಸಿದರೂ ಅಷ್ಟು ಮೊತ್ತವಾಗುವುದಿಲ್ಲ. ಹೀಗಿದ್ದರೂ ನಿರ್ವಹಣೆ ಖರ್ಚು ತೋರಿಸಲಾಗಿದೆ.

ಇದಲ್ಲದೇ ಲ್ಯಾಪ್‌ಟಾಪ್ ಖರೀದಿ, ಕಂಪ್ಯೂಟರ್, ಪ್ರಿಂಟರ್, ಪೆಂಡಾಲ್ ಹಾಕುವುದು, ಜಯಂತಿ ಆಚರಣೆ ಇನ್ನಿತರ ಕಾಮಗಾರಿಗಳ ಹೆಸರಲ್ಲಿ ಬಿಲ್ ಪಾವತಿಸಲಾಗಿದೆ. ಯಾವುದೇ ಕಾಮಗಾರಿಗೆ ಕೆಪಿಟಿಟಿ ನಿಯಮಗಳನ್ನು ಪಾಲಿಸಿಲ್ಲ. ಯಾವೊಂದು ಕಾಮಗಾರಿಗೆ ಅಂದಾಜು ದರಪಟ್ಟಿ ಆಹ್ವಾನಿಸಿಲ್ಲ. ಕೆಲವೇ ಕೆಲ ಏಜೆನ್ಸಿಗಳು ಹಾಗೂ ಅಂಗಡಿಗಳಿಂದ ಕೈ ಬರಹದ ಬಿಲ್ ದಾಖಲಿಸಿದ್ದು, ಅವುಗಳಲ್ಲಿ ದಿನಾಂಕ ನಮೂದಿಸಿಲ್ಲ. ತನಿಖೆ ವೇಳೆ ಕೆಲ ದಾಖಲೆಗಳನ್ನು ಸಲ್ಲಿಸದೇ ಲೋಪ ಎಸಗಿರುವುದು ಖಚಿತಗೊಂಡಿದೆ. ಹೀಗಾಗಿ ಜಿಪಂ ಸಿಇಒ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net