ಹಳ್ಳಿಗಳಲ್ಲಿ ಆರ್‌ಒ ಪ್ಲಾಂಟ್ ದುರಸ್ತಿಗೊಳಿಸಿ: ಕೊಪ್ಪಳ ತಾಪಂ ಆಡಳಿತಾಧಿಕಾರಿ ಸೂಚನೆ

050123 Koppal TP Meeting
ಕೊಪ್ಪಳದಲ್ಲಿ ಗುರುವಾರ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
Published on

ಕೊಪ್ಪಳ: ಬೇಸಿಗೆ ಸಮೀಪಿಸುತ್ತಿದ್ದು ತಾಲೂಕಿನ ಎಲ್ಲ ಗ್ರಾಮಗಳಲ್ಲಿರುವ ಶುದ್ಧ ಕುಡಿವ ನೀರು ಘಟಕಗಳನ್ನು ದುರಸ್ತಿಗೊಳಿಸುವಂತೆ ಜಿಪಂ ಯೋಜನಾ ನಿರ್ದೇಶಕ, ತಾಪಂ ಆಡಳಿತಾಧಿಕಾರಿ ಟಿ.ಕೃಷ್ಣಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.

ನಗರ ತಾಪಂ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಯಾವ್ಯಾವ ಗ್ರಾಮದಲ್ಲಿ ಆರ್‌ಒ ಘಟಕಗಳಿವೆ? ಎಷ್ಟು ಸುಸ್ಥಿತಿ ಮತ್ತು ದುರಸ್ತಿಯಲ್ಲಿವೆ ಎಂಬ ವರದಿ ರಚಿಸಬೇಕು. ಕೆಟ್ಟಿರುವ ಘಟಕಗಳನ್ನು ರಿಪೇರಿ ಮಾಡಿಸಬೇಕು. ಅಂಗನವಾಡಿ, ಶಾಲೆಗಳಲ್ಲಿ ನರೇಗಾದಡಿ ಕೈಗೊಂಡ ಕಾಮಗಾರಿ ಪೂರ್ಣಗೊಂಡ ಬಗ್ಗೆ ವರದಿ ನೀಡಬೇಕು. ಬಾಕಿ ಕಾಮಗಾರಿ ಪಟ್ಟಿ ಮಾಡಿ ಜೆಜೆಎಂ ಎರಡನೇ ಹಂತದ ಕಾಮಗಾರಿಯನ್ನು ತ್ವರಿತವಾಗಿ ಮುಕ್ತಾಯಗೊಳಿಸಬೇಕು. ಎಲ್ಲ ಇಲಾಖೆ ಅಧಿಕಾರಿಗಳು ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

ತಾಪಂ ಇಒ ದುಂಡಪ್ಪ ತುರಾದಿ ಮಾತನಾಡಿ, ತಾಲೂಕಿನ ಹಲವು ಗ್ರಾಮಗಳಿಂದ ನಗರಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಇಲ್ಲದಿರುವ ಬಗ್ಗೆ ದೂರುಗಳು ಬಂದಿವೆ. ಕೂಡಲೇ ಸಾರಿಗೆ ಇಲಾಖೆ ಬಸ್ ಸೌಕರ್ಯ ಒದಗಿಸುವಂತೆ ಸೂಚಿಸಿದರು.

ಆರೋಗ್ಯ, ಶಿಕ್ಷಣ, ಕೃಷಿ, ತೋಟಗಾರಿಕೆ, ಪಶುಸಂಗೋಪನಾ, ರೇಷ್ಮೆ, ಶಿಶು ಅಭಿವೃದ್ಧಿ ಯೋಜನಾ ಇಲಾಖೆ, ಸಮಾಜ ಕಲ್ಯಾಣ, ಜೆಸ್ಕಾಂ ಅಧಿಕಾರಿಗಳು ಇಲಾಖೆ ಪ್ರಗತಿ ವರದಿ ಮಂಡಿಸಿದರು. ತಾಲೂಕು ಯೋಜನಾಧಿಕಾರಿ ರಾಜೇಸಾಬ್ ನದಾಫ್, ಲೆಕ್ಕಾಧಿಕಾರಿ ರವಿಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹನುಮಂತಪ್ಪ ಎಚ್., ಸಹಾಯಕ ನಿರ್ದೇಶಕರಾದ ಮಹೇಶ ಹಡಪದ, ಸೌಮ್ಯ, ನಾಮನಿರ್ದೇಶಿತ ಸದಸ್ಯರಾದ ಶರಣಪ್ಪ, ಜ್ಯೋತಿ ಮತ್ತು ಸಿಬ್ಬಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net