ಪ್ರವೀಣ್ ನೆಟ್ಟಾರು ಹತ್ಯೆಗೆ ಖಂಡನೆ: ಕೊಪ್ಪಳದಲ್ಲಿ ಹಿಂದುಪರ ಸಂಘಟನೆ ಮುಖಂಡರ ಪ್ರತಿಭಟನೆ

IMG-20220727-WA0024.jpg
Published on

ಕೊಪ್ಪಳ: ಹಿಂದುಪರ ಸಂಘಟನೆ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ವಿವಿಧ ಹಿಂದುಪರ ಸಂಘಟನೆ ಮುಖಂಡರು ಬುಧವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪ್ರವೀಣ ಹತ್ಯೆ ನಿಜಕ್ಕೂ ಆಘಾತಕಾರಿ. ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಸರ್ಕಾರ, ಕೊಲೆಗಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯದಲ್ಲಿ ಪದೇಪದೆ ಹಿಂದು ಕಾರ್ಯಕರ್ತರ ಕೊಲೆಗಳು ನಡೆಯುತ್ತಿದ್ದರೂ ಕಾನೂನು ಕ್ರಮ ಕೈಗೊಳ್ಳುವಲ್ಲಿ ಸಿಎಂ ಬೊಮ್ಮಾಯಿ, ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ. ಎಸ್‌ಡಿಪಿಐ ಮುಂತಾದ ಹಿಂದು ವಿರೊಧಿ ಸಂಘಟನೆಗಳು ಹಿಂದು ಕಾರ್ಯಕರ್ತರನ್ನು ನಿರಂತರವಾಗಿ ಹತ್ಯೆ ಮಾಡುತ್ತಿದ್ದಾರೆ. ಇಷ್ಟಾದರೂ ಇಂಥ ಸಂಘಟನೆಗಳನ್ನು ನಿಷೇಧಿಸಲು ಸರ್ಕಾರ ಮನಸ್ಸು ಮಾಡುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಹತ್ಯೆ ಮಾಡಿದವರನ್ನು ಉತ್ತರ ಪ್ರದೇಶ ಸರ್ಕಾರದ ಮಾದರಿಯಲ್ಲಿ ಎನ್‌ಕೌಂಟರ್ ಮಾಡಬೇಕು. ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಂಡಲ್ಲಿ ಮಾತ್ರ ಪ್ರವೀಣ್ ಆತ್ಮಕ್ಕೆ ಶಾಂತಿ ಸಿಗುತ್ತದೆ. ಹಿಂದು ಕಾರ್ಯಕರ್ತರ ಹತ್ಯೆಗೆ ಕಾರಣವಾಗಿರುವ ಎಸ್‌ಡಿಪಿಐ ಮುಂತಾದ ಸಂಘಟನೆಗಳಿಗೆ ತಕ್ಷಣ ನಿಷೇಧ ಹೇರಬೇಕೆಂದು ಆಗ್ರಹಿಸಿದರು. ಮುಖಂಡರಾದ ಗವಿಸಿದ್ದಪ್ಪ ಜಂತಗಲ್, ಉಮೇಶ ಕೊಡ್ಲೆಕರ್, ರವಿಚಂದ್ರ ಮಾಲಿಪಾಟೀಲ್, ರಾಕೇಶ ಪಾನಘಂಟಿ, ಆನಂದ ಆರ್ಶಿತ್, ಗವಿ ಗೋರವರ್, ದೀಪಕ ಹಿರೇಮಠ, ಅಕ್ಷಯ ಜ್ಞ್ಞಾನಮೋಠೆ, ಕಿರಣ ಹೂಗಾರ, ಶರಣು ಸಚಿನ್ ಇತರರಿದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net