

ಕೊಪ್ಪಳ: ಆ ಮಕ್ಕಳು ವರ್ಷದ ಹಿಂದಷ್ಟೇ ತಂದೆಯನ್ನು ಕಳೆದುಕೊಂಡು ದುಃಖದಲ್ಲಿದ್ದರು. ಶನಿವಾರ ಸಂಬಂಧಿಯೊಬ್ಬರ ಹುಟ್ಟುಹಬ್ಬ ಮುಗಿಸಿ ಮನೆಗೆ ಹಿಂತಿರುಗುವಾಗ ಜವರಾಯನ ಆಟಕ್ಕೆ ಹೆತ್ತ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಸದ್ಯ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಚ್ಚರಗೊಂಡ ನಂತರ ಅಮ್ಮ ಎಲ್ಲಿ ಎಂದು ಕೇಳಿದರೆ ಏನು ಹೇಳುವುದೆಂದು ಸಂಬಂಧಿಗಳು ತಡಬಡಿಸುತ್ತಿರುವ ದೃಶ್ಯ ಎಂಥವರ ಕಣ್ಣಲ್ಲೂ ನೀರು ತರಿಸುವಂತಿತ್ತು.
ಇದು ಕುಕನೂರು ತಾಲೂಕಿನ ಭಾನಾಪುರ ಬಳಿ ಶನಿವಾರ ತಡರಾತ್ರಿ ಸ್ಕಾರ್ಪಿಯೋ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಬಂಧಿಕರ ಆಕ್ರಂದನ. ನಿವೃತ್ತ ಸೈನಿಕ, ಸದ್ಯ ಡಿಎಆರ್‌ನಲ್ಲಿ ಕೆಲಸ ಮಾಡುತ್ತಿರುವ ಶರಣಪ್ಪ ಕೊಪ್ಪದ್ ಅವರ ಮೊಮ್ಮಗಳ ಜನ್ಮದಿನ ಕಾರ್ಯಕ್ರಮವನ್ನು ಶನಿವಾರ ಕೊಪ್ಪಳದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಹಲಗೇರಿ ನಿವಾಸಿ ಪಾರವ್ವ ಮಕ್ಕಳಾದ ಬಸವರಾಜ, ಪುಟ್ಟರಾಜ ಹಾಗೂ ಭೂಮಿಕಾ ತಮ್ಮ ತಾಯಿ ಹಾಗೂ ಸಂಬಂಧಿಗಳೊಂದಿಗೆ ಬರ್ತಡೇ ಪಾರ್ಟಿಗೆ ಬಂದಿದ್ದರು. ಮಕ್ಕಳೊಡನೆ ಆಟವಾಡಿ, ಊಟ ಮಾಡಿ, ಇನ್ನೇನು ಮನೆ ಸೇರಬೇಕೆನ್ನುವಷ್ಟರಲ್ಲಿ ಮಕ್ಕಳ ಖುಷಿ ಕಸಿಯಲು ಬಂದ ಜವರಾಯ ತಾಯಿ ಪಾರವ್ವ (27)ಳನ್ನು ಹೊತ್ತೊಯ್ದಿದ್ದಾನೆ.
ಅಪಘಾತದಲ್ಲಿ ಬಸವರಾಜ (12)ಪಾರಾದರೆ, ಪುಟ್ಟರಾಜನ (8)ತಲೆಗೆ ಗಂಭೀರ ಗಾಯವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಭೂಮಿಕಾ(5) ಗಾಯಗೊಂಡು ಆಸ್ಪತ್ರೆ ಸೇರಿದ್ದಾಳೆ. ವರ್ಷದ ಹಿಂದಷ್ಟೆ ಈ ಮಕ್ಕಳು ತಂದೆ ಬೀರಪ್ಪನನ್ನು ಕಳೆದುಕೊಂಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಬೀರಪ್ಪನ ಅಗಲಿಕೆಯನ್ನು ಇನ್ನು ಕುಟುಂಬ ಮರೆತಿರಲಿಲ್ಲ. ಇದರ ಬೆನ್ನಲ್ಲೇ ಬೀರಪ್ಪ ತಾಯಿ (ಮಕ್ಕಳ ಅಜ್ಜಿ) ಕಣ್ಮುಚ್ಚಿದ್ದಾರೆ. ವರ್ಷದಲ್ಲೇ ಕುಟುಂಬದ ಇಬ್ಬರನ್ನು ಕಳೆದುಕೊಂಡ ಮಕ್ಕಳಿಗೆ ತಾಯಿಯೇ ಆಸರೆಯಾಗಿದ್ದಳು. ಎಲ್ಲ ದುಃಖ ಮರೆತು ಮಕ್ಕಳ ಭವಿಷ್ಯ ರೂಪಿಸಲು ಸಿದ್ಧವಾಗಿದ್ದಳು. ಇಷ್ಟಾದರೂ ಸಮಾಧಾನಗೊಳ್ಳದ ವಿಧಿ ಶನಿವಾರ ನಡೆದ ಅಪಘಾತದಲ್ಲಿ ಪಾರವ್ವನನ್ನು ಕರೆದೊಯ್ದಿದ್ದು, ಮೂರು ಮುದ್ದು ಮಕ್ಕಳನ್ನು ಅನಾಥ ಮಾಡಿರುವುದು ಎಂಥವರು ಅರಗಿಸಿಕೊಳ್ಳದಂತಹ ಸ್ಥಿತಿ ತಂದಿದ್ದಾನೆ.
