ತಂಬಾಕು ಸೇವನೆಯಿಂದ ಪ್ರತಿ 6 ಸೆಕೆಂಡಿಗೆ ಒಬ್ಬ ಮೃತ - ಡಿಸಿ ಎಂ.ಸುಂದರೇಶ ಬಾಬು ಮಾಹಿತಿ

110123 Koppal Monitoring progress of Kotpa implementation
ಕೊಪ್ಪಳದಲ್ಲಿ ಮಂಗಳವಾರ ಡಿಸಿ ಎಂ.ಸುಂದರೇಶ ಬಾಬು ಅಧ್ಯಕ್ಷತೆಯಲ್ಲಿ ಕೊಟ್ಪಾ ಜಾರಿ ಪ್ರಗತಿ ಪರಿಶೀಲನೆ ನಡೆಯಿತು.
Published on

ಕೊಪ್ಪಳ: ತಂಬಾಕು ಸೇವನೆಯಿಂದ ಪ್ರತಿ 6 ಸೆಕೆಂಡಿಗೆ ಓಬ್ಬ ವ್ಯಕ್ತಿ ಮೃತಪಡುತ್ತಿದ್ದಾನೆ. ತಂಬಾಕಿನಿಂದಾಗುವ ದುಷ್ಪರಿಣಾಮ ಕುರಿತು ಜನರಲ್ಲಿ ಹೆಚ್ಚಿನ ಅರಿವು ಮೂಡಿಸಿ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಕೋಟ್ಪಾ 2023 ಅನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷಿದ್ಧ. ತಂಬಾಕು ಉತ್ಪನ್ನದ ನೆರ ಅಥವಾ ಪರೋಕ್ಷ ಜಾಹೀರಾತು, ಉತ್ತೇಜನ, ಪ್ರಾಯೋಜಕತ್ವ ಮಾಡುವಂತಿಲ್ಲ. ಅಪ್ರಾಪ್ತರು ತಂಬಾಕು ಉತ್ಪನ್ನ ಬಳಕೆ, ಮಾರಾಟ ಮಾಡುವುದು ತಡೆಯಿರಿ. ಈ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಮೂಡಿಸಿ. ಜಿಲ್ಲಾಸ್ಪತ್ರೆಯಲ್ಲಿ ತಂಬಾಕು ವ್ಯಸನ ಮುಕ್ತ ಕೇಂದ್ರವಿದ್ದು, ಅಗತ್ಯವಿರುವವರಿಗೆ ಆಪ್ತ ಸಮಾಲೋಚನೆ, ಚಿಕಿತ್ಸೆ ನೀಡಿ. ಜನರೂ ಕೇಂದ್ರದ ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದರು.

ಜಿಪಂ ಸಿಇಒ ಫೌಜಿಯಾ ತರನ್ನುಮ್ ಮಾತನಾಡಿ, ತಂಬಾಕಿನಿಂದ ಕ್ಯಾನ್ಸರ್, ಹೃದಯ, ಶ್ವಾಸ ಸಂಬಂಧಿ ಕಾಯಿಲೆಗಳು ಬರುತ್ತವೆ. ಧೂಮ ಸಹಿತ ತಂಬಾಕು ವಸ್ತುಗಳಲ್ಲಿ 7000 ರಾಸಾಯನಿಕಗಳಿದ್ದು, ಶೇ.68ರಷ್ಟು ಕ್ಯಾನ್ಸರ್‌ಕಾರಕ. ಧೂಮರಹಿತ ಉತ್ಪನ್ನಗಳಲ್ಲಿ 3095 ರಸಾಯನಿಕಗಳಿದ್ದು ಶೇ.28ರಷ್ಟು ಕ್ಯಾನ್ಸರ್ ತರುತ್ತವೆ. ಪ್ರತಿ ವರ್ಷ ವಿಶ್ವದಾದ್ಯಂತ 60 ಲಕ್ಷಕ್ಕಿಂತ ಹೆಚ್ಚು ಜನರು ತಂಬಾಕಿನಿಂದ ಉಂಟಾದ ಕಾಯಿಲೆಯಿಂದ ಮೃತಪಡುತ್ತಿದ್ದಾರೆ ಎಂದು ತಿಳಿಸಿದರು.

ಡಿಎಚ್‌ಒ ಡಾ.ಅಲಕನಂದಾ ಮಳಗಿ ಮಾತನಾಡಿ, ಜಿಲ್ಲೆಯಲ್ಲಿ ಕೋಟ್ಪಾ ಕಟ್ಟುನಿಟ್ಟಾಗಿ ಜಾರಿ ಮಾಡುತ್ತಿದ್ದು, ಏಪ್ರಿಲ್ 2022ರಿಂದ ಡಿಸೆಂಬರ್ ವರೆಗೆ ಸೆಕ್ಷನ್ 4ರಡಿ 430 ಪ್ರಕರಣಗಳನ್ನು ದಾಖಲಿಸಿ 58,200 ರೂ.ದಂಡ ವಸೂಲಿ ಮಾಡಲಾಗಿದೆ. ಸೆಕ್ಷನ್ 6(ಬಿ) ಅಡಿ 338 ಪ್ರಕರಣ ದಾಖಲಿಸಿ 38,800 ರೂ. ವಸೂಲಿ ಮಾಡಲಾಗಿದೆ. 1720 ಜನರಿಗೆ ಸಮಾಲೋಚನೆ ನಡೆಸಿದ್ದು, 878 ಜನರ ಆರೋಗ್ಯದ ಮೇಲೆ ನಿರಂತರ ನಿಗಾ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವೇಂದ್ರ ಪಂಡಿತ, ಡಿಡಿಪಿಐ ಎಂ.ಎ.ರಡ್ಡೇರ್, ಸಿಡಿಪಿಒ ರೋಹಿಣಿ ಕೋಟಗಾರ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಈಶ್ವರ ಸವಡಿ, ಜಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net