ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕ್ರಮವಹಿಸಿ: ಜಿಪಂ ಸಿಇಒ ಫೌಜಿಯಾ ತರನ್ನುಮ್ ಸೂಚನೆ

0402-Kpl-Ravi-5
Published on

ಕೊಪ್ಪಳ: ಜಿಲ್ಲೆಯ ಎಲ್ಲ ಶಾಲೆಗಳ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಒ ಫೌಜಿಯಾ ತರನ್ನುಮ್ ಸೂಚಿಸಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಶಿಕ್ಷಣ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ ಜ್ಞಾನ ಜ್ಯೋತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯಶಿಕ್ಷಕರು, ಸಹ ಶಿಕ್ಷಕರು ಒಂದು ತಂಡವಾಗಿ ಕೆಲಸ ಮಾಡಬೇಕು. ‘ಸಿ’ ಗ್ರೇಡ್ ಮಕ್ಕಳಿಗೆ ವಿಶೇಷ ಕಾಳಜಿ ವಹಿಸಿ ಬೆಳಗಿನ ಮತ್ತು ಸಾಯಂಕಾಲದ ತರಗತಿಗಳು, ಪ್ರತಿ ರವಿವಾರ ಪುನರಾವಲೋಕನ ತರಗತಿ, ಪರೀಕ್ಷಾ ಭಯ ನಿವಾರಣೆ ಹಾಗೂ ಪ್ರೇರಣಾ ಶಿಬಿರಗಳನ್ನು ಆಯೋಜಿಸಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ ಪರೀಕ್ಷೆಗೆ ಸಿದ್ಧರಾಗುವಂತೆ ಮಾಡಬೇಕು. ಜಿಲ್ಲಾ ಮಟ್ಟದಲ್ಲಿ 2 ಪೂರ್ವ ಸಿದ್ಧತಾ ಪರೀಕ್ಷೆ ಹಾಗೂ ರಾಜ್ಯ ಮಟ್ಟದಲ್ಲಿ 1 ಪೂರ್ವ ಸಿದ್ಧತಾ ಪರೀಕ್ಷೆ ನಡೆಸಿ ಫಲಿತಾಂಶ ವಿಶ್ಲೇಷಣೆ ನಡೆಸಬೇಕು. ರೆಡ್‌ಕ್ರಾಸ್ ಸಂಸ್ಥೆಯಿಂದ ಶಿಕ್ಷಕರಿಗೆ ಆರೋಗ್ಯ ಶಿಬಿರ ಆಯೋಜನೆ ಮತ್ತು ಗ್ರಾಪಂ ಮಟ್ಟದಲ್ಲಿ ನರೇಗಾ ಯೋಜನೆಯಡಿ ಶಾಲೆಗೆ ಬೇಕಾದ ಸೌಲಭ್ಯ ಪಡೆಯುವಂತೆ ಸೂಚಿಸಿದರು.

ಡಿಡಿಪಿಐ ಎಂ.ಎ.ರಡ್ಡೇರ್ ಮಾತನಾಡಿದರು. ಜಿಪಂ ಮುಖ್ಯಲೆಕ್ಕಾಧಿಕಾರಿ ಅಮೀನ್ ಅತ್ತಾರ್, ಡಿಡಿಪಿಯು ಮೃಣಾಲ ಸಾಹುಕಾರ್, ಡಿವೈಪಿಸಿ ಉಮೇಶ್ ಪೂಜಾರ್, ಬಿಇಒಗಳಾದ ಶಂಕರಯ್ಯ, ಪದ್ಮನಾಭ ಕರ್ಣಂ, ಸುರೇಂದ್ರ ಕಾಂಬಳೆ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಅನಿತಾ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಗೌಡ, ರಾಜ್ಯ ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಬಾಬುಸಾಬ ಲೈನದಾರ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಹರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net