ಕಕ ಅಭ್ಯರ್ಥಿಗಳಿಗೆ ನಿಯಮ ಸಡಿಲಿಸಿ: ಶಿಕ್ಷಕ ಹುದ್ದೆ ಆಕಾಂಕ್ಷಿ ಮೈಲಾರಪ್ಪ ಗುಡ್ಲಾನೂರ ಒತ್ತಾಯ

12112022 koppal mylarappa
Published on

ಕೊಪ್ಪಳ: ಶಿಕ್ಷಕರ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 227 ಗಣಿತ ಶಿಕ್ಷಕರ ಹುದ್ದೆಗಳು ಖಾಲಿ ಉಳಿಯಲಿವೆ. ಆದರೆ, ಸಿಇಟಿಯಲ್ಲಿ ಉತ್ತೀರ್ಣರಾಗಿ ಹುದ್ದೆಗೆ ಅರ್ಹತೆ ಪಡೆದಿರುವ 154 ಅಭ್ಯರ್ಥಿಗಳಿದ್ದು, ನಿಯಮ ಸಡಿಲಿಕೆ ಮಾಡಿ ನೇಮಕ ಮಾಡಿಕೊಳ್ಳಬೇಕೆಂದು ಅಭ್ಯರ್ಥಿ ಮೈಲಾರಪ್ಪ ಗುಡ್ಲಾನೂರ ಒತ್ತಾಯಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆಯಾ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ಅನುಸಾರ ಶಿಕ್ಷಕರ ನೇಮಕಾತಿ ನಡೆಸಲಾಗುತ್ತಿದೆ. ಸದ್ಯ ನಾವು ಆಯ್ಕೆ ಮಾಡಿಕೊಂಡ ಜಿಲ್ಲೆಯಲ್ಲಿ ಮಾತ್ರ ನಮಗೆ ನೇಮಕಾತಿಗೆ ಅವಕಾಶವಿದೆ. ಕೊಪ್ಪಳದಲ್ಲಿ ಗಣಿತ ವಿಷಯದಲ್ಲಿ 329 ಹುದ್ದೆಗಳು ಖಾಲಿ ಇದ್ದ ಕಾರಣ ನಮ್ಮ ಜಿಲ್ಲೆ, ವಿಜಯನಗರ, ಬಳ್ಳಾರಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಅರ್ಹತೆ ಪಡೆದಿದ್ದಾರೆ. ಇದರೊಂದಿಗೆ ಹೆಚ್ಚುವರಿಯಾಗಿ 123 ಜನರು ಹುದ್ದೆಗೆ ಅರ್ಹತೆ ಪಡೆದಿದ್ದೇವೆ. ಆದರೆ, ಖಾಲಿ ಹುದ್ದೆಗಳಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶದ ಇತರ ಜಿಲ್ಲೆಗಳಲ್ಲಿ ಹುದ್ದೆಗಳು ಖಾಲಿ ಇದ್ದು, ಅರ್ಹತೆ ಪಡೆದ ಅಭ್ಯರ್ಥಿಗಳಿಲ್ಲ. ಸರ್ಕಾರ ಮತ್ತೊಮ್ಮೆ ನೇಮಕಾತಿ ಪ್ರಕ್ರಿಯೆ ನಡೆಸುವುದಾಗಿ ತಿಳಿಸುತ್ತಿದೆ. ನಾವು ಸಹ ಪದವಿ ಹಾಗೂ ಟಿಇಟಿ, ಸಿಇಟಿ ಪರೀಕ್ಷೆ ಬರೆದು ಅರ್ಹತೆ ಪಡೆದಿದ್ದೇವೆ. ನಾವು ಕಕ ಭಾಗದ ಯಾವುದೇ ಜಿಲ್ಲೆಗೆ ಕಳಿಸಿದರೂ ಹೋಗಲು ಸಿದ್ಧರಿದ್ದೇವೆ. ಹೀಗಾಗಿ ಶಿಕ್ಷಣ ಇಲಾಖೆ ನಿಯಮ ಸಡಿಲಿಕೆ ಮಾಡಿ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.

ಸದ್ಯ ಯಾದಗಿರಿ ಜಿಲ್ಲೆಯಲ್ಲಿ 111, ಬಳ್ಳಾರಿ 59, ರಾಯಚೂರು 56 ಹಾಗೂ ಬೀದರ್‌ನಲ್ಲಿ 1ಗಣಿತ ಶಿಕ್ಷಕರ ಹುದ್ದೆ ಖಾಲಿ ಉಳಿದಿದೆ. ಕೊಪ್ಪಳದಲ್ಲಿ ಅರ್ಹತೆ ಹೊಂದಿದ 123, ವಿಜಯನಗರ 20 ಹಾಗೂ ಕಲಬುರ್ಗಿಯಲ್ಲಿ 11 ಸೇರಿ 154 ಅಭ್ಯರ್ಥಿಗಳಿದ್ದೇವೆ. ಹೀಗಾಗಿ ಖಾಲಿ 227 ಹುದ್ದೆಗಳನ್ನು ನಮಗೆ ನೀಡಿದರೂ ಇನ್ನು ಹುದ್ದೆಗಳು ಉಳಿಯಲಿವೆ. ಕಕಗೆ ವಿಶೇಷ ಸ್ಥಾನಮಾನವಿದ್ದು, ಅದರಡಿ ಸಡಿಲಿಕೆ ನೀಡಬೇಕು. ಈ ಭಾಗ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಗಣಿತ ಶಿಕ್ಷಕರ ಕೊರತೆ ಇದೆ. ಈ ಬಗ್ಗೆ ನಮ್ಮ ಜನಪ್ರತಿನಿಧಿಗಳಿಗೂ ಮನವಿ ಮಾಡಿದ್ದು, ಶಿಕ್ಷಣ ಸಚಿವರು ಆಸಕ್ತಿವಹಿಸಿ ನಮ್ಮ ಭವಿಷ್ಯಕ್ಕೆ ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿದರು. ಅಭ್ಯರ್ಥಿಗಳಾದ ಅಮರೇಶ ಶಶಿಮಠ, ರಘು ನಾಯಕ, ಮಲ್ಲಿಕಾರ್ಜುನ ಉಳ್ಳಾಗಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net