

ಕೊಪ್ಪಳ: ಭಾಗ್ಯನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಟೆಂಡರ್ ಕರೆದ ಕಾಮಗಾರಿಗಳಿಗೆ ಅನುಮೋದನೆ ದೊರೆಯುವ ಮೊದಲೇ ಕೆಲಸ ಆರಂಭಿಸಿದ್ದು, ಸಂಬಂಧಿಸಿದ ಅಧಿಕಾರಿಗಳು ತಕ್ಷಣ ನಿಲ್ಲಿಸಿ ಕ್ರಮ ಕೈಗೊಳ್ಳಬೇಕೆಂದು ಪಪಂ 18ನೇ ವಾರ್ಡ್ ಸದಸ್ಯ ಜಗದೀಶ ಮಾಲಗಿತ್ತಿ ಒತ್ತಾಯಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಪಂ 15ನೇ ಹಣಕಾಸಿನ ಉಳಿಕೆ ಅನುದಾನದಲ್ಲಿ ಎಫ್‌ಸಿಐ ಗೋದಾಮಿನಿಂದ ಕಿನ್ನಾಳ ರಸ್ತೆಯ ಬಸವೇಶ್ವರ ವೃತ್ತದವರೆಗೆ ಬೀದಿ ದೀಪ ಅಳವಡಿಕೆಗೆ ಕೆಲ ತಿಂಗಳ ಹಿಂದೆ 19.31 ಲಕ್ಷ ರೂ.ಗೆ ಟೆಂಡರ್ ಕರೆಯಲಾಗಿದೆ. ಶಾಂತಾ ಲಕಮಾಪುರ ಎಂಬುವವರಿಗೆ ಟೆಂಡರ್ ಆಗಿದೆ. ಆದರೆ, ಅವರು ನಿಧನ ಹೊಂದಿದ ಕಾರಣ ಕಾಮಗಾರಿಗೆ ಮರು ಟೆಂಡರ್ ಆಹ್ವಾನಿಸಿದ್ದಾರೆ. ಬಿಡ್ ಮಾಡಲು ಡಿ.29ವರೆಗೆ ಅವಕಾಶವಿದೆ. ಆದರೆ, ಡಿ.19ರಂದೇ ಕಾಮಗಾರಿಗೆ 19ನೇ ವಾರ್ಡ್ ಸದಸ್ಯೆ ಲಲಿತಾ ಡಂಬಳ ಅವರಿಂದ ಭೂಮಿಪೂಜೆ ನೆರವೇರಿಸಿ ಕಾಮಗಾರಿ ಆರಂಭಿಸಿದ್ದಾರೆ. ಈಗಾಗಲೇ ಅರ್ಧ ಕಾಮಗಾರಿ ಮುಗಿದಿದೆ. ಆದರೆ, ಗುತ್ತಿಗೆದಾರ ಮಹೇಶ ಹಳ್ಳಿಗುಡಿಗೆ ಟೆಂಡರ್ ನೀಡಿದ ದಾಖಲೆ ಹಾಗೂ ಕಾರ್ಯಾದೇಶವಿಲ್ಲವೆಂದು ತಿಳಿಸಿದರು.
18 ಮತ್ತು 19ನೇ ವಾರ್ಡ್‌ನಲ್ಲಿ ಕಾಮಗಾರಿ ನಡೆಯುತ್ತಿದೆ. ಈ ಬಗ್ಗೆ ನನ್ನ ಗಮನಕ್ಕಿಲ್ಲ. ಆದರೂ, ಕಾಮಗಾರಿ ಆರಂಭಿಸಿದ್ದರಿಂದ ಜನರಿಗೆ ಅನುಕೂಲವಾಗುವುದೆಂದು ಸುಮ್ಮನಿದ್ದೆವು. ಆದರೆ, ಕ್ರಿಯಾ ಯೋಜನೆ ರಚಿಸದೆ, ಗುತ್ತಿಗೆ ನೀಡದೆ ಕೆಲಸ ನಡೆಸುತ್ತಿರುವುದು ಅನುಮಾನ ಮೂಡಿಸಿದೆ. ಮುಖ್ಯಾಧಿಕಾರಿ ಸೇರಿ ಇತರ ಅಧಿಕಾರಿಗಳು ಯಾರಿಗೆ ಮಣಿದು ಕಾಮಗಾರಿ ನಡೆಸುತ್ತಿದ್ದಾರೆಂದು ತಿಳಿದಿಲ್ಲ. ಈ ಬಗ್ಗೆ ಪಪಂ ಆಡಳಿತಾಧಿಕಾರಿ ಅಮರೇಶ ಬಿರಾದಾರ, ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದೆಂದು ಮಾಹಿತಿ ನೀಡಿದರು. ಪಪಂ ಸದಸ್ಯ ವಾಸುದೇವ ಮೇಘರಾಜ ಇದ್ದರು.