

ಕೊಪ್ಪಳ: ಸಮಾಜದಲ್ಲಿ ಎಲ್ಲರೂ ಸ್ವತಂತ್ರ, ಒತ್ತಡರಹಿತವಾಗಿ ಬದುಕುವ ಹಕ್ಕಿದೆ. ಜೀತ ಪದ್ಧತಿಯಂತಹ ಅನಿಷ್ಟ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಸಮೀರ್ ಮುಲ್ಲಾ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೀತ ಪದ್ಧತಿ ನಿರ್ಮೂಲನೆ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ವಿವಿಧ ಆಯಾಮಗಳಲ್ಲಿ ಪದ್ಧತಿ ಆಚರಣೆಯಾಗುತ್ತಿರುತ್ತದೆ. ಅದನ್ನು ಸಂಬಂಧಿಸಿದ ಅಧಿಕಾರಿಗಳು ಪತ್ತೆ ಮಾಡಬೇಕು. ಜನರು ಈ ಬಗ್ಗೆ ಮಾಹಿತಿ ದೊರೆತಲ್ಲಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕು. ಎಲ್ಲರಿಗೂ ಸ್ವತಂತ್ರವಾಗಿ ಜೀವಿಸುವ ಹಕ್ಕಿದೆ. ಅವರ ಇಷ್ಟದಂತೆ ಬದುಕಲು ಸಂವಿಧಾನ ಅವಕಾಶ ನೀಡಿದೆ. ಯಾರನ್ನೂ ಬಲವಂತವಾಗಿ ದುಡಿಸಿಕೊಳ್ಳುವಂತಿಲ್ಲ. ಜಿಲ್ಲೆಯನ್ನು ಜೀತ ಪದ್ಧತಿ ಮುಕ್ತಗೊಳಿಸಲು ಎಲ್ಲರ ಸಹಕಾರ ಅಗತ್ಯ ಎಂದರು.
ಯುನಿಸೆಫ್ ಜಿಲ್ಲಾ ಸಂಯೋಜಕ ಹರೀಶ ಜೋಗಿ ಮಾತನಾಡಿ, ಜೀತ ಪದ್ಧತಿಯು ಭಾರತೀಯ ಸಮಾಜದಲ್ಲಿ ಬಹುವರ್ಷಗಳಿಂದ ಉಳಿದು ಬಂದಿದೆ. ಕೆಟ್ಟ ಪದ್ಧತಿ ನಿರ್ಮೂಲನೆಗೆ 1976ರಲ್ಲಿ ಕಾಯ್ದೆ ಜಾರಿ ಮಾಡಲಾಗಿದೆ. ಜಿಲ್ಲೆಯ ಗಿಣಿಗೇರಿ, ಭಾಗ್ಯನಗರ, ಕುಷ್ಟಗಿಯಲ್ಲಿ ಈ ಹಿಂದೆ ಜೀತ ಪದ್ಧತಿ ಬೆಳಕಿಗೆ ಬಂದಿದ್ದು, ಅವರನ್ನು ರಕ್ಷಿಸಿ ಪರಿಹಾರ ಕೊಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಗರಗ, ಅಧಿಕಾರಿಗಳಿಗೆ ಜೀತ ಪದ್ಧತಿ ನಿರ್ಮೂಲನೆ ಪ್ರತಿಜ್ಞಾ ವಿಧಿ ಬೋಧಿಸಿದರು. ವಾರ್ತಾ ಇಲಾಖೆಯಲ್ಲಿ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಇಲಾಖೆ ಸಿಬ್ಬಂದಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಪಂ ಯೋಜನಾ ನಿರ್ದೇಶಕ ಟಿ.ಕೃಷ್ಣಮೂರ್ತಿ, ಆಹಾರ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ, ಎಸಿ ಕಚೇರಿ ತಹಸೀಲ್ದಾರ್ ವಿನಾಯಕ, ಜಿಲ್ಲಾ ಬಾಲ ಕಾರ್ಮಿಕ ಯೋಜನೆ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡರ್, ಕಾರ್ಮಿಕ ನಿರೀಕ್ಷಕ ಶಿವಶಂಕರ್ ತಳವಾರ ಇತರರಿದ್ದರು.