

ಕೊಪ್ಪಳ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಗುರುವಾರ ನಗರದ ಡಿಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಗ್ರಾೃಚುಟಿಗೆ ಅಂಗನವಾಡಿ ಕಾರ್ಯಕರ್ತೆಯರು ಅರ್ಹರೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆದರೆ, ಸರ್ಕಾರ ಅನುಷ್ಠಾನ ಮಾಡುತ್ತಿಲ್ಲ. ಮತ್ತೊಂದೆಡೆ ಅಧಿಕಾರಿಗಳು ಮನವಿ ಸ್ವೀಕರಿಸುತ್ತಿಲ್ಲ. ಐಸಿಡಿಎಸ್ ಮಾರ್ಗದರ್ಶಿ ಅನುಸಾರ 6 ಕೆಲಸಗಳನ್ನು ನಮ್ಮಿಂದ ಮಾಡಿಸಬೇಕು. ಆದರೆ, ಅನ್ಯ ಕೆಲಸಗಳನ್ನು ನಮ್ಮಿಂದ ಮಾಡಿಸುತ್ತಿದ್ದಾರೆ. ಇದರಿಂದ ಕಿರಿಕಿರಿಯಾಗುತ್ತಿದೆ. ಮಕ್ಕಳಿಗೆ ಪಾಠ ಮಾಡಲಾಗುವುದಿಲ್ಲ. ಬೆಳಗಿನ ಅವಧಿಯಲ್ಲಿ ಬಹುಪಾಲು ಕಾರ್ಯಗಳಗೆ ನಿಯೋಜಿಸುವುದರಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಅಳಲು ತೋಡಿಕೊಂಡರು.
ಅರ್ಹ ನೌಕರರಿಗೆ ಗ್ರಾೃಚುಟಿ ಪಾವತಿಸಬೇಕು. ಅಂಗನವಾಡಿಗಳಲ್ಲೇ ಪೂರ್ವಪ್ರಾಥಮಿಕ ಶಿಕ್ಷಣ ಮುಂದುವರೆಸಬೇಕು. ಕೇಂದ್ರದ ವೇಳಾಪಟ್ಟಿ ಬದಲಾಗಬೇಕು. ಮೊಬೈಲ್ ಹಾಗೂ ಹಾಜರಾತಿ ಪುಸ್ತಕ ಎರಡರಲ್ಲೂ ವಿವರ ದಾಖಲಿಸುವುದನ್ನು ಕೈಬಿಟ್ಟು ಒಂದನ್ನು ಅಳವಡಿಸಬೇಕು. ಅನಗತ್ಯ ಶಿಸ್ತುಕ್ರಮ ಜರುಗಿಸುವುದು ನಿಲ್ಲಿಸಬೇಕು. ಮಾರ್ಗಸೂಚಿಗೆ ಒಳಪಡದ ಕೆಲಸಗಳನ್ನು ಮಾಡಿಸಬಾರದು. ಸಮಯಕ್ಕೆ ಸರಿಯಾಗಿ ವೇತನ ಪಾವತಿಸಬೇಕು. ನ್ಯಾಯಯುತ ಮುಂಬಡ್ತಿ ನೀಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಸಂಘದ ಜಿಲ್ಲಾಧ್ಯಕ್ಷೆ ಎಂ.ಕಲಾವತಿ, ಪ್ರಧಾನ ಕಾರ್ಯದರ್ಶಿ ಗಿರಿಜಾ ಗಂಗಾವತಿ, ಖಜಾಂಚಿ ಲಲಿತಾ ಅರಳಿ, ಸಿಐಟಿಯು ಮುಖಂಡರಾದ ಕಾಸಿಂ ಸರ್ದಾರ, ನಿರುಪಾದಿ ಬೆಣಕಲ್, ನೌಕರರಾದ ಅನ್ನಪೂರ್ಣ, ಅಮರಮ್ಮ, ಶಿವಲೀಲಾ ಇತರರಿದ್ದರು.