ಒಂದೇ ಕುಟುಂಬದ ಐವರು ಮೃತಪಟ್ಟ ವಿಷಯ ಕೇಳಿ ಓಡೋಡಿ ಬಂದ ಬಿನ್ನಾಳ ಗ್ರಾಮಸ್ಥರು ಮಕ್ಕಳು, ಮಡಿದವರ ಸ್ಥಿತಿ ಕಂಡು ಮಮ್ಮಲ ಮರುಗಿದರು. ಭಾನುವಾರ ಮರೋಣತ್ತರ ಪರೀಕ್ಷೆ ನಡೆಸಿದ ನಂತರ ಗ್ರಾಮಸ್ಥರೆಲ್ಲ ಸೇರಿ ಮೃತದೇಹಗಳ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿಸಿದರು. ಕುಟುಂಬದವರನ್ನು ಕಳೆದುಕೊಂಡ ಸಂಬಂಧಿಗಳಿಗೆ ಸಮಾಧಾನ ಮಾಡಿದರು.
ಪುಟ್ಟರಾಜನ ಸ್ಥಿತಿ ಗಂಭೀರ
ರಾತ್ರಿ 10.30ಕ್ಕೆ ಕೊಪ್ಪಳದಿಂದ ಹೊರಟ ಸ್ಕಾರ್ಪಿಯೋ ವಾಹನದಲ್ಲಿ 10 ಜನರು ಕುಕನೂರು ತಾಲೂಕಿನ ಬಿನ್ನಾಳ ಗ್ರಾಮಕ್ಕೆ ತೆರಳುತ್ತಿದ್ದರು. ಭಾನಾಪುರ ಬಳಿ ವೇಗವಾಗಿ ಹೋಗುತ್ತಿದ್ದ ಸ್ಕಾರ್ಪಿಯೋ ಮುಂದಿನ ಲಾರಿಗೆ ಡಿಕ್ಕಿ ಹೊಡೆದಿದ್ದು, ಗಿರಿಜವ್ವ ಕೊಪ್ಪದ್(48), ದೇವಪ್ಪ ಕೊಪ್ಪದ್(54), ಪಾರವ್ವ ಹಲಗೇರಿ(27), ಶಾಂತವ್ವ ಗುಡ್ಲಾನೂರು (34), ಕಸ್ತೂರೆವ್ವ (20) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸವರಾಜ (12), ಪುಟ್ಟರಾಜ (8), ಭೂಮಿಕಾ (5), ಪಲ್ಲವಿ (20), ಚಾಲಕ ಹರ್ಷವರ್ಧನ್ ಚನ್ನಳ್ಳಿ (35) ತೀವ್ರವಾಗಿ ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುಟ್ಟರಾಜನ ಸ್ಥಿತಿ ಗಂಭೀರವಾಗಿದೆ.
ಗವಿಶ್ರೀ, ಆಚಾರ್ ಭೇಟಿ: ಅಪಘಾತ ವಿಷಯ ತಿಳಿಯುತ್ತಲೇ ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕುಟುಂಬ ವರ್ಗದವರನ್ನು ಸಂತೈಸಿದರು. ಇಂಥ ಘಟನೆಗಳು ನಡೆಯಬಾರದಿತ್ತು. ಮನಸ್ಸಿಗೆ ತೀವ್ರ ಆಘಾತ ತಂದಿದೆ ಎಂದು ಮರುಗಿದರು. ಸಿಎಂ ಬೊಮ್ಮಾಯಿ ಗಮನಕ್ಕೆ ತಂದು ಮೃತರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದರು. ಗವಿಮಠದ ಅಭಿನವ ಗವಿಶ್ರೀಗಳು ಆಸ್ಪತ್ರೆಗೆ ಆಗಮಿಸಿ ಅಪಘಾತದಲ್ಲಿ ಗಾಯಗೊಂಡ ಮಕ್ಕಳ ಸ್ಥಿತಿ ಕಂಡು ಮರುಕಪಟ್ಟರು. ಆರೋಗ್ಯ ವಿಚಾರಿಸಿ, ಕುಟುಂಬದವರಿಗೆ ಧೈರ್ಯ ಹೇಳಿದರು.