

ಕೊಪ್ಪಳ: ಜಿಲ್ಲೆಯಲ್ಲಿ ಪ್ರತ್ಯೇಕ ವಿಶ್ವ ವಿದ್ಯಾಲಯ ಆರಂಭಿಸಬೇಕೆಂಬ ಜನರ ಬಹುದಿನದ ಕನಸು ನನಸಾಗಿದ್ದು, ಪ್ರತ್ಯೇಕ ವಿವಿ ಆರಂಭಕ್ಕೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಅ.10ರಂದು ಅಧಿಕೃತ ರಾಜ್ಯ ಪತ್ರಿಕೆ ಹೊರಡಿಸಿದ್ದು, ಇನ್ನು ಮುಂದೆ ಬಳ್ಳಾರಿ ವಿಜಯನಗರ ಶ್ರೀಕೃಷ್ಣ ದೇವರಾಯ ವಿವಿಯಿಂದ ಬೇರ್ಪಟ್ಟು ಕೊಪ್ಪಳ ಪ್ರತ್ಯೇಕ ವಿವಿ ಹೊಂದಲಿದೆ. ನೂತನ ವಿವಿ ವ್ಯಾಪ್ತಿಗೆ 40 ಕಾಲೇಜುಗಳನ್ನು ನೀಡಲಾಗಿದೆ. 2023-24ನೇ ಸಾಲಿನಿಂದ ಹೊಸ ವಿವಿಯಲ್ಲೇ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಲಿದೆ. ಇದರ ಬೆನ್ನಲ್ಲೇ ಉನ್ನತ ಶಿಕ್ಷಣ ಇಲಾಖೆ ಏಳು ವಿವಿಗಳಿಗೆ ವಿಶೇಷಾಧಿಕಾರಿಗಳ ನೇಮಕಕ್ಕೆ ಮುಂದಾಗಿದೆ. ಇನ್ನೊಂದು ವಾರದಲ್ಲಿ ಕೊಪ್ಪಳ ಸೇರಿ ಏಳು ವಿವಿಗೆ ವಿಶೇಷಾಧಿಕಾರಿಗಳ ನೇಮಕವಾಗಲಿದ್ದು, ಕಾರ್ಯಚಟುವಟಿಕೆ ಆರಂಭವಾಗಲಿವೆ. ನೂತನ ವಿವಿಗೆ ವಿಶೇಷಾಧಿಕಾರಿಯಾಗಲ ಬರಲು ಹಲವರು ತೆರೆಮರೆಯಲ್ಲಿ ಯತ್ನ ನಡೆಸಿದ್ದು, ಅಂತಿಮವಾಗಿ ಯಾರು ಬರಲಿದ್ದಾರೆಂಬ ಕುತೂಹಲ ಕೆರಳಿಸಿದೆ. ಮೊದಲು ಕಲ್ಯಾಣ ಕರ್ನಾಟಕ ಜಿಲ್ಲೆಗಳು ಕಲಬುರ್ಗಿ ವಿವಿ ವ್ಯಾಪ್ತಿಗೆ ಒಳಪಟ್ಟಿದ್ದವು. 2010ರಲ್ಲಿ ಬಳ್ಳಾರಿ ಶ್ರೀಕೃಷ್ಣ ದೇವರಾಯ ವಿವಿ ಆರಂಭವಾದಾಗ ಕೊಪ್ಪಳವನ್ನೂ ಸೇರಿಸಲಾಗಿತ್ತು. ದಶಕದ ಬಳಿಕ ಕೊಪ್ಪಳ ಪ್ರತ್ಯೇಕ ವಿವಿ ಹೊಂದುವಂತಾಗಿದೆ.